
ಗದಗ: ಗುತ್ತಿಗೆದಾರನಿಂದ ₹5 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಮತ್ತು ಅವರ ಇಬ್ಬರು ಆಪ್ತ ಸಹಾಯಕರು ಶನಿವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗೆ ಸಂಬಂಧಿಸಿದಂತೆ ಚಂದ್ರು ಲಮಾಣಿ ಅವರು ಗುತ್ತಿಗೆದಾರನ ಬಳಿ ₹11 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಗದಗ ತಾಲ್ಲೂಕಿನ ಚಿಂಚಲಿ ಗ್ರಾಮದ ಪ್ರಥಮದರ್ಜೆ ಗುತ್ತಿಗೆದಾರ ವಿಜಯ್ ಪೂಜಾರ ಲೋಕಾಯಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ತಮ್ಮದೇ ಮಾಲೀಕತ್ವದ ಬಾಲಾಜಿ ಆಸ್ಪತ್ರೆಯಲ್ಲಿ ಶನಿವಾರ ಮಧ್ಯಾಹ್ನ 2.15ರ ಸುಮಾರಿಗೆ ಚಂದ್ರು ಲಮಾಣಿ ಮತ್ತು ಅವರ ಆಪ್ತ ಸಹಾಯಕರಾದ ಮಂಜುನಾಥ ವಾಲ್ಮೀಕಿ ಮತ್ತು ಗುರು ನಾಯ್ಕ್ ₹5 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ದಾಳಿ ನಡೆಸಿದ ವೇಳೆ ಗುರು ನಾಯ್ಕ್ ಅವರು ₹50 ಸಾವಿರ ನಗದು ಇದ್ದ ಕವರ್ ಅನ್ನು ಆಸ್ಪತ್ರೆ ಹಿಂಭಾಗದ ಖಾಸಗಿ ಶಾಲೆಯೊಂದರ ಕಾಂಪೌಂಡ್ ಒಳಕ್ಕೆ ಎಸೆದ ಘಟನೆಯೂ ನಡೆಯಿತು. ಆ ಹಣ ಹಾಗೂ ಆಸ್ಪತ್ರೆಯಲ್ಲಿ ಸಿಕ್ಕಿದ ₹4.50 ಲಕ್ಷವನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಚಂದ್ರು ಲಮಾಣಿ ಅವರನ್ನು ಗದಗ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ಮಾಡಿಸಿದ ಬಳಿಕ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು’ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನ ವಿವರ: ಗದಗ ತಾಲ್ಲೂಕಿನ ಚಿಂಚಲಿ ಗ್ರಾಮದ ಪ್ರಥಮದರ್ಜೆ ಸಿವಿಲ್ ಗುತ್ತಿಗೆದಾರ ವಿಜಯ ಪೂಜಾರ ಅವರು ‘ಶಾಸಕ ಮತ್ತು ಆಪ್ತ ಸಹಾಯಕರು ಬೆದರಿಕೆ ಒಡ್ಡಿ, ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ಫೆ.18ರಂದು ಗದಗ ಲೋಕಾಯುಕ್ತ ಠಾಣೆಗೆ ದೂರು ಸಲ್ಲಿಸಿದ್ದರು.
ವಿಜಯ್ ಅವರು ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿ ಮಾಡುತ್ತಿದ್ದು, 2025ರ ಜುಲೈನಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಲಕ್ಷ್ಮೇಶ್ವರ ತಾಲ್ಲೂಕಿನ ಸಂಕದಾಳ ಗ್ರಾಮದಲ್ಲಿ ಹಳ್ಳಕ್ಕೆ ತಡೆಗೋಡೆ ನಿರ್ಮಿಸುವ ಎರಡು ಕಾಮಗಾರಿಗಳನ್ನು ನಿರ್ವಹಿಸಲು ಕಾರ್ಯಾದೇಶ ಪಡೆದಿದ್ದರು.
‘ಕಾಮಗಾರಿಗೆ ಶಿರಹಟ್ಟಿ ಕ್ಷೇತ್ರದ ಶಾಸಕರು ತೊಂದರೆ ಮಾಡುತ್ತಿದ್ದು, ನಾನು ಇವರನ್ನು ಭೇಟಿಯಾದಾಗ ಶಾಸಕರ ಆಪ್ತ ಸಹಾಯಕರಾದ ಮಂಜುನಾಥ ವಾಲ್ಮೀಕಿ ಮತ್ತು ಗುರು ನಾಯ್ಕ್, ‘ನಮಗೆ ತಿಳಿಸದೇ ಕಾಮಾಗಾರಿ ಏಕೆ ಮಾಡುತ್ತಿದ್ದೀರಾ? ಟೆಂಡರ್ ಕ್ಯಾನ್ಸಲ್ ಮಾಡಿಸುವೆ’ ಎಂದು ಬೆದರಿಸಿದ್ದರು.
‘12 ಪರ್ಸೆಂಟ್ ಕಮಿಷನ್ ಕೊಟ್ಟರೆ ಮಾತ್ರ ಕೆಲಸ ಮಾಡಲು ಬಿಡುವೆ. ಇಲ್ಲದಿದ್ದರೆ ರೌಡಿಗಳನ್ನು ಕಳುಹಿಸಿ ಬುದ್ಧಿ ಕಲಿಸುವೆ’ ಎಂದು ಧಮ್ಕಿ ಹಾಕಿ, ಎರಡೂ ಕಾಮಗಾರಿಗೆ ₹11 ಲಕ್ಷ ಹಣವನ್ನು ಲಂಚವಾಗಿ ಕಮಿಷನ್ ರೂಪದಲ್ಲಿ ಕೊಡಲು ಒತ್ತಾಯ ಮಾಡಿದ್ದರು’ ಎಂದು ವಿಜಯ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಬಿಜೆಪಿಯವರು ಈ ದೇಶದಲ್ಲೇ ಅತ್ಯಂತ ಪ್ರಾಮಾಣಿಕರಲ್ಲವೇ? ಅವರು ಭ್ರಷ್ಟಾಚಾರಿಗಳು ಆಗಿರುವುದಿಲ್ಲವಲ್ಲ! ನಿಮಗೆ ಯಾರೊ ತಪ್ಪು ಮಾಹಿತಿ ನೀಡಿರಬೇಕುಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ
ಚಂದ್ರು ಲಮಾಣಿ ಅವರು ₹ 5 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ವಿಷಯದ ಬಗ್ಗೆ ನನಗಿನ್ನೂ ಮಾಹಿತಿ ಇಲ್ಲ. ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯಿಸುವೆಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ವೈದ್ಯರಾಗಿದ್ದಾಗಲೂ ಪ್ರಕರಣ ದಾಖಲು
ಶಿರಹಟ್ಟಿ ತಾಲ್ಲೂಕು ಆಸ್ಪತ್ರೆಯಲ್ಲಿ ತಜ್ಞ ವೈದ್ಯರಾಗಿದ್ದ ಅವಧಿಯಲ್ಲೂ ಚಂದ್ರು ಲಮಾಣಿ ವಿರುದ್ಧ ಲೋಕಾಯುಕ್ತ ಪ್ರಕರಣ ದಾಖಲಾಗಿತ್ತು. ಇವರು ಬಿಜೆಪಿಯಿಂದ ಸ್ಪರ್ಧಿಸಿದಾಗ ಅವರು ನೌಕರಿಗೆ ನೀಡಿದ್ದ ರಾಜೀನಾಮೆ ಇನ್ನೂ ಅಂಗೀಕಾರಗೊಂಡಿರಲಿಲ್ಲ. ಚಂದ್ರು ಲಮಾಣಿ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಆದ ನಂತರವೂ ಅವರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿತ್ತು. ಆಗಿನ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು 2023ರ ಏ. 17ರಂದು ಆರೋಗ್ಯ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಈ ಮಾಹಿತಿ ನೀಡಿದ್ದರು. ‘ಚಂದ್ರು ಲಮಾಣಿ ಅವರು ತಮ್ಮ ಮೇಲಿನ ಆರೋಪಗಳಿಂದ ನುಣುಚಿಕೊಳ್ಳಲು 2021ರ ಜುಲೈ 31ರಂದು ವೈದ್ಯ ವೃತ್ತಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆ ಈವರೆಗೆ ಅಂಗೀಕಾರಗೊಂಡಿಲ್ಲ. ಸರ್ಕಾರಿ ನೌಕರರಾಗಿದ್ದರೂ ರಾಜಕೀಯ ಪ್ರಭಾವ ಬಳಸಿ ಶಿರಹಟ್ಟಿ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿಕೊಂಡು ಸರ್ಕಾರಿ ನೌಕರರ ನಿಯಮಗಳ ಶಿಸ್ತು ಉಲ್ಲಂಘನೆ ಮಾಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಪತ್ರದಲ್ಲಿ ತಿಳಿಸಿದ್ದರು. ಕೊನೆಗೂ ಅವರಿಗೆ ಬಿಜೆಪಿಯಿಂದ ಬಿ ಫಾರಂ ಸಿಕ್ಕಿತ್ತು.
ಬಲೆಗೆ ಬಿದ್ದಿದ್ದ ಶಾಸಕರ ಪ್ರವರ
ವೈ.ಸಂಪಂಗಿ(ಬಿಜೆಪಿ) ಕೆಜಿಎಫ್
ಬಿಜೆಪಿ ನೇತೃತ್ವದ ಸರ್ಕಾರದ ಮೊದಲ ಅವಧಿಯಲ್ಲಿ ಕೋಲಾರ ಜಿಲ್ಲೆ ಕೆಜಿಎಫ್ ಶಾಸಕ ವೈ. ಸಂಪಂಗಿ ಅವರು ವ್ಯಾಜ್ಯ ಪ್ರಕರಣವೊಂದರ ಇತ್ಯರ್ಥಕ್ಕೆ ₹5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 2009ರ ಜನವರಿ 29 ರಂದು ಶಾಸಕರ ಭವನದ ತಮ್ಮ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದಾಗಲೇ ಸಂಪಂಗಿಯವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ಬಳಿಕ ಬಂಧಿಸಿದ್ದರು. ₹50 ಸಾವಿರ ನಗದು ಹಾಗೂ ₹4.5 ಲಕ್ಷ ಲಂಚಕ್ಕೆ ಕೈಯೊಡ್ಡಿದ್ದರು. ಕರ್ನಾಟಕದಲ್ಲಿ ಶಾಸಕರೊಬ್ಬರನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ ಮೊದಲ ಪ್ರಕರಣವೂ ಇದಾಗಿತ್ತು. ಮಾಡಾಳ್ ವಿರೂಪಾಕ್ಷಪ್ಪ(ಬಿಜೆಪಿ) ಚನ್ನಗಿರಿ ಬಿಜೆಪಿ ನೇತೃತ್ವದ ಸರ್ಕಾರದ ಎರಡನೇ ಅವಧಿಯಲ್ಲಿ ದಾವಣಗೆರೆ ಜಿಲ್ಲೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆಎಸ್‌ಡಿಎಲ್) ಅಧ್ಯಕ್ಷರಾಗಿದ್ದರು. ನಿಗಮದ ಟೆಂಡರ್‌ಗೆ ಸಂಬಂಧಿಸಿದಂತೆ ಶಾಸಕರ ಮಗ ಹಾಗೂ ಸರ್ಕಾರಿ ಅಧಿಕಾರಿಯೂ ಆಗಿದ್ದ ಪ್ರಶಾಂತ್ ಮಾಡಾಳ್ 2023ರ ಮಾರ್ಚ್ 2 ರಂದು ₹40 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಅವರ ಖಾಸಗಿ ಕಚೇರಿಯಲ್ಲಿ ₹1.62 ಕೋಟಿ ನಗದು ಹಾಗೂ ಡಾಲರ್ಸ್ ಕಾಲೊನಿಯ ಮನೆಯಲ್ಲಿ ಸಂಗ್ರಹಿಸಲಾಗಿದ್ದ ₹6 ಕೋಟಿ ನಗದನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದರು. ವಿರೂಪಾಕ್ಷಪ್ಪ ಅವರನ್ನು ಇದೇ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.