
ಗದಗ: ಗಣೇಶೋತ್ಸವ, ದಸರಾ, ಹೋಳಿ ಹಬ್ಬವನ್ನು ಸರ್ವಧರ್ಮೀಯರು ಕೂಡಿ ಆಚರಿಸುವಂತೆ ಕ್ರಿಸ್‌ಮಸ್ ಹಬ್ಬದ ಜತೆಗೂ ಸರ್ವಧರ್ಮದ ನಂಟು ಬೆಸೆದುಕೊಂಡಿದೆ. ದೇಶ, ಭಾಷೆ, ಗಡಿಗಳನ್ನೂ ಮೀರಿ ಈ ಹಬ್ಬ ಎಲ್ಲ ಧರ್ಮಗಳ ಜನರನ್ನು ಒಂದಾಗಿಸುತ್ತದೆ.
ಗದಗ ಬೆಟಗೇರಿ ಅವಳಿ ನಗರದಲ್ಲಿ 12 ಚರ್ಚ್‌ಗಳಿದ್ದು, ಬುಧವಾರ ಭರದ ಸಿದ್ಧತೆಗಳು ನಡೆದವು. ಚರ್ಚ್‌ನ ಆವರಣದಲ್ಲಿ ಗೋದಲಿ ನಿರ್ಮಾಣ, ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳ ತಾಲೀಮು ನಡೆದಿದ್ದು ಕಂಡುಬಂತು.
ಕ್ರೈಸ್ತ ಧರ್ಮೀಯರ ಮನೆಗಳಲ್ಲೂ ಹಬ್ಬದ ಸಂಭ್ರಮ ಗರಿಗೆದರಿತ್ತು. ಮಾರುಕಟ್ಟೆಯಲ್ಲಿ ಲಭ್ಯವಿದ್ದ ತರಹೇವಾರಿ ಆಲಂಕಾರಿಕ ವಸ್ತುಗಳನ್ನು ತಂದು ಮನೆಯನ್ನು ಅಲಂಕರಿಸುವ ಕಾಯಕದಲ್ಲಿ ತೊಡಗಿದ್ದರು. ಕೆಂಪು ಬಣ್ಣದ ನಕ್ಷತ್ರ, ಬಣ್ಣ ಬಣ್ಣದ ಆಕಾಶಬುಟ್ಟಿಗಳು, ಕಿರುದೀಪಗಳಲ್ಲಿ ನಗು ತುಳುಕಿಸುತ್ತಿದ್ದ ಹಸಿರು ಕ್ರಿಸ್‌ಮಸ್ ಟ್ರೀ ಇವೆಲ್ಲವೂ ಮನೆಯ ಕಳೆ ಹೆಚ್ಚಿಸಿದ್ದವು.
ಕ್ಯಾಥೋಲಿಕ್ ಚರ್ಚ್, ಸಂತ ಇಗ್ನೇಷಿಯಸ್ ಚರ್ಚ್, ಚರ್ಚ್ ಆಫ್ ಬ್ಲೆಸ್ಸಿಂಗ್, ಸಿಎಸ್‍ಐ ಚರ್ಚ್, ಇಆರ್‌ಐ ಚರ್ಚ್, ಎಸ್‍ಪಿಜಿ ಚರ್ಚ್ ಸೇರಿದಂತೆ ನಗರದಲ್ಲಿನ ಎಲ್ಲ ಚರ್ಚ್‌ಗಳಲ್ಲೂ ಬುಧವಾರ ರಾತ್ರಿ ಕ್ರಿಸ್‌ಮಸ್ ಕ್ಯಾರಲ್ಸ್, ವಿಶೇಷ ಪೂಜೆಗಳು ನಡೆದವು.
ಕ್ರಿಸ್‌ಮಸ್ ಅಂಗವಾಗಿ ಬೇಕರಿಗಳಲ್ಲಿ ವಿವಿಧ ವಿನ್ಯಾಸದ ಕೇಕ್‌ಗಳ ಮಾರಾಟ ಜೋರಾಗಿತ್ತು. ನಗರದ ವಿವಿಧ ಶಾಲೆಗಳಲ್ಲಿ ಬುಧವಾರವೇ ಕ್ರಿಸ್‌ಮಸ್ ಆಚರಿಸಲಾಯಿತು. ಪುಟಾಣಿ ಮಕ್ಕಳು ಕೆಂಪು ಟೊಪ್ಪಿ ಧರಿಸಿ, ಸಾಂಟಾ ಕ್ಲಾಸ್ ವೇಷಧಾರಿಯಿಂದ ಕೇಕು, ಚಾಕೊಲೆಟ್ ಸ್ವೀಕರಿಸಿ ಖುಷಿ ಪಟ್ಟರು.
ಗಜೇಂದ್ರಗಡ: ಕ್ರಿಸ್‌ಮಸ್ ಆಚರಣೆಗೆ ಸಿದ್ದತೆ
ಗಜೇಂದ್ರಗಡ: ಪಟ್ಟಣದಲ್ಲಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಕ್ರೈಸ್ತ ಸಮುದಾಯದವರು ರೋಣ ರಸ್ತೆಯಲ್ಲಿರುವ ಚರ್ಚ್‌ನಲ್ಲಿ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಚರ್ಚ್‌ಗೆ ದೀಪಾಲಂಕಾರ ಮಾಡಲಾಗಿದ್ದು ಚರ್ಚ್ ಮುಂಭಾಗದಲ್ಲಿ ಶಾಮಿಯಾನ ಹಾಕಿ ಕ್ರಿಸ್‌ಮಸ್ ಆಚರಣೆಗೆ ಸಿದ್ದತೆ ಮಾಡಿಕೊಂಡಿದ್ದಾರೆ.
ಕ್ರಿಸ್‍ಮಸ್ ಆಚರಣೆಗೆ ಭರದ ಸಿದ್ಧತೆ
ಲಕ್ಷ್ಮೇಶ್ವರ: ಪಟ್ಟಣದ ಮುಕ್ತಿನಗರದಲ್ಲಿನ ಬಿಜಿಪಿಎಂ ಆಶೀರ್ವಾದ ಮಂದಿರದಲ್ಲಿ ಹಾಗೂ ಶಿಗ್ಲಿ ರಸ್ತೆಯಲ್ಲಿನ ಎಫ್‍ಎಂಪಿಬಿ ಪ್ರಾರ್ಥನಾ ಮಂದಿರಗಳಲ್ಲಿ ಗುರುವಾರ ನಡೆಯಲಿರುವ ಕ್ರಿಸ್‌ಮಸ್ ಆಚರಣೆಗಾಗಿ ಬುಧವಾರ ಭರ್ಜರಿ ಸಿದ್ಧತೆ ನಡೆಯಿತು. ಪ್ರಾರ್ಥನಾ ಮಂದಿರಗಳನ್ನು ಸುಣ್ಣಬಣ್ಣ ಬಳಿದು ಸ್ವಚ್ಛ ಮಾಡಲಾಗಿದೆ. ಅಲ್ಲದೆ ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗರಿಸುವ ಕೆಲಸ ಜೋರಾಗಿ ನಡೆಯಿತು. ‘ಪ್ರತಿವರ್ಷದಂತೆ ಈ ವರ್ಷ ಕೂಡ ಸಂಭ್ರಮದಿಂದ ಕ್ರಿಸ್‍ಮಸ್ ಆಚರಣೆಗೆ ತಯಾರಿ ನಡೆದಿದೆ. ಬುಧವಾರ ರಾತ್ರಿಯಿಂದಲೇ ಕ್ರಿಸ್‌ಮಸ್ ಕಾರ್ಯಕ್ರಮಗಳು ಆರಂಭ ಆಗಲಿದ್ದು ರಾತ್ರಿ ವಿಶೇಷ ಪೂಜೆ ಪ್ರವಚನ ನೃತ್ಯ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜಿಪಿಎಂನ ಫಾದರ್ ಜಿ.ಎಂ. ನಾಯಕ ಮಾಹಿತಿ ನೀಡಿದರು. ‘ಗುರುವಾರ ಬೆಳಿಗ್ಗೆ 10ಕ್ಕೆ ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠರು ಸೇರಿದಂತೆ ಅನೇಕ ಮುಖಂಡರು ಕ್ರಿಸ್‍ಮಸ್ ಆಚರಣೆಗೆ ಬರಲಿದ್ದಾರೆ’ ಎಂದು ಅವರು ತಿಳಿಸಿದರು.
ನಿರ್ಮಲ ಮಂದಿರಕ್ಕೆ ತೋರಣದ ಸಿಂಗಾರ
ಮುಂಡರಗಿ:ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಬುಧವಾರ ಕ್ರೈಸ್ತ ಬಾಂಧವರು ಪಟ್ಟಣದ ಬಸವೇಶ್ವರ ನಗರದಲ್ಲಿರುವ ನಿರ್ಮಲ ಮಂದಿರವನ್ನು ತಳಿರು ತೋರಣಗಳಿಂದ ಅಲಂಕರಿಸಿದರು. ನಿರ್ಮಲ ಮಂದಿರದ ಆವರಣದಲ್ಲಿ ಕೃತಕ ಕುರಿದೊಡ್ಡಿ ನಿರ್ಮಿಸಿ ಅದರಲ್ಲಿ ಬಾಲ ಏಸುವನ್ನು ಪ್ರತಿಷ್ಠಾಪಿಸಿದರು. ಆವರಣದಲ್ಲಿರುವ ಕಿರು ಮಂದಿರದಲ್ಲಿ ಮಾತೆ ಮೇರಿ ಹಾಗೂ ಕುರಿಗಾಹಿಗಳ ಮಧ್ಯದಲ್ಲಿ ಸುಂದರವಾದ ಏಸು ಮೂರ್ತಿಯನ್ನು ಸ್ಥಾಪಿಸಲಾಗುತ್ತದೆ. ನಂತರ ಕಿರು ಮಂದಿರದ ಸುತ್ತಲೂ ವಿವಿಧ ಬೊಂಬೆಗಳು ಹಾಗೂ ವಿವಿಧ ಅಲಂಕಾರಿಕ ವಸ್ತುಗಳನ್ನಿಟ್ಟು ಅಲಂಕರಿಸಲಾಗುತ್ತದೆ. ಡಿ.25ರಂದು ಕ್ರೈಸ್ತರು ಸೇರಿದಂತೆ ಪಟ್ಟಣದ ವಿವಿಧ ಭಾಗಗಳ ಜನರು ನಿರ್ಮಲ ಮಂದಿರಕ್ಕೆ ಭೇಟಿ ನೀಡಿ ಯೇಸು ಕ್ರಿಸ್ತನ ದರ್ಶನ ಪಡೆದುಕೊಳ್ಳುತ್ತಾರೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಪಟ್ಟಣದ ಎಸ್‌ಎಫ್‌ಎಸ್ ಶಾಲೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ. ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕೇಕ್ ವಿತರಿಸಿ ಸಂಭ್ರಮಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.