
ಮುಂಡರಗಿ: ‘ಪಟ್ಟಣದ ಬಡವರು ಹಾಗೂ ನಿರಾಶ್ರಿತ ಕುಟುಂಬಗಳಿಗೆ ಆಶ್ರಯ ಮನೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಡಾ.ಚಂದ್ರು ಲಮಾಣಿ ಭರವಸೆ ನೀಡಿದರು.
ಅಲೆಮಾರಿ ಅಭಿವೃದ್ಧಿ ನಿಗಮದ ವತಿಯಿಂದ ಪಟ್ಟಣ ಹಾಗೂ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿರುವ ಅಲೆಮಾರಿ ಕುಟುಂಬಗಳಿಗೆ ಮಂಗಳವಾರ ತಾಡಪತ್ರಿ ವಿತರಿಸಿ ಅವರು ಮಾತನಾಡಿದರು.
‘ತಾಲ್ಲೂಕಿನಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು, ಗುಡಿಸಲಿನಲ್ಲಿ ವಾಸಿಸುತ್ತಿರುವ ಹಲವಾರು ಕುಟುಂಬಗಳು ತೀರ್ವ ತೊಂದರೆ ಅನುಭವಿಸುವಂತಾಗಿದೆ. ಅವರ ಸಮಸ್ಯೆಯನ್ನು ನಿವಾರಿಸಲು ತಾತ್ಕಾಲಿಕವಾಗಿ ಉತ್ತಮ ಗುಣಮಟ್ಟದ ತಾಡಪತ್ರಿ ವಿತರಿಸಲಾಗುತ್ತಿದೆ. ಆಶ್ರಯ ಮನೆ ಹಾಗೂ ನಿವೇಶನ ವಿತರನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದು ತಿಳಿಸಿದರು.
ಮುಂಡರಗಿ ಪಟ್ಟಣ ಹಾಗೂ ಕೊರ್ಲಹಳ್ಳಿ ಗ್ರಾಮದ ಸುಮಾರು 40 ಅಲೆಮಾರಿ ಕುಟುಂಬಗಳಿಗೆ ತಾಡಪತ್ರಿ ವಿತರಿಸಲಾಯಿತು. ಕೆ.ವಿ. ಹಂಚಿನಾಳ, ಕುಮಾರಸ್ವಾಮಿ ಹಿರೇಮಠ, ಪ್ರಶಾಂತ ಗುಡದಪ್ಪನವರ, ಜಗದೀಶ ಮೇಟಿ, ಪರಶುರಾಮ ಕಿಲ್ಲಿಕ್ಯಾತರ್, ಮುತ್ತು ಕಿಲ್ಲಿಕ್ಯಾತರ, ವೀರೇಶ ಸಜ್ಜನ, ಸುಭಾಶ್ಚಂದ್ರ ಕ್ವಾಟಿ, ಮಂಜುನಾಥ ಕಿಳ್ಳಿಕ್ಯಾತರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ, ಎಲ್.ಎಂ. ಗಚ್ವಿನಮನಿ, ಸುನೀಲ ಕರ್ನಾಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.