ADVERTISEMENT

ಗದಗ | ಮಕ್ಕಳ ರಕ್ಷಣೆ ಸವಾಲು ಸಮರ್ಥವಾಗಿ ನಿಭಾಯಿಸಿ: ಕೆ. ನಾಗಣ್ಣಗೌಡ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 4:22 IST
Last Updated 23 ಆಗಸ್ಟ್ 2025, 4:22 IST
ಗದಗ ಜಿಲ್ಲಾಡಳಿತ ಭವನದಲ್ಲಿ ನಡೆದ ಮಕ್ಕಳ ಹಕ್ಕುಗಳ ರಕ್ಷಣೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಮಾತನಾಡಿದರು
ಗದಗ ಜಿಲ್ಲಾಡಳಿತ ಭವನದಲ್ಲಿ ನಡೆದ ಮಕ್ಕಳ ಹಕ್ಕುಗಳ ರಕ್ಷಣೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಮಾತನಾಡಿದರು   

ಗದಗ: ‘ಮಕ್ಕಳ ರಕ್ಷಣೆಯಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಮಕ್ಕಳ ಹಕ್ಕು ಮತ್ತು ರಕ್ಷಣೆಯ ವ್ಯಾಪ್ತಿಗೆ ಒಳಪಡುವ ಇಲಾಖೆಗಳು ಅವುಗಳನ್ನು ಸಮರ್ಥವಾಗಿ ನಿಭಾಯಿಸಬೇಕು’ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಎಲ್ಲ ಸರ್ಕಾರಿ ಕಟ್ಟಡಗಳ ಮೇಲೆ ಮಕ್ಕಳ ರಕ್ಷಣಾ ಸಹಾಯವಾಣಿ ಸಂಖ್ಯೆ ‘1098’ ಬರೆಯಿಸಬೇಕು. ಸರ್ಕಾರಿ ಆಸ್ಪತ್ರೆಗಳ ಹೊರರೋಗಿಗಳ ಚೀಟಿ ಹಾಗೂ ಸರ್ಕಾರಿ ಎಲ್ಲ ದಾಖಲೆಗಳ ಕೆಳಭಾಗದಲ್ಲಿ ಬಾಲ್ಯ ವಿವಾಹ ಅಪರಾಧ ಎಂಬುದನ್ನು ಕಡ್ಡಾಯವಾಗಿ ಬರೆಯಿಸಬೇಕು’ ಎಂದು ಸೂಚಿಸಿದರು.

ADVERTISEMENT

ಆಯೋಗದ ಸದಸ್ಯ ಶಶಿಧರ ಕೊಸಂಬಿ ಮಾತನಾಡಿ, ‘ಕಳೆದ ಸಾಲಿನಲ್ಲಿ ಗದಗ ಜಿಲ್ಲೆಯಲ್ಲಿ 19 ವರ್ಷದೊಳಗಿನ 364 ಬಾಲಕಿಯರು ಗರ್ಭಿಣಿ ಆಗಿದ್ದಾರೆ. ಕಳೆದ 5 ವರ್ಷದಲ್ಲಿ 1,176 ಬಾಲಕಿಯರು ಗರ್ಭಿಣಿ ಆಗಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಯವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿಲ್ಲ. ಕಾನೂನು ಕ್ರಮ ಏಕೆ ಕೈಗೊಂಡಿಲ್ಲ’ ಎಂದು ಪ್ರಶ್ನಿಸಿದರು.

‘ಆರೋಗ್ಯ ಇಲಾಖೆಯ ಆರ್‌ಸಿಎಚ್ ಅಧಿಕಾರಿ ಕರ್ತವ್ಯ ಲೋಪ ಎಸಗಿದ್ದಾರೆ. ಜಿಲ್ಲಾಧಿಕಾರಿಗಳು ಆರ್‌ಸಿಎಚ್ ಅಧಿಕಾರಿಗೆ ನೋಟಿಸ್ ನೀಡಬೇಕು’ ಎಂದರು.

‘ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 4,311 ಹೈರಿಸ್ಕ್‌ ಪ್ರಗ್ನೆನ್ಸಿ ಕಂಡು ಬಂದಿದೆ. ಜಿಲ್ಲೆಯಲ್ಲಿ 166 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಅಪೌಷ್ಟಿಕತೆ ಮಕ್ಕಳಿಗೆ ಸೂಕ್ತ ಆರೋಗ್ಯ ಚಿಕಿತ್ಸೆ ನೀಡುತ್ತಿಲ್ಲ. ಕಳೆದ ವರ್ಷ 518 ಗರ್ಭಿಣಿಯರು ಅನಿಮಿಯಾ ಕೊರತೆಯಿಂದ ಬಳಲುತ್ತಿದ್ದಾರೆ. ಆರೋಗ್ಯ ಜಾಗೃತಿ ಮೂಡಿಸದಿರುವುದೇ ಇದಕ್ಕೆ ಕಾರಣ’ ಎಂದು ಆಯೋಗದ ಅಧ್ಯಕ್ಷ ಕೆ.ನಾಗನಗೌಡ ಬೇಸರ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳ ಹಕ್ಕುಗಳ ಸಭೆ ನಡೆಸದಿರುವ ಬಗ್ಗೆ ಆಯೋಗದ ಸದಸ್ಯರು ಬೇಸರ ವ್ಯಕ್ತಪಡಿಸಿದರು. ‘ಗ್ರಾಮಗಳಲ್ಲಿ ಅಂಗವಿಕಲ ಮಕ್ಕಳಿಗೆ ಇಲಾಖೆಯಿಂದ ಕಾರ್ಡ್‌ ಸಿಕ್ಕಿಲ್ಲ. ಪೋಷಕರಿಗೆ ಮಾಹಿತಿ ಕೊರತೆಯಿಂದ ಇಲಾಖೆ ಸೌಲಭ್ಯ ಪಡೆಯುವ ಕಾರ್ಡ್‌ ಸಿಗುತ್ತಿಲ್ಲ’ ಎಂದು ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಕಿಡಿಕಾರಿದರು.

ಶಿಕ್ಷಣ ಇಲಾಖೆಯಲ್ಲಿ ಮಕ್ಕಳ ಶಿಕ್ಷಣ, ರಕ್ಷಣೆ ಬಗ್ಗೆ ನಡೆಯುತ್ತಿರುವ ಕೆಲಸಗಳ ಕುರಿತು ಚರ್ಚಿಸಲಾಯಿತು. ‘ಶಾಲೆಗಳಲ್ಲಿ ಮಕ್ಕಳ ಸಲಹಾ ಪೆಟ್ಟಿಗೆ ಇರಿಸಿಲ್ಲ. ಖಾಸಗಿ ಶಾಲಾ ವಾಹನಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಜಿಪಿಎಸ್ ಟ್ರ್ಯಾಕರ್ ಹಾಗೂ ಚಾಲಕನ ಮಾಹಿತಿ ಕುರಿತು ಪೊಲೀಸ್ ವೆರಿಫಿಕೇಷನ್ ಮಾಡಿರುವ ದಾಖಲೆಗಳನ್ನು ಹೊಂದಿರಬೇಕು’ ಎಂದು ಆಯೋಗ ಸೂಚಿಸಿತು.

‘ಕಳೆದ 3 ವರ್ಷದಲ್ಲಿ 110ಕ್ಕೂ ಅಧಿಕ ಪೋಕ್ಸೊ ಪ್ರಕರಣ ದಾಖಲಾಗಿದೆ. 2021 ಮತ್ತು 22ರಲ್ಲಿ 12 ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ. ಮಕ್ಕಳ ಕಳ್ಳತನಕ್ಕೆ ಸಂಬಂಧಿಸಿದಂತೆ 2023-24 ಹಾಗೂ 25ರಲ್ಲಿ 43 ಪ್ರಕರಣ ಪತ್ತೆ ಹಚ್ಚಲಾಗಿದೆ. ಒಂದು ಮಗು ಪತ್ತೆ ಆಗಿಲ್ಲ’ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು. ಪತ್ತೆ ಆಗದ ಮಗುವಿನ ಕುರಿತು ಆಯೋಗಕ್ಕೆ ವರದಿ ನೀಡುವಂತೆ ಆಯೋಗದ ಸದಸ್ಯರು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದರು.

‘ಕಳೆದ 5 ವರ್ಷದಿಂದ ಜಿಲ್ಲೆಯಲ್ಲಿ ಮಕ್ಕಳ ಅಸಹಜ ಸಾವು ಸಂಭವಿಸಿರುವ ಮಾಹಿತಿ ನೀಡಬೇಕು. ಅಂಗನವಾಡಿ, ಶಾಲಾ ಸಮೀಪದಲ್ಲಿ ವಿದ್ಯುತ್ ತಂತಿ, ಹೈಟೆನ್ಶನ್ ಸಂಪರ್ಕ ಇರುವ ಬಗ್ಗೆ ವರದಿ ಸಿದ್ಧಪಡಿಸಿ ಇಲಾಖೆಗೆ ಸಲ್ಲಿಸಬೇಕು ಮತ್ತು ತೆರವುಗೊಳಿಸಬೇಕು’ ಎಂದು ಆಯೋಗದ ಸದಸ್ಯರು ಸೂಚಿಸಿದರು.

ಶೇಖರಗೌಡ ರಾಮತ್ನಾಳ, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಭಾಗವಹಿಸಿದ್ದರು.

Highlights - null

Quote - ಆಯೋಗವು ಸಮಸ್ಯೆಗಳು ಹಾಗೂ ನಿವಾರಣೆ ಹೇಗೆ ಎಂದು ವಿವರವಾಗಿ ತಿಳಿಸಿದೆ. ಆಯೋಗದ ಸೂಚನೆಯಂತೆ ಜಿಲ್ಲೆಯಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವರು ಸಿ.ಎನ್. ಶ್ರೀಧರ್ ಜಿಲ್ಲಾಧಿಕಾರಿ

Cut-off box - ಆಯೋಗದ ನಿರ್ದೇಶನ * ಸಾರಿಗೆ ಇಲಾಖೆಯವರು ಶಾಲಾ ಮಕ್ಕಳಿಗೆ ಬಸ್ ಸೂಕ್ತವಾಗಿ ವ್ಯವಸ್ಥೆ ನೀಡಬೇಕು. * ಚಾಲಕ ನಿರ್ವಾಹಕರ ಮೇಲೆ ದೂರುಗಳು ಬರುತ್ತಿದ್ದು ಕ್ರಮ ಕೈಗೊಳ್ಳಬೇಕು. * ಶಾಲೆಗಳಲ್ಲಿ ಮಕ್ಕಳ ರಕ್ಷಣೆ ಮತ್ತು ಹಕ್ಕುಗಳ ಬಗ್ಗೆ ಅರಿವು ಕಾರ್ಯಕ್ರಮ ನಡೆಸಬೇಕು * ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಶಿಕ್ಷಣ ಕಾರ್ಯಾಗಾರ * ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಎಲ್ಲ ಇಲಾಖೆಗಳ ಕರ್ತವ್ಯ * ಮಕ್ಕಳ ರಕ್ಷಣಾ ಘಟಕ ತನ್ನ ಕಾರ್ಯವ್ಯಾಪ್ತಿ ಸಮರ್ಪಕಗೊಳಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.