ADVERTISEMENT

ನರಗುಂದ: ಕಡಲೆ, ಕುಸುಬಿ ಬೆಳೆಗೆ ರೋಗ: ನಿಯಂತ್ರಣಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 4:50 IST
Last Updated 2 ಡಿಸೆಂಬರ್ 2025, 4:50 IST
ನರಗುಂದ ತಾಲ್ಲೂಕಿನ ಜಮೀನುಗಳಲ್ಲಿನ ಕಡಲೆ ಬೆಳೆಗೆ ಬಂದ ರೋಗವನ್ನು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ ಪರಿಶೀಲಿಸಿದರು
ನರಗುಂದ ತಾಲ್ಲೂಕಿನ ಜಮೀನುಗಳಲ್ಲಿನ ಕಡಲೆ ಬೆಳೆಗೆ ಬಂದ ರೋಗವನ್ನು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ ಪರಿಶೀಲಿಸಿದರು   

ನರಗುಂದ: ಮಲಪ್ರಭಾ ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶದಲ್ಲಿ ಹಿಂಗಾರು ಹಂಗಾಮಿನಲ್ಲಿ ಕಡಲೆ ಮತ್ತು ಕುಸುಬಿ ಬೆಳೆಗಳಿಗೆ ವಿವಿಧ ರೋಗಗಳು ತಗುಲಿವೆ. ಔಷಧೋಪಚಾರ ಮಾಡುವಂತೆ ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ ರೈತರಿಗೆ ಸಲಹೆ ನೀಡಿದ್ದಾರೆ.

'ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈಗಾಗಲೇ ಕಡಲೆ ಹಾಗೂ ಕುಸುಬಿ ಬೆಳೆ ಬೆಳೆದಿರುವ ಜಮೀನುಗಳಿಗೆ ಭೇಟಿ ನೀಡಲಾಗಿದೆ. ತಾಲ್ಲೂಕಿನಲ್ಲಿ ಹಿಂಗಾರಿ ಕಡಲೆ ಬೆಳೆಯು ಪ್ರಸ್ತುತ 35 ರಿಂದ 45 ದಿನಗಳದ್ದಾಗಿದೆ. ಆರಂಭಿಕ ಹೂವಾಡುವ ಹಂತದಲ್ಲಿದ್ದು ಕಾಯಿಕೊರಕ ಕೀಡೆಯ ನಿರ್ವಹಣೆಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ಲೀಟರ್ ನೀರಿಗೆ ಪ್ರೋಪೆನೋಪಾ 50 ಇ.ಸಿ. 2 ಮಿ.ಲೀ. ಅಥವಾ 0.6 ಗ್ರಾಂ ಥೈಯೋಡಿಕಾರ್ಬ 75 ಡಬ್ಲೂ.ಪಿ. ಅಥವಾ 0.2 ಗ್ರಾಂ ಇಮಾಮೆಕ್ಟಿನ್ ಬೆಂಜೋಯೇಟ್ 5 ಎಸ್.ಜಿ. ಸಿಂಪರಣೆ ಮಾಡಬೇಕು. ಆದರೆ ಆರಂಭದಲ್ಲಿಯೇ ಕ್ಲೋರೋಂಟ್ರಿನೀಲಿಟ್ರೋಲ್ ನಂತಹ ಅತಿ ವೆಚ್ಚದ ಕೀಟನಾಶಕಗಳನ್ನು ಬಳಸುವುದು ಉತ್ತಮ ಬೇಸಾಯ ಕ್ರಮವಲ್ಲ. ಇದನ್ನು ಎಲ್ಲ ರೈತರು ಅರಿಯಬೇಕು. ಬೇವಿನ ಮೂಲದ ಕೀಟನಾಶಕಗಳನ್ನು ಪ್ರತಿ ಲೀಟರ್ ನೀರಿಗೆ 3 ಮಿ.ಲೀ.ನಂತೆ ಬಳಸುವುದು ಪರಿಸರ ಸ್ನೇಹಿ ಕ್ರಮವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಕಡಲೆ ಹೂವಾಡುವ ಆರಂಭಿಕ ಹಂತದಲ್ಲಿ ಶೇ 2ರ ಯೂರಿಯಾ (20ಗ್ರಾಂ. ಯೂರಿಯಾ ಪ್ರತಿ ಲೀಟರ್ ನೀರಿಗೆ) ಸಿಂಪರಣೆ ಮಾಡಬಹುದು. ಈ ಸಿಂಪರಣೆಯನ್ನು ಸಸ್ಯ ಸಂರಕ್ಷಣಾ ಕ್ರಮಗಳ ಜೊತೆಗೂ ಕೈಗೊಳ್ಳಬಹುದು. ಪರ್ಯಾಯವಾಗಿ ನ್ಯಾನೊ ಯೂರಿಯಾವನ್ನು ಪ್ರತಿ ಎಕರೆಗೆ 500 ಮಿ.ಲೀ. ನಂತೆ ಬಳಸಬಹುದು ಎಂದು ಕುಲಕರ್ಣಿ ತಿಳಿಸಿದ್ದಾರೆ.

ADVERTISEMENT

ಕುಸುಬೆ ಬೆಳೆಯಲ್ಲಿ ಸಸಿ ಸಾಯುವ ರೋಗ ಕಂಡು ಬಂದಿದೆ. ಇದು ಪೂಸೆರಿಯಂ ಪಂಗಡದ ಶಿಲೀಂಧ್ರದಿಂದ ಬರುವ ಸಾಧ್ಯತೆ ಇದೆ. ಇದು ಹರಡದಂತೆ ಪ್ರತಿ ಲೀಟರ್ ನೀರಿಗೆ 4 ಗ್ರಾಂ ಸಂಯುಕ್ತ ಶಿಲೀಂಧ್ರನಾಶಕವಾದ (ಕಾರ್ಬಾಕ್ಸನ್ + ಫೈರಾಮ್ 37.50) ಮಿಶ್ರಣ ಮಾಡಿ ಬಾಧಿತ ಗಿಡಕ್ಕೆ ಮತ್ತು ಸುತ್ತಲಿನ ಗಿಡಗಳ ಬೇರಿನ ವಲಯದಲ್ಲಿ ಇಂಗುವಂತೆ ಹಾಕಬೇಕು. ಜೊತೆಗೆ ಎಡೆಕುಂಟೆ ಹೊಡೆಯುವುದು ಅವಶ್ಯಕ ಎಂದು ಎಂ.ಎಸ್. ಕುಲಕರ್ಣಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.