
ಲಕ್ಷ್ಮೇಶ್ವರ:ಲಕ್ಷ್ಮೇಶ್ವರ: ‘ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ’ ಎಂಬ ಧ್ಯೇಯದೊಂದಿಗೆ 2003ರಲ್ಲಿ ಆರಂಭವಾದ ಚಂದನ ಶಾಲೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೂರನೇ ಬಾರಿಗೆ ಡಿ.13ರಂದು ಭೇಟಿ ನೀಡುತ್ತಿದ್ದಾರೆ.
2007ರಲ್ಲಿ ಶಾಲೆಗೆ ಬಂದಿದ್ದ ಅವರು ಐದಾರು ತಾಸುಗಳನ್ನು ಚಂದನ ಶಾಲೆ ಮಕ್ಕಳೊಂದಿಗೆ ಕಳೆದಿದ್ದು ಒಂದು ಇತಿಹಾಸ. ಆಗ ಅವರು ಕನ್ನಡ ಭಾಷೆ ಬಗ್ಗೆ ನೀಡಿದ ಉಪನ್ಯಾಸ ಈಗಲೂ ಒಂದು ದಾಖಲೆಯಾಗಿ ಉಳಿದಿದೆ.
ಅಂದು ಸಿದ್ಧರಾಮಯ್ಯನವರು ಕನ್ನಡ ವ್ಯಾಕರಣದ ಸಂಪೂರ್ಣ ಜ್ಞಾನವನ್ನು ಮಕ್ಕಳಿಗೆ ಉಣಬಡಿಸಿದ್ದರಲ್ಲದೆ; ಮಕ್ಕಳಲ್ಲಿ ಕನ್ನಡ ನಾಡು ನುಡಿ ಬಗ್ಗೆ ಅಭಿಮಾನ ಮೂಡಿಸಿದ್ದರು. ಅವರ ಕನ್ನಡ ಉಪನ್ಯಾಸದ ಫಲವಾಗಿ ಇಂದಿಗೂ ಚಂದನ ಶಾಲೆ ಮಕ್ಕಳಲ್ಲಿ ಅನೇಕರು ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆಯುತ್ತಿದ್ದಾರೆ.
ಗ್ರಾಮೀಣ ಭಾಗದ ಮಕ್ಕಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಮೂಡಬೇಕು ಎಂದು ಕಾರಣಕ್ಕಾಗಿ ಶಾಲೆ ಸಂಸ್ಥಾಪಕ ಅಧ್ಯಕ್ಷ ಟಿ.ಈಶ್ವರ ಅವರು ಆ ವಿಷಯಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಅವರ ಪ್ರಯತ್ನದ ಫಲವಾಗಿ ಇಂದು ಶಾಲೆ ಮಕ್ಕಳು ವಿಜ್ಞಾನದಲ್ಲಿ ಆಸಕ್ತಿ ಮೂಡಿಸಿಕೊಂಡು ತಾವೂ ವಿಜ್ಞಾನಿಗಳಾಗುವತ್ತ ದಾಪುಗಾಲು ಹಾಕುತ್ತಿದ್ದಾರೆ.
2017ರಲ್ಲಿ ಇಸ್ರೊ ಮಾದರಿಯಲ್ಲೇ ಚಂದನ ಶಾಲೆ ಮಕ್ಕಳೂ ಸಹ ಕೃತಕ ರಾಕೆಟ್ ಸಿದ್ಧಪಡಿಸಿ ಯಶಸ್ವಿಯಾಗಿ ಚಂದ್ರಯಾನ ಪ್ರಾತ್ಯಕ್ಷಿಕೆ ನಡೆಸಿಕೊಟ್ಟಿದ್ದನ್ನು ಕಣ್ಣಾರೆ ಕಂಡ ಪ್ರೊ.ಸಿಎನ್‍ಆರ್ ರಾವ್ ಅವರು ಮಕ್ಕಳ ಪ್ರಯೋಗಕ್ಕೆ ಬೆರಗಾಗಿ ಇಲ್ಲಿ ವಿಜ್ಞಾನ ಕೇಂದ್ರ ನಿರ್ಮಿಸಲು ಎಲ್ಲ ರೀತಿಯ ಸಹಾಯ ಸಹಕಾರ ನೀಡಿದರು. ಅವರ ಇಚ್ಛೆಯಂತೆ ಇಂದು ಶಾಲೆ ಆವರಣದಲ್ಲಿ ಪ್ರೊ.ಸಿಎನ್‍ಆರ್ ರಾವ್ ಹೆಸರಿನ ಸುಸಜ್ಜಿತ ವಿಜ್ಞಾನ ಕೇಂದ್ರ ತಲೆ ಎತ್ತಿ ನಿಂತಿದೆ.
ಗ್ರಾಮೀಣ ಮಕ್ಕಳಲ್ಲಿ ವಿಜ್ಞಾನವನ್ನು ಹೆಚ್ಚೆಚ್ಚು ಬೆಳೆಸಬೇಕು ಎಂಬ ಮಹದಾಸೆ ಪ್ರೊ.ರಾವ್ ಅವರದು. ಈ ಕಾರಣಕ್ಕಾಗಿ ವಿಜ್ಞಾನ ಹಾಲ್‍ಗೆ ತಮಗೆ ಬಂದ ಪ್ರಶಸ್ತಿಗಳನ್ನು ಕೊಟ್ಟಿದ್ದಾರೆ. ಅಷ್ಟೆ ಅಲ್ಲದೆ ಶಾಲಾ ಆವರಣದಲ್ಲಿ ಸುಸಜ್ಜಿತ ವಿಜ್ಞಾನ ಪಾರ್ಕ್ ನಿರ್ಮಿಸಲು ಸಲಹೆ ಸೂಚನೆ ನೀಡಿದ್ದರಿಂದ ಇಡೀ ಶಾಲಾ ಆವರಣವೇ ಒಂದು ವಿಜ್ಞಾನ ಪ್ರಯೋಗಾಲಯವಾಗಿದೆ.
ಪ್ರತಿವರ್ಷ ಪ್ರೊ.ರಾವ್ ಮತ್ತು ಇಂದುಮತಿ ರಾವ್ ಹಾಗೂ ಬೆಂಗಳೂರಿನ ವಿಜ್ಞಾನ ಕೇಂದ್ರದ ಖ್ಯಾತ ವಿಜ್ಞಾನಿಗಳು ಇಲ್ಲಿಗೆ ಬಂದು ಮಕ್ಕಳಿಗೆ ವಿಜ್ಞಾನದ ಕುರಿತು ಹೆಚ್ಚಿನ ಬೋಧನೆ ಮಾಡುತ್ತಾರೆ.
ಗ್ರಾಮೀಣ ಭಾಗದ ಮಕ್ಕಳು ವಿಜ್ಞಾನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬುದೇ ನಮ್ಮ ಉದ್ಧೇಶ. ಈ ನಿಟ್ಟಿನಲ್ಲಿ ನಮ್ಮ ಶಾಲೆಯ ಮಕ್ಕಳು ಮುಂದುವರಿಯುತ್ತಿರುವುದು ಸಂತಸ ತರಿಸಿದೆ–ಟಿ.ಈಶ್ವರ ಶಾಲೆಯ ಸಂಸ್ಥಾಪಕ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.