ADVERTISEMENT

ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳ 72ನೇ ಜಯಂತಿ: ಭಾವೈಕ್ಯ ದಿನ ಆಚರಿಸುವಂತೆ ಆಗ್ರಹ

ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳ 72ನೇ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 5:20 IST
Last Updated 22 ಫೆಬ್ರುವರಿ 2021, 5:20 IST
ಗದಗ ತೋಂಟದಾರ್ಯ ಮಠದಲ್ಲಿ ಭಾನುವಾರ ನಡೆದ ಲಿಂ.ಡಾ. ತೋಂಟದ ಸಿದ್ಧಲಿಂಗ ಶ್ರೀ ಜಯಂತಿಯಲ್ಲಿ ಲಿಂ. ಡಾ.ತೋಂಟದ ಸಿದ್ಧಲಿಂಗ ಶ್ರೀ ಕುರಿತು ಕೃತಿಗಳನ್ನು ಬಿಡುಗಡೆ ಮಾಡಲಾಯಿತು
ಗದಗ ತೋಂಟದಾರ್ಯ ಮಠದಲ್ಲಿ ಭಾನುವಾರ ನಡೆದ ಲಿಂ.ಡಾ. ತೋಂಟದ ಸಿದ್ಧಲಿಂಗ ಶ್ರೀ ಜಯಂತಿಯಲ್ಲಿ ಲಿಂ. ಡಾ.ತೋಂಟದ ಸಿದ್ಧಲಿಂಗ ಶ್ರೀ ಕುರಿತು ಕೃತಿಗಳನ್ನು ಬಿಡುಗಡೆ ಮಾಡಲಾಯಿತು   

ಗದಗ: ‘ಜಾತಿ, ಮತ, ಪಂಥವೆನ್ನದೇ ಸಕಲರಿಗೂ ಲೇಸು ಬಯಸಿದ, ಅಪಾರ ಜೀವಪರ ಕಾಳಜಿ ಹೊಂದಿದ್ದ ಲಿಂ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಜಯಂತಿಯನ್ನು ರಾಜ್ಯ ಸರ್ಕಾರ ಭಾವೈಕ್ಯ ದಿನವನ್ನಾಗಿ ಆಚರಿಸಬೇಕು’ ಎಂದು ಗದುಗಿನ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ಭಾನುವಾರ ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳ ಜಯಂತಿ ಅಂಗವಾಗಿ ನಡೆದ ಭಾವೈಕ್ಯ ದಿನಾಚರಣೆಯಲ್ಲಿ ಅವರು ಆಶೀರ್ವಚನ ನೀಡಿದರು.

‘ಸಿದ್ಧಲಿಂಗ ಶ್ರೀಗಳ ಕೋಮು ಸೌಹಾರ್ದ ಕಾರ್ಯಕ್ಕೆ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ ಪಡೆದ ದಕ್ಷಿಣ ಭಾರತದ ಏಕೈಕ ಸ್ವಾಮೀಜಿ. ನಾಡಿನ ಅನೇಕ ಮಠಗಳು ಪುಸ್ತಕಗಳ ಪ್ರಕಟಣೆಯಲ್ಲಿ ತೊಡಗಿದ್ದರೆ, ಅದಕ್ಕೆ ಲಿಂಗೈಕ್ಯ ಶ್ರೀ ಅವರೇ ಆದರ್ಶ’ ಎಂದರು.

ADVERTISEMENT

ಮುಂಡರಗಿ ತೋಂಟದಾರ್ಯ ಶಾಖಾಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ‘ಹುಟ್ಟು ಸಾವುಗಳು ಎಲ್ಲರಿಗೂ ನಿಸರ್ಗ ವಿಧಿಸಿದ ಪ್ರಕ್ರಿಯೆಗಳು, ಅದನ್ನು ಮೀರಿ ಕೆಲವರು ತಮ್ಮ ಸಾರ್ಥಕ ಜೀವನದ ಮೂಲಕ ಅಮರರಾಗುತ್ತಾರೆ. ಅಂತವರಲ್ಲಿ ತೋಂಟದ ಸಿದ್ಧಲಿಂಗ ಶ್ರೀಗಳು ಅಗ್ರಗಣ್ಯರು. 12ನೇ ಶತಮಾನದ ಬಸವತತ್ವಕ್ಕೆ 21ನೇ ಶತಮಾನದಲ್ಲಿ ಹೊಸ ಭಾಷ್ಯ ಬರೆದ ಸ್ವಾಮೀಜಿ ಅವರು’ ಎಂದರು.

ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ, ‘ಗೃಹಸ್ಥರ ಮನೆಯಲ್ಲಿ ಪುತ್ರೋತ್ಸವವಾದರೆ, ಮಠಗಳಲ್ಲಿ ಪುಸ್ತಕೋತ್ಸವಗಳಾಗಬೇಕೆಂದು ನುಡಿಯುತ್ತಿದ್ದ ಲಿಂಗೈಕ್ಯ ಶ್ರೀಗಳ ಜಯಂತಿಯಲ್ಲಿ ಪುಸ್ತಕಗಳ ಬಿಡುಗಡೆಗೆ ಆದ್ಯತೆ ನೀಡಿರುವುದು ಅವರಿಗೆ ಸಲ್ಲಿಸುತ್ತಿರುವ ಗೌರವ’ ಎಂದರು.

ಶಿರೋಳ ತೋಂಟದಾರ್ಯ ಶಾಖಾಮಠದ ಗುರುಬಸವ ಶ್ರೀ, ಸಂಡೂರಿನ ವಿರಕ್ತಮಠದ ಪ್ರಭು ಶ್ರೀ, ಅರಸಿಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ಶ್ರೀ, ಯಶವಂತನಗರ ಸಿದ್ಧರಾಮೇಶ್ವರಮಠದ ಗಂಗಾಧರ ಶ್ರೀ, ಹಿರಿಯ ಸಾಹಿತಿ ವೀರಣ್ಣ ರಾಜೂರ, ತೋಂಟದಾರ್ಯ ಮಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಮಾಜಿ ಸಚಿವ ಎಸ್ ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ, ತಾ.ಪಂ. ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ತೊಗಲುಗೊಂಬೆ ಕಲಾವಿದ ವೀರಣ್ಣ ಬೆಳಗಲ್, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಎಂ.ಸಿ. ಐಲಿ, ವಿವೇಕಾನಂದಗೌಡ ಪಾಟೀಲ ಇದ್ದರು.

ವಿವಿಧ ಪುಸ್ತಕಗಳ ಬಿಡುಗಡೆ

ಲಿಂ. ತೋಂಟದ ಸಿದ್ಧಲಿಂಗ ಶ್ರೀ ಕುರಿತು ಡಾ. ಜಗದೀಶ ಕೊಪ್ಪ ಹಾಗೂ ಶಶಿಧರ ತೋಡಕರ ಸಂಪಾದಿಸಿದ ಸಮಾಜಮುಖಿ, ಮಲ್ಲಿಕಾರ್ಜುನ ಹುಲಗಬಾಳಿ ರಚಿಸಿದ ಸನ್ನಿಧಾನ, ವೀರನಗೌಡ ಮರಿಗೌಡರ ರಚಿಸಿದ ವಿಶ್ವ ಮಾನವ, ಜಿ.ವಿ. ಹಿರೇಮಠ ರಚಿಸಿದ ಡಂಬಳದ ತೋಂಟದ ಅರ್ಧನಾರೀಶ್ವರ ಶಿವಯೋಗಿಗಳು ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.