ADVERTISEMENT

ಯಶಸ್ವಿಯಾಗಿ ನಡೆದ ವಕಾರಸಾಲುಗಳ ಒತ್ತುವರಿ ತೆರವು ಕಾರ್ಯಾಚರಣೆ

₹600 ಕೋಟಿ ಮೌಲ್ಯದ ಆಸ್ತಿ ನಗರಸಭೆ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 12:59 IST
Last Updated 16 ಜುಲೈ 2019, 12:59 IST
ಗದುಗಿನಲ್ಲಿ ಭಾನುವಾರ ವಕಾರಸಾಲು ಒತ್ತುವರಿ ತೆರವಿನ ನಂತರ ಕೆ.ಎಚ್‌ ಪಾಟೀಲ ವೃತ್ತದಿಂದ ಹಳೆಯ ಬಸ್‌ ನಿಲ್ದಾಣದವರೆಗೆ ಕಂಡ ದೃಶ್ಯ
ಗದುಗಿನಲ್ಲಿ ಭಾನುವಾರ ವಕಾರಸಾಲು ಒತ್ತುವರಿ ತೆರವಿನ ನಂತರ ಕೆ.ಎಚ್‌ ಪಾಟೀಲ ವೃತ್ತದಿಂದ ಹಳೆಯ ಬಸ್‌ ನಿಲ್ದಾಣದವರೆಗೆ ಕಂಡ ದೃಶ್ಯ   

ಗದಗ: ಶನಿವಾರ ಮತ್ತು ಭಾನುವಾರ ನಡೆಸಿದ ಒತ್ತುವರಿ ತೆರವು ಕಾರ್ಯಾಚರಣೆ ಮೂಲಕ ಲೀಜ್‌ದಾರರ ವಶದಲ್ಲಿದ್ದ, ನಗರದ ಹೃದಯ ಭಾಗದಲ್ಲಿ 34 ಎಕರೆ ಪ್ರದೇಶವನ್ನು ವಾಪಸ್‌ ಪಡೆಯುವಲ್ಲಿ ನಗರಸಭೆ ಯಶಸ್ವಿಯಾಗಿದೆ. ಈ ಮೂಲಕ ಈಗಿನ ಮಾರುಕಟ್ಟೆ ಮೌಲ್ಯದಲ್ಲಿ ₹600 ಕೋಟಿ ಮೊತ್ತದ ಸ್ಥಿರಾಸ್ತಿಯು ನಗರಸಭೆ ವಶಕ್ಕೆ ಬಂದಿದೆ.

‘ಉಪನೋಂದಣಿ ಕಚೇರಿಯ ಮಾರ್ಗಸೂಚಿ ದರದಂತೆ ಈ ಆಸ್ತಿಯ ಮೌಲ್ಯ ₹140 ಕೋಟಿ ಆಗುತ್ತದೆ. ಆದರೆ, ಮಾರುಕಟ್ಟೆ ಮೌಲ್ಯವು ಇದಕ್ಕಿಂತ ನಾಲ್ಕೂವರೆ ಪಟ್ಟು ಹೆಚ್ಚು ಇದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಹೇಳಿದರು.

54 ವಕಾರಸಾಲುಗಳನ್ನು ಮರಳಿ ವಶಕ್ಕೆ ಪಡೆಯುವಲ್ಲಿ ನಗರಾಡಳಿತ ಮತ್ತು ಜಿಲ್ಲಾಡಳಿತ ಯಶಸ್ವಿಯಾಗಿರುವ ಬೆನ್ನಲ್ಲೇ, ಇದು ಇತರೆ ಒತ್ತುವರಿದಾರರಲ್ಲೂ ನಡುಕ ಹುಟ್ಟಿಸಿದೆ. ಲೀಜ್‌ ಅವಧಿ ಪೂರ್ಣಗೊಂಡರೂ ನಗರಸಭೆಗೆ ಹಸ್ತಾಂತರವಾಗದೇ ಇರುವ ಇತರೆ ಆಸ್ತಿಗಳನ್ನು ವಶಪಡಿಸಿಕೊಳ್ಳಲು ನಗರಸಭೆ ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿದೆ.

ADVERTISEMENT

ನಗರದ ಕ್ಲಾಥ್ ಮಾರ್ಕೆಟ್, ಗ್ರೇನ್ ಮಾರ್ಕೆಟ್, ಚರಂಡಿ ಮೇಲೆ ಅಕ್ರಮವಾಗಿ ನಿರ್ಮಾಣ ಮಾಡಿರುವ ಅಂಗಡಿ-ಮುಂಗಟ್ಟು, ವಕೀಲ ಚಾಳ, ಹೆಲ್ತ್ ಕ್ಯಾಂಪ್ ಸೇರಿ ಹಲವು ಪ್ರದೇಶಗಳು ನಗರಸಭೆಗೆ ಸೇರಿದ ಸ್ಥಿರಾಸ್ತಿಗಳಾಗಿದ್ದು, ಇವು ಲೀಜ್‌ದಾರರ ವಶದಲ್ಲಿವೆ. ಈ ಆಸ್ತಿಗಳನ್ನು ವಶಕ್ಕೆ ಪಡೆಯುವಂತೆ ಸಾರ್ವಜನಿಕರಿಂದ ನಗರಾಡಳಿತದ ಮೇಲೆ ಒತ್ತಡಗಳು ಬರಲು ಆರಂಭಿಸಿವೆ. ಅವಳಿ ನಗರದಲ್ಲಿ ಲೀಜ್‌ ಅವಧಿ ಮುಗಿದಿರುವ, ನಗರಸಭೆ ಮಾಲೀಕತ್ವದ ಆಸ್ತಿಗಳ ಬಗ್ಗೆ ಮಾಹಿತಿ ಕೋರಿ ನೂರಕ್ಕೂ ಹೆಚ್ಚು ಅರ್ಜಿಗಳು ಮಾಹಿತಿ ಹಕ್ಕು ಕಾಯ್ದೆಯಡಿ ನಗರಾಡಳಿತಕ್ಕೆ ಸಲ್ಲಿಕೆಯಾಗಿವೆ.

ಯಶಸ್ವಿಯಾಗಿ ನಡೆದ ಕಾರ್ಯಾಚರಣೆ: ಸಣ್ಣಪುಟ್ಟ ಗಲಾಟೆ ಹೊರತುಪಡಿಸಿದರೆ ಭಾನುವಾರವೂ ನಗರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು. ಹಳೆಯ ಬಸ್‌ ನಿಲ್ದಾಣದ ಬಳಿ ವಕಾರಸಾಲಿನಲ್ಲಿದ್ದ ಮದ್ಯದಂಗಡಿ ತೆರವಿಗೆ ಸಂಬಂಧಿಸಿದಂತೆ ಮಾಲೀಕರ ನಡುವೆ ಪರಸ್ಪರ ವಾಗ್ವಾದ ನಡೆಯಿತು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್‌.ಎನ್‌ ರುದ್ರೇಶ್‌ ಅವರನ್ನು ನಿಂದಿಸಿದ ವ್ಯಕ್ತಿಯೊಬ್ಬರನ್ನು ಹಿಡಿದು ಪೌರಕಾರ್ಮಿಕರು ಎರಡೇಟು ಬಿಗಿದರು.

ಒತ್ತುವರಿ ತೆರವಿನ ನಂತರ ಗದಗ ನಗರದ ಹೃದಯ ಭಾಗದಲ್ಲಿ ಎಲ್ಲಿ ನೋಡಿದರೂ ಕಟ್ಟಡಗಳ ಅವಶೇಷಗಳೇ ಕಾಣಿಸುತ್ತಿದ್ದವು. ಅವಶೇಷಗಳ ನಡುವಿನಿಂದ ಕಬ್ಬಿಣ ಸರಳುಗಳನ್ನು ತೆಗೆದುಕೊಂಡು ಹೋಗಲು ಗುಜರಿ ಆಯುವವರು ಮುಗಿಬಿದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.