
ಗದಗ: ‘ಕವಿತೆಗಳು ಭಾವಪೂರ್ಣವಾಗಿದ್ದು ಅವು ಜನರ ಬಾಯಲ್ಲಿ ಸದಾ ನಲಿದಾಡುವಂತಿದ್ದರೆ ಅಮರವಾಗಿ ಉಳಿಯುತ್ತವೆ. ಇಂಥ ರಸಭರಿತ ಭಾವಗೀತೆಗಳಲ್ಲಿ ಮರುಜನ್ಮ ಪಡೆಯುತ್ತ ವರಕವಿ ಬೇಂದ್ರೆಯವರು ಜನಮಾನಸದಲ್ಲಿ ಸದಾ ಸ್ಮರಣೀಯರಾಗಿ ಉಳಿದಿದ್ದಾರೆ’ ಎಂದು ವರಕವಿ ದ.ರಾ.ಬೇಂದ್ರೆ ಅವರ ಮೊಮ್ಮಗಳು ಪುನರ್ವಸು ಬೇಂದ್ರೆ ಹೇಳಿದರು.
ನಗರದ ಅಖಿಲ ಕರ್ನಾಟಕ ಕಬ್ಬಿಗರ ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಬೇಂದ್ರೆ ಜಯಂತಿ ಹಾಗೂ ಬೇಂದ್ರೆ ಗೀತಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಅಜ್ಜ ದ.ರಾ.ಬೇಂದ್ರೆ ಅವರ ಮೇಲಿನ ಅಭಿಮಾನದಿಂದ ಗದುಗಿನ ಕಬ್ಬಿಗರ ಕೂಟದ ಕವಿ ಬಳಗ ಧಾರವಾಡಕ್ಕೆ ಬಂದು ಕಾರ್ಯಕ್ರಮ ನಡೆಸಿದ್ದು ಸಂತಸದ ವಿಷಯ’ ಎಂದರು.
ಉತ್ತರ ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿ ಸುಮಾ ಹಡಪದ ಮಾತನಾಡಿ, ‘ಮಾರ್ಗ ಪರಂಪರೆಯ ಕವಿಗಳಿಗಿಂತ ದೇಸಿ ಪರಂಪರೆಯ ಕವಿಗಳು ಜನಮನಕ್ಕೆ ಹೆಚ್ಚು ಆಪ್ತರಾಗುತ್ತಾರೆ. ಬೇಂದ್ರೆಯವರು ಕೂಡ ಅಚ್ಚ ದೇಸಿ ಪ್ರತಿಭೆಯ ಕವಿಯಾಗಿದ್ದು ಆಡು ಭಾಷೆಯನ್ನು ಬೇಂದ್ರೆ ಸಮರ್ಥವಾಗಿ ದುಡಿಸಿಕೊಂಡು ಗೇಯ ಗೀತೆಗಳನ್ನು ರಚಿಸಿದರು. ಅಕ್ಷರ ತಿಳಿಯದವರ ಬಾಯಲ್ಲಿ ಕೂಡ ಬೇಂದ್ರೆಯವರ ಗೀತೆಗಳು ಇಂದಿಗೂ ಜೀವಂತವಾಗಿದ್ದು, ಅವು ಬೇಂದ್ರೆಯವರಿಗೆ ಭಾವಗೀತೆಗಳ ದೊರೆ ಪಟ್ಟ ನೀಡಿವೆ’ ಎಂದರು.
ಜಾನಪದ ಸಂಶೋಧನಾ ಕೇಂದ್ರದ ಸಂಸ್ಥಾಪಕಿ ವಿಶ್ವೇಶ್ವರಿ ಹಿರೇಮಠ ಅವರು ‘ಬಾರೋ ಸಾಧನ ಕೇರಿಗೆ’ ಎಂಬ ಬೇಂದ್ರೆಯವರ ಜನಪ್ರಿಯ ಗೀತೆಯನ್ನು ಹಾಡಿ ಕಾರ್ಯಕ್ರಮ ಉದ್ಘಾಟಿಸಿದರು.
ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷ ಗು.ರು. ಕಲ್ಮಠ, ಕಥೆಗಾರ, ಸಾಹಿತಿ ಬಸವರಾಜ ಗಣಪ್ಪನವರ, ಕಲಾವಿದ ನಾಗಭೂಷಣ ಹಿರೇಮಠ, ನಿವೃತ್ತ ಶಿಕ್ಷಕ ಎಸ್.ಎಸ್. ಮಲ್ಲಾಪೂರ ಮಾತನಾಡಿದರು.
ಧಾರವಾಡದ ಜಾನಪದ ಸಂಶೋಧನಾ ಕೇಂದ್ರದ ಕಲಾವಿದರು ಬೇಂದ್ರೆಯವರ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಗಾಯಕ ಆರ್.ಡಿ. ನಾಡಿಗೇರ ಅವರು ಡಿ.ವಿ. ಬಡಿಗೇರ ರಚಿಸಿದ ‘ಅಂಬಿಕಾತನಯದತ್ತ’ ಭಾವಗೀತೆಗೆ ಧ್ವನಿ ನೀಡಿ ಗಮನ ಸೆಳೆದರು.
ನಜೀರ ಸಂಶಿ ಸ್ವಾಗತಿಸಿದರು. ಬಾಬಾಜಾನ ಯಲಿಗಾರ ವಂದಿಸಿದರು. ಟಿ. ಐ.ಗದಗಿನ, ಶ್ರೀಶ ಕಬಾಡಿ, ರಾಘವೇಂದ್ರ ಮೇದಾರ, ಬಿ.ಎಸ್. ಶೈನಾಜ್, ಆಶಾ ಸೈಯದ್, ಸುನಂದಾ ಹೊಸಮನಿ, ಖೈರುನ್ನೀಸಾ ಖಾಜಿ, ಮೈನಾರಾಣಿ ದಂಡಾವತಿ, ಗಿರಿಜಾ ಶೆಕ್ಕಿ, ಜಯಶ್ರೀ ಹುಳಬೂತೆ, ಗಂಗವ್ವ ಮುರಗೋಡ ಇದ್ದರು.
ದ.ರಾ. ಬೇಂದ್ರೆ ವಾಮನ ಬೇಂದ್ರೆಯವರು ಐದು ದಶಕಗಳ ಹಿಂದೆ ಕಬ್ಬಿಗರ ಕೂಟದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಬ್ಬಿಗರ ಕೂಟದ ಬಗ್ಗೆ ಅವರ ಪ್ರೀತಿ ವಾತ್ಸಲ್ಯದ ಅನನ್ಯಮನೋಹರ ಮೇರವಾಡೆ ಕಬ್ಬಿಗರ ಕೂಟದ ಅಧ್ಯಕ್ಷ
ದ.ರಾ. ಬೇಂದ್ರೆಯವರು ದೇಸಿ ಪರಂಪರೆಯ ಬಹು ಯಶಸ್ವಿ ಕವಿಯಾಗಿದ್ದರು. ಕನ್ನಡ ಇರುವವರೆಗೆ ಬೇಂದ್ರೆಯವರು ತಮ್ಮ ಭಾವಗೀತೆಗಳ ಮೂಲಕ ಜೀವಂತವಾಗಿರುತ್ತಾರೆಸಾಹಿತಿ ಡಿ.ವಿ. ಬಡಿಗೇರ ಕಬ್ಬಿಗರ ಕೂಟದ ಸಂಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.