ADVERTISEMENT

ರೈಲು ನಿಲ್ದಾಣ ಆಧುನೀಕರಣ: ಜಿಲ್ಲೆಗೆ ಪ್ರಯೋಜನ?

ಕೊಡುಗೆಗಳ ಸ್ಪಷ್ಟತೆ ಇಲ್ಲ; ಗದಗ–ವಾಡಿ ಹೊಸ ಮಾರ್ಗದ ನಿರೀಕ್ಷೆ ಹುಸಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 10:25 IST
Last Updated 6 ಜುಲೈ 2019, 10:25 IST

ಗದಗ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಜಿಲ್ಲೆಗೆ ಹೇಳಿಕೊಳ್ಳುವ ಯಾವುದೇ ಕೊಡುಗೆಗಳು ಲಭಿಸಿಲ್ಲ. ಆದರೆ, ರೈಲು ನಿಲ್ದಾಣಗಳ ಆಧುನೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಪ್ರಮುಖ ರೈಲ್ವೆ ಜಂಕ್ಷನ್‌ ಹೊಂದಿರುವ ಗದುಗಿಗೆ ಇದರ ಪ್ರಯೋಜನ ಲಭಿಸಬಹುದು ಎಂಬ ಲೆಕ್ಕಾಚಾರ ರೈಲ್ವೆ ಹೋರಾಟಗಾರರದ್ದು.

ಪ್ರಯಾಣಿಕರು ಮತ್ತು ಸರಕು ಸಾಗಾಣೆ ಮೂಲಕ ಬರುವ ವರಮಾನದ ಆಧಾರದಲ್ಲಿ ರೈಲು ನಿಲ್ದಾಣಗಳನ್ನು ‘ಎ’ ‘ಬಿ’ ‘ಸಿ’ ಎಂದು ವರ್ಗೀಕರಿಸಲಾಗಿದೆ. ಮಾಸಿಕ ₹10 ಲಕ್ಷಕ್ಕಿಂತ ಕಡಿಮೆ ವರಮಾನ ಹೊಂದಿರುವ ನಿಲ್ದಾಣಗಳು ‘ಬಿ’ ಪಟ್ಟಿಯಲ್ಲಿವೆ. ಇದರಲ್ಲಿ ಗದಗ ರೈಲು ನಿಲ್ದಾಣವೂ ಸೇರಿದೆ. ಈಗಾಗಲೇ ಗದಗ ನಿಲ್ದಾಣದಲ್ಲಿ ಎಸ್ಕಲೇಟರ್ ಮತ್ತು ಲಿಫ್ಟ್‌ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಬಜೆಟ್‌ ಮೂಲಕ ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಇನ್ನಷ್ಟು ಅನುದಾನ ಲಭಿಸಿದರೆ, ಅದು ರೈಲು ನಿಲ್ದಾಣದ ಆಧುನೀಕರಣಕ್ಕೆ ಇನ್ನಷ್ಟು ಬಲ ತುಂಬಲಿದೆ.

ಹಿಂದೆ ವಾಜಪೇಯಿ ಸರ್ಕಾರದಲ್ಲಿ ಮಮತಾ ಬ್ಯಾನರ್ಜಿ ರೈಲ್ವೆ ಸಚಿವೆಯಾಗಿದ್ದಾಗ, ಗದಗ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾಪ ಮಾಡಿದ್ದರು. ಆ ನಂತರ ಯಾವುದೇ ಕೊಡುಗೆ ಲಭಿಸಿರಲಿಲ್ಲ. ಈ ಬಾರಿಯೂ ನೇರವಾಗಿ ಯಾವುದೇ ಕೊಡುಗೆ ಲಭಿಸಿಲ್ಲ. ಆದರೆ, ಖಾಸಗಿ –ಸಾರ್ವಜನಿಕ ಪಾಲುದಾರಿಕೆಯಲ್ಲಿ (ಪಿಪಿಪಿ) ₹ 50 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸಿ, ಆ ಮೂಲಕ ರೈಲ್ವೆ ಅಭಿವೃದ್ಧಿ ಕಾಮಗಾರಿ ಹಾಗೂ ನೂತನ ರೈಲು ಮಾರ್ಗಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ. ಇದರಡಿ ಜಿಲ್ಲೆಗೆ ಅವಕಾಶ ಲಭಿಸುತ್ತದೆಯಾ ಎನ್ನುವುದನ್ನು ಕಾದು ನೋಡಬೇಕು.

ADVERTISEMENT

‘ರೈಲ್ವೆ ಬಜೆಟ್‌ ಮತ್ತು ಸಾಮಾನ್ಯ ಬಜೆಟ್‌ ವಿಲೀನಗೊಂಡಿರುವುದರಿಂದ ರೈಲ್ವೆ ಇಲಾಖೆಗೆ ನೀಡಿರುವ ಆದ್ಯತೆಗಳು ಸ್ಪಷ್ಟವಾಗಿ ತಿಳಿಯುವುದಿಲ್ಲ. ಜಿಲ್ಲೆಗೆ ಏನು ಲಭಿಸಿದೆ ಎನ್ನುವುದರ ಸ್ಪಷ್ಟತೆ ಇಲ್ಲ’ ಎನ್ನುತ್ತಾರೆ ಬೆಟಗೇರಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶ ಸಿಂಗ್‌ ಬ್ಯಾಳಿ.

ಈ ಬಾರಿ ಹೊಸ ರೈಲುಗಳು ಮತ್ತು ಹೊಸ ರೈಲ್ವೆ ಮಾರ್ಗ ಸಮೀಕ್ಷೆಯನ್ನು ಘೋಷಿಸಿಲ್ಲ. ಗದಗ– ಕೋಟುಮಚಗಿ, ನರೇಗಲ್– ಗಜೇಂದ್ರಗಡ–ಹನಮಸಾಗರ– ಇಳಕಲ್‌ ಮಾರ್ಗವಾಗಿ ವಾಡಿಗೆ ರೈಲು ಮಾರ್ಗಕ್ಕೆ ಸಮೀಕ್ಷೆಗೆ ಅನುಮೋದನೆ ಲಭಿಸುವ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದರು. ಅದು ಹುಸಿಯಾಗಿದೆ. ಗದಗ– ಹರಪನಹಳ್ಳಿ, ಗದಗ-ಯಲವಗಿ ಹೊಸ ರೈಲು ಮಾರ್ಗದ ಬೇಡಿಕೆಯೂ ಕನಸಾಗಿಯೇ ಉಳಿದಿದೆ.

ನಿರೀಕ್ಷೆ ಹುಸಿ: ಬರ ಪೀಡಿತ ತಾಲ್ಲೂಕುಗಳಲ್ಲಿ ಒಣಬೇಸಾಯ ಮತ್ತು ಮಳೆಯಾಶ್ರಿತ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್‌ ಘೋಷಿಸಬಹುದು ಎಂಬ ರೈತರ ನಿರೀಕ್ಷೆ ಹುಸಿಯಾಗಿದೆ. ಕೈಗಾರಿಕೆ ಪ್ರಗತಿಯಲ್ಲಿ ತೀವ್ರ ಹಿಂದುಳಿದಿರುವ ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ, ಕೌಶಲ ತರಬೇತಿ ಕೇಂದ್ರ ಮತ್ತು ಉದ್ಯೋಗ ಸೃಷ್ಟಿಗೆ ಮಹತ್ವ ಲಭಿಸಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.