ADVERTISEMENT

ದೇಶ ಕಂಡ ಮಹಾ ನಾಯಕ ಅಂಬೇಡ್ಕರ್‌: ಸಚಿವ ಸಿ.ಸಿ.ಪಾಟೀಲ

ಜಿಲ್ಲೆಯ ವಿವಿಧೆಡೆ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 4:52 IST
Last Updated 15 ಏಪ್ರಿಲ್ 2022, 4:52 IST
ಗದಗ ನಗರದ ಅಂಬೇಡ್ಕರ್‌ ಭವನದಲ್ಲಿ ನಡೆದ ಡಾ. ಬಿ.ಆರ್.ಅಂಬೇಡ್ಕರ್‌ ಹಾಗೂ ಡಾ. ಬಾಬು ಜಗಜೀವನರಾಮ್ ಜಯಂತ್ಯುತ್ಸವವನ್ನು ಸಚಿವ ಸಿ.ಸಿ.ಪಾಟೀಲ ಉದ್ಘಾಟಿಸಿದರು
ಗದಗ ನಗರದ ಅಂಬೇಡ್ಕರ್‌ ಭವನದಲ್ಲಿ ನಡೆದ ಡಾ. ಬಿ.ಆರ್.ಅಂಬೇಡ್ಕರ್‌ ಹಾಗೂ ಡಾ. ಬಾಬು ಜಗಜೀವನರಾಮ್ ಜಯಂತ್ಯುತ್ಸವವನ್ನು ಸಚಿವ ಸಿ.ಸಿ.ಪಾಟೀಲ ಉದ್ಘಾಟಿಸಿದರು   

ಗದಗ: ‘ಡಾ. ಬಿ.ಆರ್.ಅಂಬೇಡ್ಕರ್‌ ಅವರ ಬಾಲ್ಯದ ಜೀವನವನ್ನು ನಾವೆಲ್ಲರೂ ಅರಿಯಬೇಕು. ಅವರಲ್ಲಿದ್ದ ಛಲ ನಮ್ಮೆಲ್ಲರಿಗೂ ಸ್ಪೂರ್ತಿ ಆಗಬೇಕು. ಅವರಂತೆ ಪ್ರತಿಯೊಬ್ಬರೂ ವಿದ್ಯಾವಂತರಾಗಿ ತುಳಿತಕ್ಕೊಳಗಾಗುವರ ಪರ ಧ್ವನಿ ಎತ್ತಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ. ಬಿ.ಆರ್.ಅಂಬೇಡ್ಕರ್‌ ಅವರ 131ನೇ ಹಾಗೂ ಡಾ. ಬಾಬು ಜಗಜೀವನರಾಮ್ ಅವರ 115ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ವಾತಂತ್ರ ನಂತರದಲ್ಲಿ ದೇಶಕ್ಕೆ ಬೇಕಾದಂತಹ ಸಂವಿಧಾನ ಹಾಗೂ ಪ್ರಜೆಗಳ ಹಕ್ಕುಗಳ ಕುರಿತು ಡಾ. ಬಿ.ಆರ್.ಅಂಬೇಡ್ಕರ್‌ ಅವರು ಇಡೀ ವಿಶ್ವಕ್ಕೆ ಮಾದರಿಯಾದ ಸಂವಿಧಾನ ನೀಡಿದಂತಹ ಮಹಾನ ಚೇತನ ಅವರು’ ಎಂದು ಬಣ್ಣಿಸಿದರು.

ADVERTISEMENT

‘ಅವರು ರಚಿಸಿದಂತಹ ಸಂವಿಧಾನವು ಕೇವಲ ಜಾತಿ-ಜನಾಂಗಕ್ಕೆ
ಸೀಮಿತವಾಗದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಾಯವಾಗುವಂತೆ ರಚಿಸಲಾ
ಗಿದೆ. ಬಾಬು ಜಗಜೀವನರಾಮ್ ಅವರು ದೇಶದಲ್ಲಿನ ಆಹಾರ ಭದ್ರತೆಗೆ ಒತ್ತು ನೀಡಿ ಹಸಿರುಕ್ರಾಂತಿ ಹರಿಕಾರರಾಗಿದ್ದರು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಉಷಾ ದಾಸರ ಮಾತನಾಡಿ, ‘ಡಾ.ಬಿ.ಆರ್.ಅಂಬೇಡ್ಕರ್‌ ಅವರು ದೇಶ ಕಂಡಂತಹ ಮಹಾನ್‌ ನಾಯಕ. ಬಾಲ್ಯದಿಂದಲೇ ಸಾಕಷ್ಟು ನೋವು ತಿಂದರೂ ಅವರು ಧೃತಿಗೆಡೆದ ಸಮಾಜದಲ್ಲಿನ ಜಾತಿ ಸಂಕೊಲೆ ವಿರುದ್ಧ ಹೋರಾಡಿ ಪ್ರತಿಯೊಬ್ಬರಿಗೂ ಸಮಾನತೆ ಹಕ್ಕು ಒದಗಿಸಲು ಸಂವಿಧಾನ ರಚಿಸಿದ ಧೀಮಂತ ವ್ಯಕ್ತಿ’ ಎಂದು ಹೇಳಿದರು.

ಕೆ.ಎಚ್.ಪಿ.ಕಾಲೇಜಿನ ಪ್ರಾಚಾರ್ಯ ಪ್ರೊ.ಡಿ.ಜಿ. ಜೋಗಣ್ಣವರ ಮಾತನಾಡಿದರು.

ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಗದಗ-ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜು, ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ.ಸುಶೀಲಾ, ಡಿಎಫ್‌ಒ ದೀಪಿಕಾ ಬಾಜಪೇಯಿ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಬಿ.ಕಲ್ಲೇಶ ಇದ್ದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರಶಾಂತ ವರಗಪ್ಪನವರ ಸ್ವಾಗತಿಸಿದರು. ಬಾಹುಬಲಿ ಜೈನರ ನಿರೂಪಿಸಿದರು. ರಮೇಶ ಕಾಳೆ ಹಾಗೂ ತಂಡದವರು ಕ್ರಾಂತಿಗೀತೆಗಳನ್ನು ಹಾಡಿದರು.

2020– 2021ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಹೋರಾಟದ ಮೂರು ದೀಪಗಳು
ಸಾಹಿತಿ ಡಾ.ಎಚ್.ಎಸ್.ಅನುಪಮಾ ಮಾತನಾಡಿ, ‘ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ದಮನಿತರು ಹೋರಾಡಲು ಮೂರು ದೀಪಗಳನ್ನು ಕೊಟ್ಟಂತಹ ಅಂಬೇಡ್ಕರ್‌ ಅವರು ಅಹಿಂಸಾ ತತ್ವದ ಮೂಲಕ ಹಕ್ಕುಗಳ ಕುರಿತು ಹೋರಾಡಲು ಕರೆ ನೀಡಿದ್ದರು’ ಎಂದು ತಿಳಿಸಿದರು.

‘ಭಾರತದ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಬಹುಮತದ ನಿರ್ಧಾರಕ್ಕಿಂತ ಒಮ್ಮತದ ನಿರ್ಧಾರವಾಗಬೇಕು ಎಂಬುದು ಅವರ ಧ್ಯೇಯವಾಗಿತ್ತು. ಜಾತಿ-ಮತ, ಕುಲ-ಪಂಗಡಗಳಲ್ಲಿ ಹರಿದು ಹಂಚಿ ಹೋದ ದೇಶವನ್ನು ಸಂವಿಧಾನದ ಮೂಲಕ ಏಕೀಕೃತಗೊಳಿಸಿದರು. ದಲಿತ ಮಹಿಳಾ ನಾಯಕಿಯರನ್ನು ಬೆಳೆಸಲು ಕರೆ ನೀಡಿದ ಅವರು ಪ್ರತಿಯೊಬ್ಬರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಅಂಬೇಡ್ಕರ್ ತತ್ವಾದರ್ಶ ಪ್ರಸ್ತುತ’
ಗಜೇಂದ್ರಗಡ:
‘ವಿವಿಧ ಸಂಸ್ಕೃತಿ, ಧರ್ಮದವರು ನೆಲೆಸಿರುವ ಭಾರತ ದೇಶಕ್ಕೆ ಸಮರ್ಥವಾದ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

ಪಟ್ಟಣದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಗುರುವಾರ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಡಾ.ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್.ಆಂಬೇಡ್ಕರ ಜಯಂತಿ ಅಂಗವಾಗಿ ಉಭಯ ನಾಯಕರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಡಾ.ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳ ಮೆರವಣಿಗೆ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ದುರ್ಗಾ ವೃತ್ತದ ವರೆಗೆ ತಲುಪಿ ನಂತರ ಬಾಬು ಜಗಜೀವನರಾಂ ಸಮುದಾಯ ಭವನ ತಲುಪಿತು. ಮೆರವಣಿಗೆಯಲ್ಲಿ ಅಂಬೇಡ್ಕರ್ ಅವರ ಕುರಿತು ಹಾಡುಗಳಿಗೆ ಯುವಕರು ಕುಣಿದು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಕನಕಪ್ಪ ಅರಳಿಗಿಡದ, ಮುರ್ತುಜಾ ಡಾಲಾಯತ, ಶಿರಸ್ತೆದಾರ ವೀರಣ್ಣ ಅಡಗತ್ತಿ, ಕಂದಾಯ ನಿರೀಕ್ಷಕಿ ಗೌರಮ್ಮ ಆನಂದಪ್ಪನವರ, ಮುಖಂಡರಾದ ಬಸವರಾಜ ಬಂಕದ, ಬುಡ್ಡಪ್ಪ ಮೂಲಿಮನಿ ಸೇರಿದಂತೆ ಇತರರು ಇದ್ದರು.

‘ಧಾರ್ಮಿಕ ಸುಧಾರಣೆಯಿಂದ ಸಾಮಾಜಿಕ ಸ್ವಾಸ್ಥ್ಯ’
ಶಿರಹಟ್ಟಿ:
ದೇವರು ಹಾಗೂ ಧರ್ಮದ ಹೆಸರಿನಲ್ಲಿ ಜನರು ಮಾಡುತ್ತಿರುವ ಕೃತ್ಯಗಳು ಕೆಲವರಿಗೆ ಅನ್ಯಾಯವಾಗುತ್ತಿದೆ. ದೇಶದಲ್ಲಿ ಧರ್ಮ ಸುಧಾರಣೆಗೊಂಡರೆ ಸಮಾಜದಲ್ಲಿನ ಏರಿಳಿತ ವ್ಯವಸ್ಥೆ ತಾನಾಗಿಯೇ ಹತೋಟಿಗೆ ಬರುತ್ತದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಡಾ.ಜಿ.ಬಿ.ನಂದನ್ ಅಭಿಪ್ರಾಯಪಟ್ಟರು.

ಸ್ಥಳೀಯ ತಹಶೀಲ್ದಾರ್‌ ಕಚೇರಿಯ ಆವರಣದಲ್ಲಿ ವಿವಿಧ ಇಲಾಖೆ ಹಾಗೂ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಅವರ 131ನೇ ಹಾಗೂ ಡಾ.ಬಾಬು ಜಗಜೀವನರಾಂ ಅವರ 115ನೇ ಜಯಂತ್ಯೋತ್ಸವದಲ್ಲಿ ಉಪನ್ಯಾಸ ನೀಡಿದರು.

ಶಾಸಕ ರಾಮಣ್ಣ ಲಮಾಣಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ ಸರ್ಕಾರದಿಂದ ನೀಡಲಾದ ಚೆಕ್ ವಿತರಣೆ ಮಾಡಲಾಯಿತು.

ತಹಶೀಲ್ದಾರ್‌ ಕಲಗೌಡ ಪಾಟೀಲ, ಸಿಪಿಐ ವಿಕಾಸ ಲಮಾಣಿ, ಪಿಎಸ್ಐ ಪ್ರವೀಣ ಗಂಗೋಳ, ಪಪಂ ಅಧ್ಯಕ್ಷೆ ಗಂಗವ್ವ ಆಲೂರ, ಉಪಾಧ್ಯಕ್ಷ ದೇವಪ್ಪ ಆಡೂರ, ಸದಸ್ಯ ಫಕ್ಕಿರೇಶ ರಟ್ಟಿಹಳ್ಳಿ, ಪರಮೇಶ ಪರಬ, ಜಾನು ಲಮಾಣಿ, ಮುತ್ತುರಾಜ ಭಾವಿಮನಿ, ತಾಲೂಕುಮಟ್ಟದ ಎಲ್ಲಾ ಅಧಿಕಾರಿಗಳು, ಪಪಂ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.