ಗದಗ: ‘ಸಾರ್ವಜನಿಕರು ತಮ್ಮ ಮನೆಗಳನ್ನು ಸ್ವಚ್ಛವಾಗಿಟ್ಟುಕೊಂಡಂತೆ; ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು’ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷ ಸುಭಾಷ್.ಬಿ.ಅಡಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದರು.
‘ನಗರಗಳಲ್ಲಿ ತ್ಯಾಜ್ಯ ವಿಲೇವಾರಿ ಕೇಂದ್ರಗಳು ಹಾಗೂ ಮರುಬಳಕೆ ಘಟಕಗಳನ್ನು ಇನ್ನಷ್ಟು ಬಲಪಡಿಸಬೇಕು. ಹಳೆಯ ಕಸದ ಗುಡ್ಡೆಗಳನ್ನು ತೆರವುಗೊಳಿಸಿ ಶುದ್ಧೀಕರಣಕ್ಕೆ ಕ್ರಮ ಕೈಗೊಳ್ಳಬೇಕು. ಮನೆ ಮನೆಗಳಲ್ಲಿ ಕಸ ವಿಂಗಡಣೆ ಕಡ್ಡಾಯಗೊಳಿಸಿ, ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಪರಿಣಾಮಕಾರಿಯಾಗಿ ನಡೆಸಬೇಕು. ಮಳೆ ನೀರು ಮತ್ತು ಒಳಚರಂಡಿ ನೀರು ಮಿಶ್ರಣವಾಗದಂತೆ ತಾಂತ್ರಿಕ ಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು’ ಎಂದು ನಿರ್ದೇಶಿಸಿದರು.
‘ಕಟ್ಟಡ ನಿರ್ಮಾಣದಿಂದ ಉಂಟಾಗುವ ಕಸ ಮತ್ತು ವೈದ್ಯಕೀಯ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಗರಗಳಲ್ಲಿ ಮಲಿನ ಜಲ ಶುದ್ಧೀಕರಣ ಘಟಕಗಳನ್ನು (ಎಸ್‌ಟಿಪಿ) ದುರಸ್ತಿಪಡಿಸಿ ನಿರಂತರ ಕಾರ್ಯನಿರ್ವಹಣೆಗೆ ಆದ್ಯತೆ ನೀಡಬೇಕು. ಎಸ್‌ಟಿಪಿ ಘಟಕಗಳ ಬಳಿ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು’ ಎಂದು ಸೂಚಿಸಿದರು.
ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ ಸೇರಿದಂತೆ ಎಲ್ಲ ತರಹದ ಕಾರ್ಯಕ್ರಮ, ಸ್ಥಳಗಳಲ್ಲಿಯೂ ಕಸ ವಿಂಗಡನೆ ಮೂಲದಲ್ಲಿಯೇ ಆಗುವ ಮೂಲಕ ವಿಲೇವಾರಿಯಾಗಬೇಕು. ಶಾಲಾ ಮಕ್ಕಳಿಗೆ ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಬೇಕು. ಕಸ ವಿಂಗಡನೆ ಉಪಯುಕ್ತತೆ ಬಗ್ಗೆ ತಿಳಿಸಿಕೊಡಬೇಕು’ ಎಂದು ತಿಳಿಸಿದರು.
ಸ್ಥಳೀಯ ಸಂಸ್ಥೆಗಳಿಂದ ವ್ಯಾಪಾರ ಮಾಡಲು ಪರವಾನಗಿ ನೀಡುವಾಗ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ ಎಂಬ ಷರತ್ತಿನೊಂದಿಗೆ ಪರವಾನಿಗೆ ನೀಡಬೇಕು. ಇದಕ್ಕೆ ತಪ್ಪಿದಲ್ಲಿ ಪರವಾನಗಿ ರದ್ದು ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ಡಿವೈಎಸ್‌ಪಿ ಮಹಾಂತೇಶ್ ಸಜ್ಜನರ, ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ, ಡಿಡಿಪಿಐ ಆರ್.ಎಸ್.ಬುರುಡಿ, ಜಿಲ್ಲಾ ಪಂಚಾಯಿತಿ ಅಧಿಕಾರಿ ಚಳಗೇರಿ, ಡಿಎಚ್‌ಒ ಡಾ.ಎಸ್.ಎಸ್.ನೀಲಗುಂದ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಕ ಬಸವಂತಪ್ಪ, ಪರಿಸರ ಮಾಲಿನ್ಯ ಅಧಿಕಾರಿಗಳು ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರತಿದಿನ ಕಸ ಸಂಗ್ರಹಣೆ ವಿಲೇವಾರಿ:
ಸ್ಥಳೀಯ ಸಂಸ್ಥೆವಾರು ಪ್ರತಿದಿನ ಸಂಗ್ರಹಿಸುವ ಕಸದ ಮಾಹಿತಿಯನ್ನು ಅಧಿಕಾರಿಗಳು ಒದಗಿಸಿದರು. ಗದಗನಲ್ಲಿ 75 ಟನ್ ಗಜೇಂದ್ರಗಡ 11 ಟನ್ ರೋಣ 8 ಮುಂಡರಗಿ 10 ಲಕ್ಷ್ಮೇಶ್ವರ 15 ನರಗುಂದ 14 ನರೇಗಲ್ ಶಿರಹಟ್ಟಿ ಹಾಗೂ ಮುಳುಗುಂದದಲ್ಲಿ ತಲಾ 7 ಟನ್ ಪ್ರತಿದಿನ ಕಸ ಸಂಗ್ರಹಣೆ ಮಾಡಿ ವಿಂಗಡಣೆ ಮೂಲಕ ವಿಲೇವಾರಿ ಮಾಡಲಾಗುತ್ತಿದೆ. ಅದೇರೀತಿ ಗ್ರಾಮೀಣ ಭಾಗದಲ್ಲಿ ಒಣಕಸವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಗ್ರಹ ಮಾಡಲಾಗುತ್ತಿದೆ ಎಂದು ಮಾಹಿತಿ ಒದಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.