ADVERTISEMENT

ಭಾವೈಕ್ಯ ತಾಣ ಜಮಾಲ್ ಷಾ ವಲಿ ದರ್ಗಾ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2018, 7:27 IST
Last Updated 4 ಫೆಬ್ರುವರಿ 2018, 7:27 IST
ಡಂಬಳ ಗ್ರಾಮದ ಹಜರತ್ ಜಮಾಲ್ ಷಾ ವಲಿ ದರ್ಗಾ
ಡಂಬಳ ಗ್ರಾಮದ ಹಜರತ್ ಜಮಾಲ್ ಷಾ ವಲಿ ದರ್ಗಾ   

ಗದಗ: ಸೂಫಿ ಸಂತ, ತೋಂಟದ ಮದರ್ಧನಾರೀಶ್ವರರ ಪರಮಭಕ್ತ ರಾಗಿದ್ದ ಹಜರತ್ ಜಮಾಲ್ ಷಾ ವಲಿ ಉರುಸು ಫೆ.4ರಂದು ನಡೆಯಲಿದೆ. ಫೆ. 5ರಂದು ಜಿಯಾರತ್ ಜರುಗಲಿದೆ.

ಈ ದರ್ಗಾ ಸಾವಿರಾರು ಭಕ್ತರ ಆರಾಧನಾ ಕೇಂದ್ರ. ಭಾವೈಕ್ಯದ ನೆಲೆ. ಶ್ಯಾವಲಿ ಶರಣರು 17ನೇ ಶತಮಾನದಲ್ಲಿ ಡಂಬಳದ ತೋಂಟದಾರ್ಯ ಮಠದ 9ನೇ ಪೀಠಾಧಿಪತಿ ಮದರ್ಧನಾರೀಶ್ವರರ ಕುದುರೆ ಸೇವಕರಾಗಿ ಬಂದು, ನಂತರ ಅವರ ಶಿಷ್ಯರಾಗಿ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದರು. ಅವರು ನಿಧನರಾದ ಸಂದರ್ಭದಲ್ಲಿ, ಅವರ ಗದ್ದುಗೆ ತೋಂಟದಾರ್ಯ ಮಠದ ಎಡಗಡೆ ಇರಬೇಕು ಎಂದು ಭಕ್ತರು ಭೂಮಿ ದಾನ ನೀಡಿದರು.

ರೊಟ್ಟಿ ಜಾತ್ರೆಯಾದ ಮಾರನೆಯ ದಿನ ಮಠದ ಪಕ್ಕದಲ್ಲಿ ಇರುವ ಜಮಾಲ್ ಷಾ ವಲಿ ದರ್ಗಾದಲ್ಲಿ ಉರುಸ್ ಆಚರಣೆ. ಇಲ್ಲಿಗೆ ಶ್ರೀಮಠದಿಂದಲೇ ನೈವೇದ್ಯ ಹೋಗುತ್ತದೆ.

ADVERTISEMENT

ಅಲ್ಲದೆ ಜಾತ್ರೆಗಾಗಿ ಶ್ರೀಮಠಕ್ಕೆ ಸುಣ್ಣ- ಬಣ್ಣ ಬಳಿಯುವ ಸಮಯದಲ್ಲಿಯೇ ದರ್ಗಾಕ್ಕೂ ಅಲಂಕಾರ ಮಾಡಲಾಗುತ್ತದೆ. ಉರುಸ್ ದಿನ ಊರಿನ ರೈತಾಪಿ ಜನರೆಲ್ಲ ತಮ್ಮ ಜಾನುವಾರುಗಳನ್ನು ಹೊಡೆದುಕೊಂಡು ಬಂದು ದರ್ಗಾದ ಸುತ್ತ ಪ್ರದಕ್ಷಿಣೆ ಹಾಕಿಸುತ್ತಾರೆ. ‘ಈ ತಾಣಗಳು ತಲೆಮಾರುಗಳಿಂದ ಕೋಮುಸೌರ್ಹಾದತೆ ಸಾರುತ್ತ ಬಂದಿದೆ’ ಎನ್ನುತ್ತಾರೆ ಗ್ರಾಮದ ಹಿರಿಯರಾದ ಜಂಧಿಸಾಬ್ ಸಕರ್ವಾಸ ಹಾಗೂ ಬಸೀರಅಹ್ಮದ ತಾಂಬೋಟಿ.

ಜಮಾಲ್ ಷಾ ವಲಿ ಜಾನುವಾರುಗಳ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಈಗಲೂ ಗ್ರಾಮದಲ್ಲಿ ರಾಸುಗಳಿಗೆ ರೋಗ ಬಂದರೆ, ದರ್ಗಾದ ಸುತ್ತ ಪ್ರದಕ್ಷಿಣೆ ಹಾಕಿದರೆ, ಗುಣಮುಖವಾಗುತ್ತದೆ ಎಂಬ ನಂಬಿಕೆ ಇದ್ದು, ಈ ಸಂಪ್ರದಾಯ ಮುಂದುವರಿದಿದೆ. ಭಕ್ತರಿಂದ ಅಂದಾಜು ₹30 ಲಕ್ಷ ವಂತಿಗೆ ಪಡೆದು ದರ್ಗಾವನ್ನು ಚಿತ್ರಗಳಿಂದ ಅಲಂಕರಿಸಲಾಗಿದೆ. ಬೀಳಗಿ ತಾಲ್ಲೂಕಿನ ಅಲ್ಲಾಸಾಬ್ ನದಾಫ್ ಅವರ ಕಲಾಶ್ರೀಮಂತಿಕೆ ಇಲ್ಲಿ ಅನಾವರಣಗೊಂಡಿದೆ. ಹಿಂದು ಮುಸ್ಲಿಂ ಭಾವೈಕ್ಯತೆಯ ಚಿತ್ರಗಳು, ಕಮಲ, ಕುದುರೆಯ ಚಿತ್ರವು ಗಮನ ಸೆಳೆಯುತ್ತದೆ.

ಮೂರು ದಿನಗಳ ಕಾಲ ನಡೆಯುವ ದರ್ಗಾದ ಧಾರ್ಮಿಕ ಕಾರ್ಯಕ್ರಮದಲ್ಲಿ ರಿವಾಯತ್‌ ಪದಗಳು, ಕವ್ವಾಲಿ ಹಾಡುಗಳು, ಕೋಲಾಟ, ಡೊಳ್ಳಿನಪದ, ಜನಪದ ಗೀತೆ, ಗೀಗೀಪದ, ಲಾವಣಿ ಹೀಗೆ ಕಲಾ ಶ್ರೀಮಂತಿಕೆ ಅನಾವರಣಗೊಳ್ಳುತ್ತದೆ ಎನ್ನುತ್ತಾರೆ ದರ್ಗಾದ ಆಡಳಿತ ಮಂಡಳಿ ಸದಸ್ಯರು.
–ಲಕ್ಷ್ಮಣ ಎಚ್. ದೊಡ್ಡಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.