
ಗದಗ: ‘ರಕ್ತದಾನ ಮಾಡುವ ಮೊದಲು ದಾನಿಯ ದೇಹದ ಉಷ್ಣತೆ, ನಾಡಿ ಬಡಿತ, ರಕ್ತದೊತ್ತಡ ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ಪರಿಶೀಲಿಸಲಾಗುತ್ತದೆ. ಇದು ದಾನಿಯ ಪ್ರಸ್ತುತ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ’ ಎಂದು ಡಾ.ಜಿ.ಬಿ. ಬಿಡಿನಹಾಳ ಹೇಳಿದರು.
ನಗರದ ರೇಣುಕಾ ಆಸ್ಪತ್ರೆ ವೈದ್ಯ ಡಾ.ಜಿ.ಬಿ. ಬಿಡಿನಹಾಳ ಅವರ 70ನೇ ಜನ್ಮದಿನ ಅಂಗವಾಗಿ ಅಭಿಮಾನಿ ಬಳಗದವರು ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದೇಹದಲ್ಲಿ ಕಬ್ಬಿಣಾಂಶದ ಮಟ್ಟ ಸಮತೋಲನದಲ್ಲಿರುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ’ ಎಂದರು.
‘ಪ್ರತಿ ಬಾರಿ ರಕ್ತದಾನ ಮಾಡಿದಾಗ ದೇಹವು ಸುಮಾರು 650 ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ. ಇದು ತೂಕ ಇಳಿಕೆಗೆ ಪರೋಕ್ಷವಾಗಿ ನೆರವಾಗುತ್ತದೆ. ಜತೆಗೆ ಕ್ಯಾನ್ಸರ್ ಅಪಾಯದ ಇಳಿಕೆ, ಯಕೃತ್ತಿನ ಆರೋಗ್ಯ ವೃದ್ಧಿಗೆ ನೆರವಾಗುತ್ತದೆ. ಆದಕಾರಣ, ರಕ್ತದಾನವು ಇತರರ ಜೀವ ಉಳಿಸುವುದರ ಜತೆಗೆ ದಾನಿಗಳ ಆರೋಗ್ಯಕ್ಕೂ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ’ ಎಂದು ಹೇಳಿದರು.
ಮಹಾದೇವಿ ಗು. ಬಿಡಿನಹಾಳ, ಡಾ. ಭರತ್, ಡಾ. ಭಾವನಾ, ರಾಘವೇಂದ್ರ, ಸುಧಾ ಹಾಗೂ ಅಭಿಮಾನಿಗಳಾದ ಹೂವಣ್ಣವರ, ಹುಚ್ಚಣ್ಣ ಶಹಪುರ, ಡಾ.ಮರಗಿ, ಡಾ.ಸುನೀತಾ, ಡಾ. ಸಲ್ಮಾ, ಕರಿಯಪ್ಪ ಜಂಗಳಿ, ಸುಭಾಷ್ ಪರಸು ನಾಯ್ಕರ್ ಸೇರಿದಂತೆ ಹಲವರು ಇದ್ದರು.
ಇದೇ ಸಂದರ್ಭದಲ್ಲಿ 31 ಜನರು ರಕ್ತದಾನ ಮಾಡಿದರು.
ಡಾ. ಬೀಡಿನಹಾಳನವರು ಗ್ರಾಮೀಣ ಹಿನ್ನೆಲೆಯಲ್ಲಿ ಬೆಳೆದು ಬಂದು ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಅವರ ಸಾಮಾಜಿಕ ಕಳಕಳಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆಎನ್.ಎಂ. ಅಂಬಲಿಯವರು ನಿವೃತ್ತ ಪ್ರಾಂಶುಪಾಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.