ADVERTISEMENT

ಲಿಂಗಾಯತ ವೈದಿಕ ಧರ್ಮದ ಭಾಗವಲ್ಲ: ಅಶೋಕ ಬರಗುಂಡಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 4:50 IST
Last Updated 3 ಜೂನ್ 2022, 4:50 IST

ಗದಗ: ‘ಪಠ್ಯ ಪರಿಷ್ಕರಣೆ ನೆಪದಲ್ಲಿ ಬಸವಣ್ಣವರ ಬಗ್ಗೆ ಸುಳ್ಳು ಮಾಹಿತಿ ಸೇರಿಸುವ ಮೂಲಕ ಮಕ್ಕಳಲ್ಲಿ ಜಾತಿವಾದ ಬಿತ್ತಲಾಗುತ್ತಿದೆ. ಅಲ್ಲದೇ, ಶರಣ ಸಂಸ್ಕೃತಿ, ಸಮ ಸಮಾಜ ನಿರ್ಮಾಣದ ನಾಶಕ್ಕೆ ಹುನ್ನಾರ ನಡೆಯುತ್ತಿದೆ’ ಎಂದು ಬಸವ ಅನುಯಾಯಿ ಅಶೋಕ ಬರಗುಂಡಿ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಬಸವಣ್ಣನವರು ತನ್ನ ಸಹೋದರಿ ಅಕ್ಕನಾಗಾಯಿಗೆ ಇಲ್ಲದ ಉಪನಯನ ನನಗೇಕೆ ಎಂದು ಧಿಕ್ಕರಿಸಿ ಕೂಡಲಸಂಗಮಕ್ಕೆ ಹೋಗಿದ್ದರು. ಈ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಸಾಮಾಜಿಕ ಕ್ರಾಂತಿ ಮಾಡಿದ್ದರು’ ಎಂದು ಹೇಳಿದರು.

‘ಆದರೆ, ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ, ಬಸವಣ್ಣನವರು ಶೈವ ಗುರುಗಳ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆ ಪಡೆದು, ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಎಂದು ಬರೆಯುವ ಮೂಲಕ ಮೂಲ ಆಶಯವನ್ನೇ ತಿರುಚಿದ್ದಾರೆ. ಸಂವಿಧಾನಕ್ಕೆ ಪೂರಕವಾಗಿರುವ ಲಿಂಗಾಯತ ಧರ್ಮ ಎಂದಿಗೂ ವೈದಿಕ ಧರ್ಮದ ಭಾಗವಲ್ಲ’ ಎಂದು ಕಿಡಿಕಾರಿದರು.

ADVERTISEMENT

‘ಲಿಂಗಾಯತ ಸಮುದಾಯಕ್ಕೆ ಸೇರಿದವರೇ ರಾಜ್ಯದ ಮುಖ್ಯಮಂತ್ರಿ ಆಗಿರುವಾಗಲೇ ಇಂತಹ ಕೆಲಸ ಮಾಡುವುದರ ಹಿಂದೆ ಲಿಂಗಾಯತ ಧರ್ಮವನ್ನು ಮತ್ತೆ ಶೈವ ಧರ್ಮದ ವ್ಯವಸ್ಥೆಗೆ ಸೇರಿಸಿ, ಲಿಂಗಾಯತರನ್ನು ಮತ್ತೆ ಶೂದ್ರರನ್ನಾಗಿಸುವ ಹುನ್ನಾರ ಇದರ ಹಿಂದೆ ಇದೆ. ಈ ವಿಚಾರದಲ್ಲಿ ಸಿಎಂ ಮಧ್ಯ ಪ್ರವೇಶಿಸಿ ವಿವಾದಿತ ಅಂಶ ಕೈಬಿಡುವಂತೆ ನಿರ್ದೇಶನ ನೀಡಬೇಕು’ ಎಂದು ಆಗ್ರಹಿಸಿದರು.

‘ಪಠ್ಯ ಪರಿಷ್ಕರಣೆ ಸಮಿತಿಯು ಉಲ್ಲೇಖಿಸಿರುವ ವಚನ ಗ್ರಂಥದಲ್ಲಿ ಪಠ್ಯದಲ್ಲಿ ಉಲ್ಲೇಖಿಸಿರುವ ಅಂಶ ಎಲ್ಲೂ ಇಲ್ಲ. ಈ ಕುರಿತಾದ ದಾಖಲೆ ಇದ್ದರೆ ತೋರಿಸಲಿ’ ಎಂದು ಆಗ್ರಹಿಸಿದರು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ ಅಸುಂಡಿ, ಬಸವ ದಳದ ಅಧ್ಯಕ್ಷ ವಿ.ಕೆ. ಕರೇಗೌಡ್ರ, ಶೇಖಣ್ಣ ಕವಳಿಕಾಯಿ, ಶಿವಣ್ಣ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಚಟ್ಟಿ, ಎಂ.ಬಿ.ಲಿಂಗಧಾಳ, ಸೋಮು ಪುರಾಣಿಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.