ADVERTISEMENT

ಮುಂಡರಗಿ: ಬಾಳೆ ಬೆಲೆ ಕುಸಿತ; ಕಂಗಾಲಾದ ರೈತ

ಕಾಶಿನಾಥ ಬಿಳಿಮಗ್ಗದ
Published 18 ಡಿಸೆಂಬರ್ 2024, 6:44 IST
Last Updated 18 ಡಿಸೆಂಬರ್ 2024, 6:44 IST
ಮುಂಡರಗಿ ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ಹೊರವಲಯದ ಜಮೀನಿನಲ್ಲಿ ಬಾಳೆ ಕೊಯ್ಲು ನಡೆಯಿತು
ಮುಂಡರಗಿ ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ಹೊರವಲಯದ ಜಮೀನಿನಲ್ಲಿ ಬಾಳೆ ಕೊಯ್ಲು ನಡೆಯಿತು   

ಮುಂಡರಗಿ: ಏಲಕ್ಕಿ ಬಾಳೆ ಬೆಲೆಯ ಭಾರಿ ಕುಸಿತದಿಂದಾಗಿ ತಾಲ್ಲೂಕಿನಾದ್ಯಂತ ಏಲಕ್ಕಿ ಬಾಳೆ ಬೆಳೆದ ನೂರಾರು ರೈತರು ಕಂಗಾಲಾಗಿದ್ದು, ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನ್ಯ ದಾರಿ ಕಾಣದೇ ಮಧ್ಯವರ್ತಿಗಳು ಹೇಳಿದಷ್ಟು ದರಕ್ಕೆ ಬಾಳೆಯನ್ನು ಮಾರಿ ಕೈತೊಳೆದುಕೊಳ್ಳುತ್ತಿದ್ದಾರೆ.

ತಾಲ್ಲೂಕಿನ ಕೊರ್ಲಹಳ್ಳಿ, ಗಂಗಾಪುರ, ಶಿಂಗಟಾಲೂರು, ಹಮ್ಮಿಗಿ, ಜಾಲವಾಡಿಗೆ, ಗುಮ್ಮಗೋಳ ಮೊದಲಾದ ಗ್ರಾಮಗಳ ನೂರಾರು ಎಕರೆ ಪ್ರದೇಶದಲ್ಲಿ ರೈತರು ಏಲಕ್ಕಿ ಬಾಳೆಯನ್ನು ಬೆಳೆದಿದ್ದಾರೆ. ಬಾಳೆ ಈಗ ಕೊಯ್ಲಿಗೆ ಬಂದಿದ್ದು, ಕನಿಷ್ಠ ₹ 10ರಿಂದ ಗರಿಷ್ಠ ₹ 14ಕ್ಕೆ ಕೆಜಿಯಂತೆ ಬಾಳೆ ಮಾರಾಟವಾಗುತ್ತಲಿದೆ. ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದ್ದು, ರೈತರು ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಮಿಳುನಾಡು, ಮಹಾರಾಷ್ಟ್ರ ಮೊದಲಾದ ಅಕ್ಕ ಪಕ್ಕದ ರಾಜ್ಯಗಳಿಂದ ಕಳೆದ ವರ್ಷ ರೈತರು ತಲಾ ₹ 24- ₹ 28ಕ್ಕೆ ಒಂದು ಸಸಿಯನ್ನು ಖರೀದಿಸಿ ತಂದಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ಸಾಮಾನ್ಯವಾಗಿ 1,200 ಸಸಿಗಳನ್ನು ನೆಡಬಹುದು. ಕೇವಲ ಬಾಳೆ ಸಸಿಗಳಿಗಾಗಿಯೇ ಎಕರೆ ಜಮೀನಿಗೆ ರೈತರು ಸುಮಾರು ₹ 30,000 ಖರ್ಚು ಮಾಡಿದ್ದಾರೆ. ಗೊಬ್ಬರ, ಕ್ರಿಮಿನಾಶಕ, ಪೋಷಕಾಂಶಗಳ ಪೂರೈಕೆ, ಕೂಲಿ ಕಾರ್ಮಿಕರ ವೇತನ ಮೊದಲಾದವುಗಳಿಗಾಗಿ ರೈತರು ಒಂದು ಎಕರೆ ಬಾಳೆ ಬೆಳೆಯಲು ಲಕ್ಷಕ್ಕಿಂತ ಹೆಚ್ಚು ಹಣ ಖರ್ಚು ಮಾಡಿದ್ದಾರೆ.

ADVERTISEMENT

ಇದೀಗ ಬಾಳೆ ಕೊಯ್ಲಿಗೆ ಬಂದಿದ್ದು, ಬಾಳೆ ಖರೀದಿಸುವ ಮಧ್ಯವರ್ತಿಗಳು ರೈತರ ಜಮೀನಿಗೆ ಬಂದು ರೈತರಿಂದ ₹ 12- ₹ 14ಕ್ಕೆ ಕೇಜಿಯಂತೆ ಖರೀದಿಸುತ್ತಿದ್ದಾರೆ. ಇದರಿಂದ ರೈತರಿಗೆ ಭಾರಿ ನಷ್ಟ ಉಂಟಾಗುತ್ತಿದ್ದು, ಖರ್ಚು ಹಾಗೂ ಆದಾಯಗಳ ನಡುವೆ ಭಾರಿ ವ್ಯತ್ಯಾಸವಾಗುತ್ತಿದೆ. ಕಳೆದ ವರ್ಷ ಕನಿಷ್ಠ ₹ 30ರಿಂದ ಗರಿಷ್ಠಟ ₹ 45ರವರೆಗೆ ಬಾಳೆ ಮಾರಾಟವಾಗಿತ್ತು. ಈ ವರ್ಷವೂ ಬಂಪರ್ ಬೆಲೆ ಬರಬಹುದು ಎಂದು ನಿರೀಕ್ಷಿಸಿದ್ದ ರೈತರಿಗೆ ಭಾರಿ ನಿರಾಸೆಯಾಗಿದೆ. ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.

ಬೇರೆ ಬೆಳೆಗಳಂತೆ ಬಾಳೆಯನ್ನು ಸಂಗ್ರಹಿಸಿ ಬೆಲೆ ದೊರೆತಾಗ ಮಾರಾಟ ಮಾಡಲು ಬರುವುದಿಲ್ಲ. ಬಾಳೆಯು ಗಿಡದಲ್ಲಿ ಬಲಿತ ತಕ್ಷಣ ಕೊಯ್ದು ಮಾರಾಟ ಮಾಡದಿದ್ದರೆ, ಗೊನೆಯು ಗಿಡದಲ್ಲಿಯೇ ಹಣ್ಣಾಗಿ ಕೊಳೆತು ಹೋಗುತ್ತದೆ. ಬಾಳೆ ಬೆಳೆದ ರೈತರಿಗೆ ಇದೊಂದು ಬಹುದೊಡ್ಡ ಸಮಸ್ಯೆಯಾಗಿದೆ. ಬಲಿತ ಗೊನೆಯನ್ನು ತಕ್ಷಣ ಮಾರಾಟ ಮಾಡದಿದ್ದರೆ, ಬರುವಷ್ಟು ಹಣವೂ ಬರುವುದಿಲ್ಲ. ಹೀಗಾಗಿ ಅನ್ಯ ದಾರಿ ಕಾಣದೇ ರೈತರು ಬಂದಷ್ಟಾದರೂ ಬರಲಿ ಎಂದು ಮಧ್ಯವರ್ತಿಗಳು ಹಾಗೂ ವ್ಯಾಪಾರಸ್ಥರು ಹೇಳಿದಷ್ಟು ಬೆಲೆಗೆ ಬಾಳೆಯನ್ನು ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಮುಂಡರಗಿ ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ಜಮೀನೊಂದರಲ್ಲಿ ಮಾರುಕಟ್ಟೆಗೆ ರವಾನಿಸಲು ಕೊಯ್ಲು ಮಾಡಿಟ್ಟಿರುವ ಏಲಕ್ಕಿ ಬಾಳೆ ಗೊನೆಗಳು
ಉತ್ತಮ ಬೆಲೆ ದೊರೆಯುತ್ತದೆ ಎನ್ನುವ ಭರವಸೆಯ ಮೇಲೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಏಲಕ್ಕಿ ಬಾಳೆ ಬೆಳೆದಿದ್ದೆ. ಈಗ ಬೆಲೆ ಪಾತಾಳಕ್ಕಿಳಿದಿದ್ದು ಲಕ್ಷಾಂತರ ರುಪಾಯಿ ನಷ್ಟ ಅನುಭವಿಸಬೇಕಾಗಿದೆ
ಈರಣ್ಣ ಭಜಂತ್ರಿ ಬಾಳೆ ಬೆಳೆದ ರೈತ ಶಿಂಗಟಾಲೂರ

ಮಧ್ಯವರ್ತಿಗಳಿಗೆ ಲಾಭ

ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆಹಣ್ಣನ್ನು ಈಗಲೂ ₹ 50- ₹ 60 ಕ್ಕೆ ಕೇಜಿಯಂತೆ ಮಾರಾಟ ಮಾಡಲಾಗುತ್ತಿದೆ. (ದೀಪಾವಳಿಯಲ್ಲಿ ₹ 80ಕ್ಕೆ ಕೇಜಿಯಂತೆ ಮಾರಾಟವಾಗಿದೆ). ರೈತರಿಂದ ಬಾಳೆ ಖರೀದಿಸುವ ಮಧ್ಯವರ್ತಿಗಳು ಹಾಗೂ ವ್ಯಾಪಾರಸ್ಥರು ರೈತರಿಗೆ ಪುಡಿಗಾಸು ನೀಡಿ ಭಾರಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಎಲ್ಲ ಮಾರುಕಟ್ಟೆ ಹಾಗೂ ವ್ಯಾಪಾರಗಳಲ್ಲಿ ಇರುವಂತೆ ಮಧ್ಯವರ್ತಿಗಳು ಹಾಗೂ ಗ್ರಾಹಕರ ನಡುವೆ ಇಲ್ಲಿಯೂ ರೈತರು ಬಲಿಪಶುವಾಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.