ADVERTISEMENT

ಸ್ವಂತ ಸಮಾಜ ದಿಕ್ಕು ತಪ್ಪಿಸುತ್ತಿರುವ ಮುಖ್ಯಮಂತ್ರಿ: ಶಾಸಕ ಡಾ.ಚಂದ್ರು ಲಮಾಣಿ

ಶಾಸಕ ಡಾ.ಚಂದ್ರು ಲಮಾಣಿ ಲೇವಡಿ: ಹಿಂದೂ ಮುಖಂಡರ ಮೇಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 6:22 IST
Last Updated 21 ಸೆಪ್ಟೆಂಬರ್ 2025, 6:22 IST
ಶಿರಹಟ್ಟಿಯಲ್ಲಿ ಸರ್ಕಾರದ ವಿರುದ್ಧ ವಿವಿಧ ಹಿಂದೂಪರ ಸಂಘಟನೆಗಳು ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ತಹಶೀಲ್ದಾರ್ ರಾಘವೇಂದ್ರ ರಾವ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು
ಶಿರಹಟ್ಟಿಯಲ್ಲಿ ಸರ್ಕಾರದ ವಿರುದ್ಧ ವಿವಿಧ ಹಿಂದೂಪರ ಸಂಘಟನೆಗಳು ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ತಹಶೀಲ್ದಾರ್ ರಾಘವೇಂದ್ರ ರಾವ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು   

ಶಿರಹಟ್ಟಿ: ‘ಅಭಿವೃದ್ಧಿಯಲ್ಲಿ ಹೆಸರು ಮಾಡಬೇಕಾದ ಮುಖ್ಯಮಂತ್ರಿಗಳು ಜಾತಿ ಗಣತಿಯಲ್ಲಿ ವಿಷಯದಲ್ಲಿ ಸಮಾಜ ಒಡೆಯುವ ಮೂಲಕ ಹೆಸರುವಾಸಿಯಾಗುತ್ತಿದ್ದಾರೆ’ ಎಂದು ಶಾಸಕ ಡಾ.ಚಂದ್ರು ಲಮಾಣಿ ವ್ಯಂಗ್ಯವಾಡಿದರು.

ಹಿಂದೂ ಮುಖಂಡರುಗಳ ಮೇಲೆ ವಿನಾಕಾರಣ ಪ್ರಕರಣ ದಾಖಲಿಸುತ್ತಿರುವುದನ್ನು ಹಾಗೂ ಸಾಮಾಜಿಕ ಶೈಕ್ಷಣಿಕ ಜಾತಿ ಸಮೀಕ್ಷೆಯಲ್ಲಿ ಉಪಜಾತಿಗಳ ಹಿಂದೆ ಕ್ರೈಸ್ತ ಉಪಜಾತಿ ಸೇರಿಸಿ ಮತಾಂತರಕ್ಕೆ ಹುನ್ನಾರ ನಡೆಸುತ್ತಿರುವುದನ್ನು ಖಂಡಿಸಿ ವಿವಿಧ ಹಿಂದೂಪರ ಸಂಘಟನೆಗಳ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಈ ಜಾತಿ ಗಣತಿ ವಿಷಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ತೆಗೆದುಕೊಂಡ ನಿರ್ಧಾರಕ್ಕೆ ಮಂತ್ರಿಮಂಡಲದ ಅರ್ಧದಷ್ಟು ಸಚಿವರು ವಿರೋಧ ಮಾಡುತ್ತಿದ್ದಾರೆ. ಎಲ್ಲ ಜಾತಿಗಳ ಕಾಲಂನ ಮುಂದೆ ಕ್ರಿಶ್ಚಿಯನ್ ಉಪಜಾತಿ ಸೇರಿಸಲು ಹೇಳುತ್ತಿರುವುದು ಮೂರ್ಖತನದ ಪರಮಾವಧಿ ಎಂದು ಹೇಳಿದರು.

ADVERTISEMENT

ನಂತರ ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಹಾಗೂ ಹಿಂದೂಪರ ಸಂಘಟನೆಗಳ ಮುಖಂಡ ಸಂತೋಷ ಕುರಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳು ಕೇವಲ ಎರಡು ಸಮಾಜದ ಮುಖ್ಯಮಂತ್ರಿಗಳಾಗಿ ವರ್ತಿಸುತ್ತಿರುವುದು ಖಂಡನೀಯ. ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಸಮುದಾಯಕ್ಕೆ ಕೋಟಿಗಟ್ಟಲೆ ಅನುದಾನ ಮಂಜೂರು ಮಾಡುತ್ತಿದ್ದು, ಉಳಿದವರಿಗೆ ಕೇವಲ ಸೊನ್ನೆ ಸಿಗುತ್ತಿದೆ. ಹಿಂದೂ ಧರ್ಮದ ಯಾವುದೇ ಧಾರ್ಮಿಕ ಹಬ್ಬಕ್ಕೆ ಸರ್ಕಾರ ಅಡ್ಡಿಪಡಿಸುತ್ತಿರುವುದು ಘೋರ ಅನ್ಯಾಯ. ಧರ್ಮದ ಉಳಿವಿಗಾಗಿ ಹಿಂದೂಪರ ಸಂಘಟನೆಗಳು ಯಾವತ್ತು ಹಿಂಜರಿಯುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಹಿಂದೂಪರ ಸಂಘಟನೆಗಳ ಹೋರಾಟಕ್ಕೆ ಪೊಲೀಸ್ ಇಲಾಖೆಯವರೂ ಸಹ ವಿರೋಧಿಸಿ ಪ್ರತಿಭಟನೆ ಮುಂದುವರೆಸುವಂತೆ ಒತ್ತಾಯಿಸಿದರು ಎಂದು ಆರೋಪಿಸಿದರು.

ಸ್ಥಳೀಯ ಪೇಟೆ ಆಂಜನೇಯ ದೇವಸ್ಥಾನದಿಂದ ಪ್ರತಿಭಟನೆ ಪ್ರಾರಂಭಿಸಿದ ಸಂಘಟನೆಗಳು ಪಟ್ಟಣದ ಪ್ರಮುಖ ವೃತ್ತದಲ್ಲಿ ಸಂಚರಿಸಿದರು. ನಂತರ ನೆಹರು ವೃತ್ತದಲ್ಲಿ ರಸ್ತೆ ತಡೆದು ಮಾನವ ಸರಪಳಿ ರಚನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರ್ ರಾಘವೇಂದ್ರ ರಾವ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜೀವರಡ್ಡಿ ಬೊಮ್ಮನಕಟ್ಟಿ, ನಾಗರಾಜ ಲಕ್ಕುಂಡಿ, ಶಿವಪ್ರಕಾಶ ಮಹಾಜನಶೆಟ್ಟರ, ಚಂದ್ರಕಾಂತ ನೂರಶೆಟ್ಟರ, ರಾಮಣ್ಣ ಕಂಬಳಿ, ದೀಪು ಕಪ್ಪತ್ತನವರ, ಫಕೀರೇಶ ರಟ್ಟಿಹಳ್ಳಿ, ಯಲ್ಲಪ್ಪ ಇಂಗಳಗಿ, ಪ್ರವೀಣಗೌಡ ಪಾಟೀಲ, ಪರಶುರಾಮ ಡೊಂಕಬಳ್ಳಿ, ದೇವು ಪೂಜಾರ, ರಮೇಶ ಬಟ್ಟೂರ, ಈರಣ್ಣ ಅಂಗಡಿ, ಸಂತೋಷ ಒಬಾಜಿ, ನಂದಾ ಪಲ್ಲೇದ, ವಿಠಲ ಬಿಡವೆ, ಶರಣಪ್ಪ ಹರ್ಲಾಪೂರ, ಬಸವರಾಜ ತುಳಿ ಸೇರಿದಂತೆ ಮುಂತಾದವರು ಇದ್ದರು.

ಈ ಜಾತಿ ಗಣತಿ ವಿಷಯದಲ್ಲಿ ಮುಖ್ಯಮಂತ್ರಿ ತೆಗೆದುಕೊಂಡ ನಿರ್ಧಾರಕ್ಕೆ ಮಂತ್ರಿಮಂಡಲದ ಅರ್ಧದಷ್ಟು ಸಚಿವರು ವಿರೋಧ ಮಾಡಿದ್ದಾರೆ
ಡಾ.ಚಂದ್ರು ಲಮಾಣಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.