ಗದಗ: ತ್ಯಾಗ, ಬಲಿದಾನಗಳ ಸ್ಮರಣೆಯ ಹಬ್ಬವಾದ ಬಕ್ರೀದ್ (ಈದ್ ಉಲ್ ಅದಾ) ಅನ್ನು ಅವಳಿ ನಗರದ ಮುಸ್ಲಿಮರು ಜನರು ವಿಜೃಂಭಣೆಯಿಂದ ಆಚರಿಸಿದರು.
ಶನಿವಾರ ಬೆಳಿಗ್ಗೆ ಹೊಸ ದಿರಿಸು ಧರಿಸಿ ‘ತಕ್ಭೀರ್’ ಮೊಳಗಿಸುತ್ತಾ ಮಸೀದಿ, ಈದ್ಗಾಗಳತ್ತ ಹೆಜ್ಜೆ ಹಾಕಿದರು. ಬಳಿಕ ಎಲ್ಲರೂ ಒಂದೆಡೆ ಸೇರಿ ಸಾಮೂಹಿಕ ಈದ್ ನಮಾಜ್ ಮಾಡಿದರು.
ಜಾಮೀಯಾ ಮಸೀದಿಯ ಮುಸ್ಲಿಂ ಧರ್ಮಗುರುಗಳು ಪ್ರಾರ್ಥನೆ ಮಾಡಿ, ‘ಮುಸ್ಲಿಮರು ತ್ಯಾಗ, ಬಲಿದಾನ, ಶಾಂತಿ, ಸಹೋದರತೆ ಮತ್ತು ಏಕತೆ ಸಂದೇಶ ಪಾಲಿಸುವ ಮೂಲಕ ಎಲ್ಲರೂ ಅಲ್ಹಾಹುವಿನ ಪ್ರೀತಿಗೆ ಪಾತ್ರರಾಗಬೇಕು. ವ್ಯಕ್ತಿತ್ವದಲ್ಲೂ ಅದನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಧರ್ಮಸಂದೇಶ ನೀಡಿದರು.
ರಾಜ್ಯದಲ್ಲಿ ಉತ್ತಮವಾಗಿ ಮಳೆ ಆಗಬೇಕು. ಸಕಾಲದಲ್ಲಿ ಮಳೆಯಾದರೆ ರೈತರಿಗೆ ಹಾಗೂ ವ್ಯಾಪಾರಿಗಳಿಗೆ ಅನೂಕುಲವಾಗುತ್ತದೆ ಎಂದು ಮುಸ್ಲಿಂ ಸಮಾಜದವರು ಈದ್ಗಾ ಮೈದಾನದಲ್ಲಿ ನಮಾಜ್ ಸಲ್ಲಿಸಿದರು.
ನಗರದ ಡಂಬಳ ನಾಕಾ, ಮುಳಗುಂದ ನಾಕಾ ಸಮೀಪ ಇರುವ ಶಾಹಿ ಈದ್ಗಾ ಮೈದಾನ, ಬೆಟಗೇರಿಯ ರೈಲ್ವೆ ನಿಲ್ದಾಣ ಸಮೀಪದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಹಿರಿಯರು ಹಾಗೂ ಕಿರಿಯರೆನ್ನದೇ ಎಲ್ಲರೂ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಡಂಬಳ ನಾಕಾ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ, ಗದಗ-ಬೆಟಗೇರಿ ನಗರಾಭಿವೃದ್ಧಿ ಪಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಮುಖಂಡರಾದ ಉಮರ್ ಫಾರೂಕ್ ಹುಬ್ಬಳ್ಳಿ, ಬಿ.ಬಿ.ಅಸೂಟಿ, ಅಶೋಕ ಮಂದಾಲಿ ಸೇರಿ ಮತ್ತಿತರರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ನಮಾಜ್ ಬಳಿಕ ಸಚಿವ ಎಚ್.ಕೆ.ಪಾಟೀಲ ಮುಸ್ಲಿಂ ಸಮುದಾಯದವರಿಗೆ ಬಕ್ರಿದ್ ಹಬ್ಬದ ಶುಭಾಷಯ ತಿಳಿಸಿದರು.
ಬಕ್ರೀದ್ ಅಂಗವಾಗಿ ಮುಸ್ಲಿಮರು ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿದ್ದರು. ಗಳೆಯರು, ಬಂಧುಗಳನ್ನು ಆಹ್ವಾನಿಸಿ ಜತೆಯಾಗಿ ಊಟ ಮಾಡಿ ಸಂಭ್ರಮಿಸಿದರು.
ಸಮಾಜದ ಸ್ಥಿತಿವಂತರು ಬಡವರಿಗೆ ಆಹಾರ ಸಾಮಗ್ರಿ ಹಾಗೂ ಚಿಕಿತ್ಸೆಗಾಗಿ ಹಣಕಾಸಿನ ನೆರವು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.