
ಲಕ್ಷ್ಮೇಶ್ವರ: ಹಿಂಗಾರು ಹಂಗಾಮಿನ ಕಡಲೆ ಬೆಳೆಯಲ್ಲಿ ಸಿಡಿರೋಗ ಕಾಣಿಸಿಕೊಂಡಿದ್ದು, ಬೆಳೆ ಒಣಗುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ, ರೋಗಬಾಧೆಯಿಂದ ಬೆಳೆಹಾನಿ, ಬೆಲೆ ಕುಸಿತದ ಕಾರಣಕ್ಕೆ ಹೆಸರು, ಶೇಂಗಾ, ಈರುಳ್ಳಿ, ಬೆಳ್ಳುಳ್ಳಿ ಬೆಳೆದ ರೈತರು ನಷ್ಟ ಅನುಭವಿಸಿದ್ದರು. ಹಿಂಗಾರು ಹಂಗಾಮಿನ ಪ್ರಮುಖ ಬೆಳೆ ಕಡಲೆಯಾದರೂ ಉತ್ತಮ ಆದಾಯ ತಂದುಕೊಡಲಿದೆ ಎಂನ ನಿರೀಕ್ಷೆಯಲ್ಲಿದ್ದರು. ಆದರೆ, ರೋಗಬಾದೆ ಅವರನ್ನು ಕಂಗಾಲಾಗಿಸಿದೆ.
ಅಕ್ಟೋಬರ್ ಮೊದಲ ವಾರದಲ್ಲಿ ಬಿತ್ತನೆಯಾದ ಕಡಲೆ ಬೆಳೆ, ಮೊಳಕೆ ಹಂತದಲ್ಲಿದ್ದಾಗ ಸುರಿದ ಭಾರಿ ಮಳೆಯಿಂದ ಸರಿಯಾಗಿ ಬೆಳೆಯಲಿಲ್ಲ. ಹೀಗಾಗಿ, ಬಹಳಷ್ಟು ರೈತರು ಎರಡನೇ ಬಾರಿ ಬಿತ್ತನೆ ಮಾಡಿದ್ದರು. ಕಳೆ, ಕೀಟಬಾಧೆಯಿಂದ ಬೆಳೆ ಉಳಿಸಿಕೊಳ್ಳಲು ರೈತರು ಸಾಕಷ್ಟು ಶ್ರಮ ಹಾಗೂ ಹಣ ವ್ಯಯಿಸಿದ್ದಾರೆ. ಎರಡು ತಿಂಗಳ ಬೆಳೆ ಈಗ ಫಲ ನೀಡುವ ಹಂತದಲ್ಲಿದೆ. ಆದರೆ, ಸಿಡಿರೋಗದಿಂದ ಇಳುವರಿ ಕುಂಟಿತಗೊಳ್ಳುವ ಭಯ ರೈತರನ್ನು ಕಾಡುತ್ತಿದೆ.
ಹಿಂಗಾರು ಹಂಗಾಮಿನಲ್ಲಿ ಪ್ರಮುಖ ಬೆಳೆಯಾಗಿ ಕಡಲೆ ಬೆಳೆಯಲಾಗುತ್ತದೆ. ಎರೆ ಭೂಮಿಯಲ್ಲಿ ಬೆಳೆ ಚೆನ್ನಾಗಿ ಮೂಡುವುದರಿಂದ ಈ ವರ್ಷ ತಾಲ್ಲೂಕಿನಲ್ಲಿ ಗುರಿ ಮೀರಿ, ಅಂದರೆ 27,000 ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದೆ. ಲಕ್ಷ್ಮೇಶ್ವರ ಸೇರಿದಂತೆ ತಾಲ್ಲೂಕಿನ ಅಡರಕಟ್ಟಿ, ಗೊಜನೂರ, ಮಾಗಡಿ, ಯಳವತ್ತಿ, ಮಾಡಳ್ಳಿ, ಯತ್ತಿನಹಳ್ಳಿ, ರಾಮಗೇರಿ, ಬೂದಿಹಾಳ, ಕೊಕ್ಕರಗೊಂದಿ, ಸೂರಣಗಿ, ಬಡ್ನಿ, ಗೊಜನೂರ, ಅಡರಕಟ್ಟಿ, ದೊಡ್ಡೂರ, ಶಿಗ್ಲಿ ಗ್ರಾಮಗಳ ಕಪ್ಪು ಭೂಮಿಯಲ್ಲಿ ಕಡಲೆ ಬಿತ್ತನೆ ಮಾಡಲಾಗಿತ್ತು. ಉತ್ತಮ ತೇವಾಂಶದಿಂದಾಗಿ ಬೆಳೆ ಚೆನ್ನಾಗಿ ಬಂದಿದೆ. ಆದರೆ, ವಾತಾವರಣದ ಏರುಪೇರಿನಿಂದ ಸಿಡಿರೋಗ ಆವರಿಸಿ, ಶೇ 30ರಷ್ಟು ಬೆಳೆ ರೋಗಪೀಡಿತವಾಗಿದೆ.
‘ಮುಂಗಾರು ಹಂಗಾಮಿನಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಕೃಷಿ ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ. ಬದುಕಿಗೆ ಕೃಷಿಯೇ ಆಧಾರವಾಗಿದೆ. ಸ್ವಂತ ಜಮೀನಿನಲ್ಲಷ್ಟೇ ಅಲ್ಲದೆ, ಹೊಲವನ್ನು ಲಾವಣಿ ಪಡೆದು ಸಾಲ ಮಾಡಿ ಕಡಲೆ ಬಿತ್ತನೆ ಮಾಡಿದ್ದೆವು. ಗೊಬ್ಬರ, ಬೀಜ ಹಾಗೂ ಕಳೆ ನಿರ್ವಹಣೆ, ಕ್ರಿಮಿನಾಶಕ, ಪೋಷಕಾಂಶ ಸಿಂಪಡಣೆಗೆ ಎಕರೆಗೆ ಅಂದಾಜು ₹20,000 ಖುರ್ಚು ಮಾಡಿದ್ದೇವೆ’ ಎಂದು ರಾಮಗೇರಿ ಗ್ರಾಮದ ರೈತ ಮಹೇಂದ್ರ ಬೆಟಗೇರಿ ತಿಳಿಸಿದರು.
‘ಸಮೃದ್ಧವಾಗಿ ಬೆಳೆದು ಕಾಳು ಕಟ್ಟುವ ಹಂತದಲ್ಲಿರುವ ಬೆಳೆಯಲ್ಲಿ ಸಿಡಿರೋಗ ಕಾಣಿಸಿಕೊಂಡಿದೆ. ಇಳುವರಿ ಕುಸಿಯುವ ಭೀತಿ ಎದುರಾಗಿದೆ. ಕಡಲೆ ರೈತರ ಪಾಲಿಗೆ ಲಾಭದಾಯಕ ಬೆಳೆ ಆಗಿದೆ. ಆದರೆ, ರೋಗಬಾಧೆಯಿಂದ ನಷ್ಟ ಉಂಟಾಗುವ ಸಾಧ್ಯತೆ ಇದೆ’ ಎಂದು ಗೋವನಾಳ ಗ್ರಾಮದ ರೈತ ಚಂದ್ರು ತಳವಾರ ಹೇಳಿದರು.
‘ಹವಾಮಾನ ವೈಪರೀತ್ಯದಿಂದ ಭೂಮಿಯಲ್ಲಿ ಬೇರು ಕಡಿಯುವ ಶಿಲೀಂಧ್ರಗಳ ಸಂಖ್ಯೆ ಹೆಚ್ಚುತ್ತದೆ. ಪದೇ ಪದೇ ಒಂದೇ ಜಮೀನಿನಲ್ಲಿ ಕಡಲೆ ಬೆಳೆಯಬಾರದು. ಆಗ ಮಾತ್ರ ಸಿಡಿರೋಗ ತಡೆಯಲು ಸಾಧ್ಯ. ಸದ್ಯ ಮುಂಜಾಗ್ರತಾ ಕ್ರಮವಾಗಿ ರೋಗ ನಿಯಂತ್ರಣಕ್ಕೆ ಬಯೋಸ್ಟಿನ್ ಕಾರ್ಬನ್‍ಡೈಜಿಮ್ ಔಷಧವನ್ನು 1 ಲೀ. ನೀರಿಗೆ 2 ಗ್ರಾಂನಂತೆ ಬೆರೆಸಿ ಗಿಡದ ಸುತ್ತಲೂ ಹಾಕಬೇಕು. ಹೆಚ್ಚಿನ ಮಾಹಿತಿಗೆ ಲಕ್ಷ್ಮೇಶ್ವರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳ ಸಲಹೆ ಪಡೆಯಬೇಕು’ ಎಂದು ಲಕ್ಷ್ಮೇಶ್ವರದ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.