ಗದಗ: ‘ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಸಮೀಕ್ಷೆಯ ಬಗ್ಗೆ ಈಗಲೇ ಪರ ವಿರೋಧ ಅಭಿಪ್ರಾಯಗಳು ಬರುತ್ತಿರುವದನ್ನು ಗಮನಿಸಿದರೆ ವಿವಿಧ ಸಮಾಜಗಳ ವಿಭಜನೆಯ ಒಳಸಂಚು ಇದರಲ್ಲಿ ಅಡಗಿರುವುದು ಸ್ಪಷ್ಟವಾಗುತ್ತದೆ. ಇದು ನಾಡಿಗೆ ಕಾಂಗ್ರೆಸ್ ತಂದಿರುವ ಅಪಾಯ’ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಆರೋಪಿಸಿದ್ದಾರೆ.
‘ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ವಂಚಿತರಾದ ಕಾಂಗ್ರೆಸಿಗರು ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆ ಕುಂದಿಸುವ, ಸಂವಿಧಾನ ರಕ್ಷಣೆ ಹಾಗೂ ಮತಗಳ್ಳತನ ಹೆಸರಲ್ಲಿ ಅರಾಜಕತೆ ಸೃಷ್ಟಿಗೆ ಪ್ರಯತ್ನಿಸಿ ಕೈಸುಟ್ಟುಕೊಂಡಿದ್ದಾರೆ. ಈಗ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯ ಹೆಸರಲ್ಲಿ ಹಲವಾರು ಅಂಶಗಳ ಪಟ್ಟಿಯೊಂದಿಗೆ ಜಾತಿಗಳ ವರ್ಗೀಕರಣ, ಹೊಸಹೊಸ ಜಾತಿಗಳ ಸೃಷ್ಟಿ ಮಾಡುವ ಮೂಲಕ ಧರ್ಮ, ಜಾತಿ, ಮೀಸಲಾತಿಯ ಹೆಸರಲ್ಲಿ ವಿವಿಧ ಸಮುದಾಯಗಳ ಮಧ್ಯೆ ಪರಸ್ಪರ ಕಂದಕ ಸೃಷ್ಟಿಸಿ ಮತ ವಿಭಜನೆ ಮಾಡುವ ಗೌಪ್ಯ ಕಾರ್ಯಸೂಚಿಯ ಅನುಷ್ಟಾನಕ್ಕೆ ಈ ಸಮೀಕ್ಷೆಯನ್ನು ಕೈಗೊಳ್ಳುತ್ತಿದೆ ಎಂಬ ಅನುಮಾನ ಮೂಡುತ್ತಿದೆ’ ಎಂದು ಕಿಡಿಕಾರಿದ್ದಾರೆ.
‘ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಂತೆ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗುತ್ತದೆ. ಪ್ರಜಾಪ್ರಭುತ್ವ ಮಾದರಿಯಿಂದ ಮತ್ತೆ ರಾಜಪ್ರಭುತ್ವಕ್ಕೆ ದೇಶವನ್ನು ದೂಡುವ ಕಾಂಗ್ರೆಸ್‌ನ ಈ ಪ್ರಯತ್ನ ದೇಶದ ಜನತೆಗೆ ಮಾಡಿದ ಅಪಮಾನ’ ಎಂದು ಹರಿಹಾಯ್ದಿದ್ದಾರೆ.
‘ಈ ಹಿಂದೆ ಕಾಂತರಾಜ ವರದಿ ಬಗ್ಗೆ ವಿರೋಧ ಪಕ್ಷಗಳ, ವಿವಿಧ ಸಮಾಜದ ಗಣ್ಯರ, ಮಠಾಧಿಪತಿಗಳ ವಿರೋಧವನ್ನ ಗಣನೆಗೆ ತಗೆದುಕೊಳ್ಳದೆ ಅನುಷ್ಟಾನಕ್ಕೆ ಮುಂದಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಆಕ್ಷೇಪಿಸಿದ ಕೂಡಲೇ ಅದನ್ನು ಕೈಬಿಟ್ಟು ಈಗ ಅಗತ್ಯ ಪೂರ್ವ ತಯಾರಿ ಇಲ್ಲದೆಯೇ ಅಲ್ಪ ಅವಧಿಯಲ್ಲಿ ಸಮೀಕ್ಷೆ ಕೈಗೊಳ್ಳಲು ಮುಂದಾಗಿದ್ದಾರೆ. ಇದು ಇನ್ನೊಂದು ಕಾಂತರಾಜ ವರದಿಯ ಪ್ರತಿರೂಪ ಆಗಲಿದೆಯೇ ವಿನಹ ರಾಜ್ಯದ ಜನತೆಯ ಹಿತ ಕಾಪಾಡುವ ಸಮೀಕ್ಷೆ ಆಗಲಾರದು’ ಎಂದು ಟೀಕಿಸಿದ್ದಾರೆ.
‘ಸಮಾಜದ ಅಸಮಾನತೆ, ವಿಭಜನೆಗೆ ಕಾರಣವಾಗಲಿರುವ ಹಾಗೂ ಸಾಮಾಜಿಕ ಸೌಹಾರ್ದಕ್ಕೆ ಹಾನಿ ಉಂಟುಮಾಡುವ ಈ ಸಮೀಕ್ಷೆಯನ್ನು ಕೈಬಿಟ್ಟು ಜನಹಿತಕ್ಕಾಗಿ ಸಕರಾತ್ಮಕ ಕಾರ್ಯಕ್ರಮಗಳತ್ತ ರಾಜ್ಯ ಸರ್ಕಾರ ಗಮನ ಹರಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.