ADVERTISEMENT

ಹಿಜಾಬ್‌ ನಂತರದ ಬೆಳವಣಿಗೆ ಸರಿಯಲ್ಲ: ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ

ಬಂದ್‌ಗೆ ಕರೆ, ಅಂಗಡಿ ಮುಚ್ಚಿ ಪ್ರತಿಭಟನೆ ನಡೆಸಿದ್ದು ಸರಿಯಲ್ಲ– ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 4:59 IST
Last Updated 24 ಮಾರ್ಚ್ 2022, 4:59 IST
ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ   

ಗದಗ: ‘ಹಿಜಾಬ್‌ ತೀರ್ಪು ಪ್ರಕಟಗೊಂಡ ಬಳಿಕ ರಾಜ್ಯದಲ್ಲಿ ನಡೆದ ಬೆಳವಣಿಗೆಗಳು ಯಾರಿಗೂ ಶೋಭೆ ತರುವಂತಹದ್ದಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಹಿಜಾಬ್‌ ನಂತರ ಅನೇಕ ಬೆಳವಣಿಗೆಗಳು ನಡೆದವು. ಅದಕ್ಕೂ ಮುನ್ನ ಈ ವಿಷಯದಲ್ಲಿ ವಿದ್ಯಾರ್ಥಿಗಳ ಮನಸ್ಸು ಮತ್ತು ಶಾಲೆಯ ವಾತಾವರಣವನ್ನು ಹಾಳು ಮಾಡುವ ಪ್ರಯತ್ನ ನಡೆಯಿತು’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಹಿಜಾಬ್‌ ವಿಚಾರವಾಗಿ ಹೈಕೋರ್ಟ್‌ ತೀರ್ಪು ಪ್ರಕಟಿಸಿದ ನಂತರವೂ ಕೆಲವರು ಅರ್ಥ ಮಾಡಿಕೊಳ್ಳಲಿಲ್ಲ. ಬಂದ್‌ಗೆ ಕರೆ ನೀಡಿದರು. ಅಂಗಡಿಗಳನ್ನು ಮುಚ್ಚಿ ಪ್ರತಿಭಟಿಸಿದರು’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

‘ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಎಲ್ಲ ಧರ್ಮೀಯರು ಶಾಂತಿ, ಸಹಬಾಳ್ವೆಯಿಂದ ಬದುಕಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆ. ಆದರೆ, ಹೈಕೋರ್ಟ್‌ ತೀರ್ಪು ಪ್ರಕಟಿಸಿದ ಬಳಿಕ ನಡೆಸಿದ ಕೆಲವೊಂದು ಚಟುವಟಿಕೆಗಳನ್ನು ಯಾರೂ ಒಪ್ಪಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಈ ವಿಚಾರವನ್ನು ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗಂಭೀರವಾಗಿ ಪರಿಗಣಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಿಎಂ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗದುಗಿನಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರತಿ ಚುನಾವಣೆ ಬಂದಾಗಲೂ ನನ್ನ ಹೆಸರು ಕೇಳಿಬರುತ್ತದೆ. ಅವಕಾಶ ಇದ್ದಿದ್ದರೆ 224 ಕ್ಷೇತ್ರಗಳಲ್ಲೂ ನಿಲ್ಲಬಹುದಿತ್ತು. ಅದೇ ರೀತಿ, ಗದುಗಿನಿಂದಲೂ ಸ್ಪ‍ರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿವೆಯಷ್ಟೇ’ ಎಂದು ಹೇಳಿದರು.

‘ಪ್ರತಿ ಜಿಲ್ಲೆಯಲ್ಲೂ ಬಿಜೆಪಿ ಕಾರ್ಯಾಲಯ ಇರಬೇಕು ಎಂಬುದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಆಶಯ. ಅದರಂತೆ, ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್‌ ನೇತೃತ್ವದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸುಸಜ್ಜಿತ ಕಟ್ಟಡಗಳು ನಿರ್ಮಾಣ ಆಗುತ್ತಿವೆ. ಇದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕನಸೂ ಆಗಿತ್ತು’ ಎಂದು
ಹೇಳಿದರು.

‘ನಾಯಕರ ನಡವಳಿಕೆಯಿಂದಲೇ ಕಾಂಗ್ರೆಸ್‌ ಮುಕ್ತ ಕರ್ನಾಟಕ’

‘ಒಂದು ತಿಂಗಳ ಹಿಂದೆ, ಕಾಂಗ್ರೆಸ್‌ ನಾಯಕರು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಜೋಶ್‌ನಲ್ಲಿದ್ದರು. ಆದರೆ, ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಕಾಂಗ್ರೆಸ್‌ ನಾಯಕರಿಗೆ ನಿದ್ರೆ ಬರುತ್ತಿಲ್ಲ. ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ’ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಮುಕ್ತ ಭಾರತ ಆಗಬೇಕು ಎಂದು ಹೇಳಿದ್ದರು. ಕರ್ನಾಟಕ ಕಾಂಗ್ರೆಸ್‌ ಮುಕ್ತ ಮಾಡಲು ಕಾಂಗ್ರೆಸ್‌ ಮುಖಂಡರೇ ಸಾಕು. ಕಾಂಗ್ರೆಸ್‌ ನಾಯಕರ ನಡವಳಿಕೆಯಿಂದಲೇ ಕಾಂಗ್ರೆಸ್‌ ಮುಕ್ತ ಕರ್ನಾಟಕವಾಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಲೇವಡಿ ಮಾಡಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷನಾಗಿ ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವೆ. ಸದ್ಯಕ್ಕೆ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ

-ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.