
ನರೇಗಲ್: ಜಾತ್ರೆ ಎಂದರೆ ಹಾಡು, ಕುಣಿತ, ಕೇಕೆಗಳೊಂದಿಗೆ ರಥ ಎಳೆದು ಸಂಭ್ರಮಿಸುವುದು ಸಾಮಾನ್ಯ. ಆದರೆ, ಇದು ಎಲ್ಲ ಜಾತ್ರೆಗಳಂತಲ್ಲ. ನಲಿಕಲಿ ಮಕ್ಕಳಿಂದ ಹಿಡಿದು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳವರೆಗೆ ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣ ಮಾಡುವ ವೇದಿಕೆಯಾಗಿದೆ.
ಅಕ್ಷರ ಭಾರತ ಪ್ರತಿಷ್ಠಾನ ಗದಗ ಹಾಗೂ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೆರೆ ವತಿಯಿಂದ ನಡೆದಿರುವ ಅಕ್ಷರ ಜಾತ್ರೆಯಲ್ಲಿ ನರೇಗಲ್ ಪಟ್ಟಣದ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ 30 ಶಿಕ್ಷಣ ಸಂಸ್ಥೆಗಳ ಮಕ್ಕಳು ಸಿದ್ದಪಡಿಸಿರುವ ವಿಜ್ಞಾನ ಹಾಗೂ ವಸ್ತು ಪ್ರದರ್ಶನವನ್ನು ನೋಡಲು ಮಕ್ಕಳು, ಜನರು ಜಾತ್ರೆಗೆ ಬಂದಂತೆ ಕುಟುಂಬ ಸಮೇತರಾಗಿ ತಮ್ಮದೆ ವಾಹನಗಳಲ್ಲಿ ಬರುತ್ತಿರುವುದು ವಿಶೇಷವಾಗಿದೆ.
ಇದು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಜನರೆದರು ತೆರೆದಿಡುವ ಪ್ರತಿಭಾ ಕಾರ್ಯಕ್ರಮವಾಗಿದೆ. ನರೇಗಲ್, ಕೋಡಿಕೊಪ್ಪ, ಹಾಲಕೆರೆ, ಅಬ್ಬಿಗೇರಿ, ನಿಡಗುಂದಿ, ಗಜೇಂದ್ರಗಡ, ಬೇಲೂರು, ಹೊಸಪೇಟೆ, ಅಸುಂಡಿ, ಕುಷ್ಟಗಿ, ಹನಮಸಾಗರ ಸೇರಿದಂತೆ ವಿವಿಧ ಕಡೆಯಿಂದ ಬಂದ ವಿದ್ಯಾರ್ಥಿಗಳು ಸಾವಿರಕ್ಕೂ ಹೆಚ್ಚು ವಿಜ್ಞಾನ, ಗಣಿತ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳನ್ನು ಮತ್ತು ಪ್ರಯೋಗಗಳನ್ನು ಪ್ರದರ್ಶಿಸಿದ್ದಾರೆ.
ಇದರಲ್ಲಿ ಮಳೆನೀರನ್ನು ಸಂಗ್ರಹಿಸಿ ಮರುಬಳಕೆ ಮಾಡುವ ವಿಧಾನ, ಕೃಷಿಯಲ್ಲಿ ನೀರಿನ ಉಳಿತಾಯಕ್ಕಾಗಿ ಬಳಸುವ ತಂತ್ರಜ್ಞಾನ, ಕಲುಷಿತ ನೀರನ್ನು ಶುದ್ಧೀಕರಿಸುವ ಮಾದರಿ, ಭೂಮಿಯ ತಾಪಮಾನ ಏರಿಕೆಯ ಪರಿಣಾಮಗಳನ್ನು ತೋರಿಸುವ ಮಾದರಿ , ರಾಕೆಟ್ ಉಡಾವಣೆ ಮತ್ತು ಬಾಹ್ಯಾಕಾಶ ಸಂಶೋಧನೆಯ ಮಾದರಿ, ಗ್ರಹಗಳ ಚಲನೆಯನ್ನು ತೋರಿಸುವ ಸ್ಥಿರ ಅಥವಾ ಚಲಿಸುವ ಮಾದರಿ, ಜೀವಕೋಶದ ಒಳರಚನೆಯನ್ನು ತೋರಿಸುವ ಮಾದರಿ, ಸುಲಭವಾಗಿ ರಾಶಿ ಮಾಡುವ ಮಾದರಿ, ಸ್ವಯಂಚಾಲಿತವಾಗಿ ಗೋಶಾಲೆಯ ಶೆಡ್ಡು ಮುಚ್ಚುವ, ತೆರೆಯುವ ಮಾದರಿ ಹೀಗೆ ತಾವೇ ಸಿದ್ದಪಡಿಸಿದ ಮಾದರಿಗಳ ಬಗ್ಗೆ ನೋಡುಗರಿಗೆ ವಿದ್ಯಾರ್ಥಿಗಳು ಅಂಜಿಕೆಯಿಲ್ಲದೆ ವಿವರಿಸುತ್ತಿದ್ದರು.
ಜಾತ್ರೆಯಲ್ಲಿ ಸಿದ್ದಗೊಂಡ ತಾರಾಲಯವನ್ನು ಸಂಜೆವರೆಗೂ ವಿದ್ಯಾರ್ಥಿಗಳು ಮುಗಿಬಿದ್ದು ವೀಕ್ಷಣೆ ಮಾಡಿದರು. ಅಂದಾಜು 16 ಸಾವಿರು ಮಕ್ಕಳು, ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ವೀಕ್ಷಣೆಗೆ ಬಂದಿದಿದ್ದರು. ಮಂಗಳವಾರ ರೋಣ-ಗಜೇಂದ್ರಗಡ ತಾಲ್ಲೂಕಿನ ಮೂರು ಕ್ಲಸ್ಟರ್‌ಗಳ ವಿದ್ಯಾರ್ಥಿಗಳ ಇಲ್ಲಿಗೆ ಭೇಟಿ ನೀಡಲಿದ್ದಾರೆ.
ಅಕ್ಷರ ಜಾತ್ರೆ ಅಂಗವಾಗಿ ಅಂಗಸಂಸ್ಥೆಯ ಮಕ್ಕಳಿಗೆ ಪ್ರಬಂಧ, ವಚನ, ರಸಪ್ರಶ್ನೆ ಸ್ಪರ್ಧೆ, ಗಾಯನ ಸೇರಿದಂತೆ ಅನೇಕ ಸ್ಪರ್ಧೆಗಳು ನಡೆದಿವೆ. ಮಕ್ಕಳೇ ಸಿದ್ದಪಡಿಸಿರುವ ಆಹಾರ ಮೇಳ ನಡೆಯಿತು. ಇದರಿಂದ ಎಲ್ಲಾ ಮಕ್ಕಳಿಗೆ ಸಂಪೂರ್ಣ ಶೈಕ್ಷಣಿಕ ಜ್ಞಾನವನ್ನು ಒದಗಿಸುವುದು, ಸ್ಪರ್ಧಾತ್ಮಕ ಭಾವನೆ ಬೆಳೆಸುವ ವೇದಿಕೆಯಾಯಿತು. 3 ತಿಂಗಳಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ತಾವೇ ವಾದ್ಯಗಳನ್ನು ನುಡಿಸಿ ನೃತ್ಯ ಮಾಡಿದ ದೇಶಿ ಕಲೆಗಳ ಪ್ರದರ್ಶನ ನಡೆಯಿತು. ಅದರಲ್ಲೂ ಕರಡಿ ಮಜಲು, ಜೋಗತಿ ನೃತ್ಯ, ಗೋರಪ್ಪನ ನೃತ್ಯದಂತಹ ಅನೇಕ ಕಲೆಗಳ ಪ್ರದರ್ಶನ ವೀಕ್ಷಕರನ್ನು ಆಕರ್ಷಿಸಿದವು.
ಹಾಲಕೆರೆ ಮಠದ ಶ್ರೀಗಳು ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಅಕ್ಷರ ಜಾತ್ರೆಯನ್ನು ಆಚರಿಸಿದ್ದು ಹಾಗೂ ಇತರೆ ಜಾತ್ರೆಗಳಿಗೆ ಕೊಡುವ ಮಹತ್ವ ಅಕ್ಷರ ಜಾತ್ರೆಗೂ ಕೊಡಬೇಕು ಎನ್ನುವ ಸಂದೇಶ ನೀಡಿದ್ದು ಶ್ಲಾಘನೀಯಜಿ.ಎಸ್.ಪಾಟೀಲ, ರೋಣ ಶಾಸಕ
ಅನ್ನ ಅಕ್ಷರಕ್ಕೆ ಮಹತ್ವ ನೀಡಿರುವ ನಮ್ಮ ಮಠದ ಹಿರಿಯ ಶ್ರೀಗಳು ಸ್ವಾತಂತ್ರ್ಯ ಪೂರ್ವದಿಂದಲೇ ಪ್ರತಿ ಮನೆಯಲ್ಲೂ ಅಕ್ಷರದ ದೀಪವನ್ನು ಹಚ್ಚಿ ಅಜ್ಞಾನ ಅನಕ್ಷರತೆಯನ್ನು ಹೋಗಲಾಗಿಡಿಸಿದ್ದಾರೆ. ಅದನ್ನೇ ವಿದ್ಯಾರ್ಥಿಗಳಿಗಾಗಿ ಅಕ್ಷರ ತೇರನ್ನಾಗಿ ಆರಂಭಿಸಲಾಗಿದೆ.ಮುಪ್ಪಿನ ಬಸವಲಿಂಗ ಸ್ವಾಮೀಜಿ, ಅನ್ನದಾನೇಶ್ವರ ಸಂಸ್ಥಾನಮಠ, ಹಾಲಕೆರೆ
ಅಂದಿನ ಕೋಲಾರಿ ಬಂಡಿ; ಇಂದಿನ ಅಕ್ಷರ ತೇರು ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 145 ವಿದ್ಯಾರ್ಥಿಗಳಿಗಾಗಿ ಲಿಂಗೈಕ್ಯ ಅಭಿನವ ಅನ್ನದಾನ ಶ್ರೀಗಳು 1989ರಲ್ಲಿ ಒಂಟೆತ್ತಿನ ಕೋಲಾರಿ ಬಂಡಿನ್ನು ತಂದಿದ್ದರು. ಬಸ್ ನಿಲ್ದಾಣದಿಂದ ಶಾಲೆಗೆ ಕರೆದುಕೊಂಡು ಹೋಗಲು ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ₹5 ತೆಗೆದುಕೊಳ್ಳುತ್ತಿದ್ದರು. ಬಸ್ ವ್ಯವಸ್ಥೆ ಬಂದ ನಂತರ ಮೂಲೆಗೆ ಸೇರಿದ್ದ ಬಂಡಿ ಈಗಿನ ಅಕ್ಷರ ಜಾತ್ರೆಯ ತೇರಾಗಿದೆ. 9X6 ಅಳತೆಯ ಬಂಡಿ ಮುಂದೆ ಅಕ್ಷರ ಜಾತ್ರೆಯ ಚಿತ್ರಣ ಎಡಕ್ಕೆ ಬಸವಣ್ಣ ಅಲ್ಲಮಪ್ರಭು ಅಕ್ಕಮಹಾದೇವಿ ಸರ್ವಜ್ಞರ ಬಲಕ್ಕೆ ಮಠದ ಶ್ರೀಗಳ ಹಾಗೂ ಹಿಂಬದಿ ರಾಧಾಕೃಷ್ಣನ್ ಜ್ಯೋತಿಬಾ ಫುಲೆ ಕುವೆಂಪು ಗಣ್ಯರ ಚಿತ್ರಗಳಿವೆ. ಬಂಡಿಯೊಳಗೆ ಲಿಂಗೈಕ್ಯ ಅಭಿನವ ಅನ್ನದಾನ ಶಿವಯೋಗಿಗಳು ಕುಳಿತಿರುವ ಮೂರ್ತಿಯಿದೆ. ತೇರನ್ನು ವಿದ್ಯುತ್‌ದೀಪ ಹಾಗೂ ಹೂವಿನಿಂದ ಅಲಂಕರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.