ADVERTISEMENT

ತಾಯಿ ಮಗುವಿಗೆ ಶುದ್ಧ ವಾತಾವರಣ ಬೇಡವೇ?: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪ್ರಶ್ನೆ

ವೈದ್ಯಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 4:17 IST
Last Updated 22 ಆಗಸ್ಟ್ 2025, 4:17 IST
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೊಸಂಬೆ, ಶೇಖರಗೌಡ ರಾಮತ್ನಾಳ, ಡಾ. ತಿಪ್ಪೇಸ್ವಾಮಿ ಕೆ.ಟಿ. ಅವರು ಗುರುವಾರ ಗದಗ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಿದರು
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೊಸಂಬೆ, ಶೇಖರಗೌಡ ರಾಮತ್ನಾಳ, ಡಾ. ತಿಪ್ಪೇಸ್ವಾಮಿ ಕೆ.ಟಿ. ಅವರು ಗುರುವಾರ ಗದಗ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಿದರು   

ಗದಗ: ಮಕ್ಕಳ ಆರೋಗ್ಯ ಮತ್ತು ಬದುಕಿನ ರಕ್ಷಣೆಗಾಗಿ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ. ಆದರೆ, ಅವುಗಳ ಸದ್ಭಳಕೆ ಆಗದಿದ್ದರೆ ಹೇಗೆ? ಸರ್ಕಾರಿ ಶಾಲೆಗಳ ಬಿಸಿಯೂಟಕ್ಕೆ ಪೂರೈಕೆ ಆಗಿರುವ ತೊಗರಿ ಬೇಳೆ ಬೇಯಲು ಒಂದು ಗಂಟೆ ಬೇಕು. ಆಹಾರ ಸಾಮಗ್ರಿಗಳು ಕಳಪೆಯಾಗಿದ್ದರೆ ಮಕ್ಕಳ ಆರೋಗ್ಯದ ಗತಿ ಏನು? ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ ತಾಯಿ ಮತ್ತು ನವಜಾತ ಶಿಶುವಿಗೆ ಉಸಿರಾಡಲು ಶುದ್ಧಗಾಳಿ, ಸ್ವಚ್ಛ ವಾತಾವರಣ ಬೇಡವೇ?

– ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಹೀಗೆ.

ಗುರುವಾರ ಕೆ.ಎಚ್‌. ಪಾಟೀಲ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಗೆ ಭೇಟಿ ನೀಡಿದ್ದ ತಂಡವು, ಅಲ್ಲಿನ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.

ADVERTISEMENT

‘ಬಾಣಂತಿ ಮತ್ತು ಮಕ್ಕಳ ವಾರ್ಡ್‌ಗಳಿಗೆ ಶುದ್ಧ ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಇಲ್ಲ. ಹವಾನಿಯಂತ್ರಿತ ವ್ಯವಸ್ಥೆ ಇದ್ದರೂ ಅವು ಸುಸ್ಥಿತಿಯಲ್ಲಿ ಯಾಕಿಲ್ಲ?’ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೊಸಂಬೆ ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದರು.

‘ಬಾಣಂತಿ- ನವಜಾತ ಶಿಶುವಿಗೆ ಶುದ್ಧ ಗಾಳಿ, ಸ್ವಚ್ಛ ವಾತಾವರಣ, ಬೆಳಕಿನ ವ್ಯವಸ್ಥೆ ಬೇಡವೇ’ ಎಂದು ತರಾಟೆಗೆ ತೆಗೆದುಕೊಂಡರು.

ನಂತರ ಆಸ್ಪತ್ರೆಯಲ್ಲಿ ಮಕ್ಕಳ ವಿಭಾಗಕ್ಕೆ ಸಂಬಂಧಿಸಿದ ಪ್ರತಿ ವಾರ್ಡ್‌ಗೆ ಭೇಟಿ ನೀಡಿದ ಆಯೋಗದ ಸದಸ್ಯರಾದ ಶಶಿಧರ ಕೊಸಂಬೆ, ಶೇಖರಗೌಡ ರಾಮತ್ನಾಳ, ಡಾ. ತಿಪ್ಪೇಸ್ವಾಮಿ ಕೆ.ಟಿ. ಅವರು, ರೋಗಿಗಳಿಗೆ ನೀಡುತ್ತಿರುವ ಆಹಾರದ ಗುಣಮಟ್ಟ ಪರಿಶೀಲಿಸಿದರು. ರೋಗಿಗಳು ಮತ್ತು ಆರೈಕೆದಾರರನ್ನು ಮಾತನಾಡಿಸಿ, ವ್ಯವಸ್ಥೆಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು.

ಗದಗ ತಾಲ್ಲೂಕಿನ ನಾಗಾವಿ ಗ್ರಾಮದ ಪ್ರೌಢಶಾಲೆಗೆ ಭೇಟಿ ನೀಡಿದ ಆಯೋಗವು ಬಿಸಿಯೂಟಕ್ಕೆ ತೊಗರಿಬೇಳೆ ಕೊರತೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿತು. ಬೇಳೆ ಬೇಯಿಸಲು ಒಂದು ಗಂಟೆ ಬೇಕು ಎಂಬ ವಿಷಯ ತಿಳಿದು ಸದಸ್ಯರು ಚಕಿತಪಟ್ಟರು.

ಮಕ್ಕಳ ಆರೋಗ್ಯದ ದೃಷ್ಟಿಯಿಂದ ಆಹಾರ ಸಾಮಗ್ರಿಗಳ ಪೂರೈಕೆಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮುಳಗುಂದ ಪೊಲೀಸ್ ಠಾಣೆಗೆ ಭೇಟಿ ನೀಡಿದ ಆಯೋಗ, ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯವೈಖರಿ ಬಗ್ಗೆ ಪರಿಶೀಲಿಸಿತು. ಮಕ್ಕಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ರಿಜಿಸ್ಟರ್‌ ನಿರ್ವಹಿಸಬೇಕು. ಮಕ್ಕಳ ಪೊಲೀಸ್ ಕಲ್ಯಾಣ ಅಧಿಕಾರಿ ಸಹಿ ಮಾಡಿರಬೇಕು ಎಂದು ಸೂಚನೆ ನೀಡಿತು.

ಅಸುಂಡಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿತು.

ನೋಟಿಸ್‌ ಜಾರಿ ಅಮಾನತಿಗೆ ಸೂಚನೆ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಮಹಾವಿದ್ಯಾಲಯದ ಹಾಸ್ಟೆಲ್ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿದ ಆಯೋಗವು ತಕ್ಷಣವೇ ವಾರ್ಡನ್ ಅಮಾನತಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿತು. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗೆ ಭೇಟಿ ನೀಡಿದ ಆಯೋಗ ತಪ್ಪು ಮಾಹಿತಿ ನೀಡಿದ ಪ್ರಾಂಶುಪಾಲೆ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿತು. ಈ ಸಂಬಂಧ ಮಹಾವಿದ್ಯಾಲಯದ ಪ್ರಾಂಶುಪಾಲೆ ಮಂಜುಳಾ ಅರಿಕಟ್ಟಿ ಅವರಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.