ಲಕ್ಷ್ಮೇಶ್ವರ: ಸಮೀಪದ ಮಾಗಡಿ ಕೆರೆಗೆ ಪ್ರತಿವರ್ಷ ವಿದೇಶಗಳಿಂದ ಸಾವಿರಾರು ಪಕ್ಷಿಗಳು ವಲಸೆ ಬರುತ್ತವೆ. ಈ ಬಾರಿ ವಿದೇಶಿ ಬಾನಾಡಿಗಳು ಮಾಗಡಿ ಸಮೀಪದ ಶೆಟ್ಟಿಕೇರಿ ಕೆರೆಗೂ ಬಂದಿಳಿದಿವೆ.
ಯೂರೋಪ್, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಮಯನ್ಮಾರ್, ಭೂತಾನ್ ಲಡಾಕ್‍ನಿಂದ 30ಕ್ಕೂ ಹೆಚ್ಚು ಜಾತಿಯ ಸಾವಿರಾರು ಪಕ್ಷಿಗಳು ಶೆಟ್ಟಿಕೇರಿ ಕೆರೆಗೆ ವಲಸೆ ಬಂದಿವೆ. 134 ಎಕರೆ ವಿಸ್ತೀರ್ಣದ ಈ ಕೆರೆಯಲ್ಲಿ ಈಗ ನಿತ್ಯ ಪಕ್ಷಿಗಳ ಕಲರವ.
ಶೆಟ್ಟಿಕೇರಿಗೆ ವಲಸೆ ಬಂದಿರುವ ವಿದೇಶಿ ಹಕ್ಕಿಗಳಲ್ಲಿ ಬಾರ್‌ಹೆಡೆಡ್ ಗೂಸ್(ಪಟ್ಟೆತಲೆ ಹೆಬ್ಬಾತು), ಕಂದು ಬಾತು( ಬ್ರಾಹ್ಮಿಣಿ ಡಕ್), ಬಣ್ಣದ ಕೊಕ್ಕರೆ (ಪೇಟೆಂಡ್ ಸ್ಪಾರ್ಕ್), ಬಿಳಿ ಕೆಂಬರಲು(ವೈಟ್ ಐಬೀಸ್) ಕರಿ ಕೆಂಬರಲು( ಬ್ಲಾಕ್ ಹೆಡೆಡ್ ಐಬೀಸ್), ಗಾರ್ಗಿನಿ, ಕಾಮನ್ ಪೊಚಾಡ್, ಸ್ಪಾಟ್ ಬಿಲ್ಡ್ ಡಕ್ ಪ್ರಮುಖವಾಗಿವೆ. ಇದರ ಜತೆಗೆ ದೇಶಿ ಪಕ್ಷಿಗಳಾದ ನೀರು ಕಾಗೆ, ನೆರಳೆ ಜಂಬು ಕೋಳಿ, ಬೂದು ಮಂಗಟೆ ಹಕ್ಕಿ ಕೂಡ ಪಕ್ಷಿ ಪ್ರೇಮಿಗಳನ್ನು ಆಕರ್ಷಿಸುತ್ತಿವೆ.
ಪ್ರತಿ ವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ಪಕ್ಷಿಗಳು ಮಾಗಡಿ ಕೆರೆಗೆ ಬಂದಿಳಿಯುತ್ತಿದ್ದವು. ಈ ಬಾರಿ ಬಟ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶೆಟ್ಟಿಕೇರಿ ಕೆರೆಯತ್ತ ಮುಖ ಮಾಡಿವೆ. ಮಾಗಡಿ ನಂತರ ಈ ಕೆರೆ ಕೂಡ ಈಗ ಪಕ್ಷಿಗಳ ತಾಣವಾಗಿ ಗುರುತಿಸಿಕೊಂಡಿದೆ. ಈ ಕೆರೆಯು ಚನ್ನಪಟ್ಟಣ ಮತ್ತು ಅಕ್ಕಿಗುಂದ ಗ್ರಾಮಗಳ ಮಧ್ಯದ ಗುಡ್ಡಗಳ ನಡುವಿನ ಪ್ರಶಾಂತ ವಾತಾವರಣದಲ್ಲಿದ್ದು, ಪಕ್ಷಿಗಳಿಗೆ ನೈಸರ್ಗಿಕ ಆವಾಸ ತಾಣವಾಗಿದೆ. ಬಾನಾಡಿಗಳು ಬೆಳಿಗ್ಗೆ 6ರಿಂದ 9ರವರೆಗೆ ಹಾಗೂ ಸಂಜೆ 4ರಿಂದ 6ರವರೆಗೆ ಆಹಾರ ಅರಸುತ್ತಾ ಪಕ್ಕದ ಜಮೀನುಗಳಿಗೆ ಹೋಗುತ್ತವೆ. ಅಲ್ಲಿ ಕಡಲೆ, ಶೇಂಗಾ ತಿಂದು ಮತ್ತೆ ಕರೆಗೆ ಮರಳುತ್ತವೆ. ಉಳಿದ ಸಮಯದಲ್ಲಿ ಹಿಂಡು ಹಿಂಡಾಗಿ ಕೆರೆಯಲ್ಲಿ ತೇಲುವ ದೃಶ್ಯ ನಯನ ಮನೋಹರ.
‘ಈ ವರ್ಷ ಹೆಚ್ಚು ಮಳೆಯಾಗಿರುವುದರಿಂದ ಮಾಗಡಿ ಕೆರೆಯಲ್ಲಿ ಹೆಚ್ಚು ನೀರು ಸಂಗ್ರಹವಾಗಿದೆ. ಕೆರೆ ಹೂಳು ತೆಗೆದಿರುವುದರಿಂದ ಆಳವೂ ಹೆಚ್ಚಿದೆ. ಕೆರೆಯ ಆಳ ಹೆಚ್ಚಿದ್ದರೆ, ಪಕ್ಷಿಗಳಿಗೆ ಅಷ್ಟೊಂದು ಅನುಕೂಲಕರ ಆಗಿರುವುದಿಲ್ಲ. ಹೀಗಾಗಿ ಈ ಬಾರಿ ಅಲ್ಲಿಗೆ ಬಂದ ಒಂದಿಷ್ಟು ಪಕ್ಷಿಗಳು ಶೆಟ್ಟಿಕೇರಿ ಕೆರೆಗೂ ಬಂದಿವೆ’ ಎಂದು ವಲಯ ಅರಣ್ಯಾಧಿಕಾರಿ ಸತೀಶ ಪೂಜಾರ ಮತ್ತು ಉಪವಲಯ ಅರಣ್ಯಾಧಿಕಾರಿ ಎಸ್.ಎಲ್. ವಿಭೂತಿ ಹೇಳಿದರು.
‘ವಿದೇಶಿ ಪಕ್ಷಿಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಅರಣ್ಯ ಇಲಾಖೆ ಮೇಲಿದೆ. ಶೆಟ್ಟಿಕೇರಿ ಕೆರೆಯಲ್ಲಿನ ಪಕ್ಷಿಗಳನ್ನು ವೀಕ್ಷಿಸಲು ಅರಣ್ಯ ಇಲಾಖೆಯವರು ವೀಕ್ಷಣಾ ಗೋಪುರ ನಿರ್ಮಿಸಬೇಕು’ ಎಂದು ವಕೀಲ ಬಿ.ಎಸ್. ಬಾಳೇಶ್ವರಮಠ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.