ಮುಂಡರಗಿ: ಪಟ್ಟಣದ ಅನ್ನದಾನೀಶ್ವರ ಸ್ವಾಮೀಜಿ ಅವರನ್ನು ‘ಕರ್ನಾಟಕ ರತ್ನ’ ಎಂದು ಪುರಸ್ಕರಿಸಿ ಗೌರವಿಸಬೇಕು ಮತ್ತು ಪಟ್ಟಣದಲ್ಲಿ ಜರುಗುವ ಎಲ್ಲ ಸರ್ಕಾರಿ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳಲ್ಲಿ ಶ್ರೀಗಳ ಹೆಸರು ಮುದ್ರಿಸುವ ಕುರಿತು ಪುರಸಭೆ ಠರಾವು ಮಾಡಬೇಕು ಎಂದು ಒತ್ತಾಯಿಸಿ ಕಿಸಾನ್ ಜಾಗೃತಿ ವಿಕಾಸ ಸಂಘ ಹಾಗೂ ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಗಳ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, ‘ಸ್ವಾಮೀಜಿ ಅವರು ನೂರಾರು ಉತ್ಕೃಷ್ಟ ಗ್ರಂಥಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಹಲವು ಗ್ರಂಥಗಳು ಇಂಗ್ಲಿಷ್ ಸೇರಿದಂತೆ ಜಗತ್ತಿನ ಹಲವು ಭಾಷೆಗಳಿಗೆ ಅನುವಾದಗೊಂಡಿವೆ’ ಎಂದು ತಿಳಿಸಿದರು.
‘ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಹಾಗೂ ಹಂಪಿ ವಿಶ್ವವಿದ್ಯಾಲಯವು ನಾಡೋಜ ಪುರಸ್ಕಾರ ನೀಡಿ ಗೌರವಿಸಿವೆ. ನೂರಾರು ಸಂಘ ಸಂಸ್ಥೆಗಳು ಅವರ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿವೆ’ ಎಂದು ಗಮನಸೆಳೆದರು.
‘ಶೈಕ್ಷಣಿಕವಾಗಿ ತೀರಾ ಹಿಂದುಳಿದ ಮುಂಡರಗಿ ಹಾಗೂ ಅದರ ಸುತ್ತಮುತ್ತಲಿನ ಭಾಗಗಳಲ್ಲಿ ಶ್ರೀಗಳು ಹಲವಾರು ಶಾಲಾ, ಕಾಲೇಜುಗಳನ್ನು, ಉಚಿತ ವಸತಿ ನಿಲಯಗಳನ್ನು ತೆರೆದು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದಾರೆ. ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಸಾರ್ವಜನಿಕ ಆಸ್ಪತ್ರೆ, ಕನ್ನಡ ಸಾಹಿತ್ಯ ಭವನ ನಿರ್ಮಾಣ, ವಿಜ್ಞಾನ ಭವನ ನಿರ್ಮಾಣ, ತಾಲ್ಲೂಕು ಕ್ರೀಡಾಂಗಣ ಮೊದಲಾದವುಗಳ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಿವೇಶನಗಳನ್ನು ಉಚಿತವಾಗಿ ನೀಡಿದ್ದಾರೆ’ ಎಂದು ತಿಳಿಸಿದರು.
‘ಹಲವಾರು ಜನಪರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಗಳು ಈ ಭಾಗದ ಬಹುದೊಡ್ಡ ಆಸ್ತಿ. ಆದ್ದರಿಂದ ಪಟ್ಟಣದಲ್ಲಿ ಜರುಗುವ ಎಲ್ಲ ಸರ್ಕಾರಿ ಕಾರ್ಯಕ್ರಮಗಳಿಗೆ ಅವರನ್ನು ಆಮಂತ್ರಿಸಬೇಕು ಮತ್ತು ಆಮಂತ್ರಣ ಪತ್ರಿಕೆಗಳಲ್ಲಿ ಅವರ ಹೆಸರನ್ನು ಹಾಕಬೇಕು’ ಎಂದು ಮನವಿ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಸದಸ್ಯ ನಾಗರಾಜ ಹೊಂಬಳಗಟ್ಟಿ ಮನವಿ ಸ್ವೀಕರಿಸಿದರು. ಕಿಸಾನ್ ಜಾಗೃತಿ ಸಂಘದ ಮುಖಂಡ ದ್ರುವಕುಮಾರ ಹೂಗಾರ, ರಾಜು ಅಂಗಡಿ, ನಿಂಗಪ್ಪ ಬಂಢಾರಿ, ಬಸಪ್ಪ ವಡ್ಡರ, ಮೈನುದ್ದೀನ ಗರಡಿಮನಿ, ರಿಯಾಜ ಹೊಸಪೇಟಿ, ರಮೇಶ ನವಲಗುಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.