ADVERTISEMENT

ಲಕ್ಷ್ಮೇಶ್ವರ | ಗಣೇಶೋತ್ಸವ: ಯುವಕರಿಂದ ಸಮಾಜ ಸೇವೆ

ನವಚೇತನ ಯುವಕ ಸಂಘ; 9ನೇ ವರ್ಷದ ರಕ್ತದಾನ ಶಿಬಿರ

ನಾಗರಾಜ ಎಸ್‌.ಹಣಗಿ
Published 2 ಸೆಪ್ಟೆಂಬರ್ 2025, 3:05 IST
Last Updated 2 ಸೆಪ್ಟೆಂಬರ್ 2025, 3:05 IST
<div class="paragraphs"><p>ಲಕ್ಷ್ಮೇಶ್ವರ ತಾಲ್ಲೂಕು ಸೂರಣಗಿ ಗ್ರಾಮದ ನವಚೇತನ ಯುವಕ ಸಂಘದವರು ಪ್ರತಿಷ್ಠಾಪಿಸಿರುವ ಗಣೇಶ</p></div>

ಲಕ್ಷ್ಮೇಶ್ವರ ತಾಲ್ಲೂಕು ಸೂರಣಗಿ ಗ್ರಾಮದ ನವಚೇತನ ಯುವಕ ಸಂಘದವರು ಪ್ರತಿಷ್ಠಾಪಿಸಿರುವ ಗಣೇಶ

   

ಲಕ್ಷ್ಮೇಶ್ವರ: ಗ್ರಾಮದ ಸರ್ವತೋಮುಖ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದು. ಕಳೆದ ಎರಡು ದಶಕಗಳ ಹಿಂದೆ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ಗಣೇಶೋತ್ಸವ ಅಸ್ತಿತ್ವಕ್ಕೆ ಬಂದಿದ್ದು, ಅಲ್ಲಿನ ನವಚೇತನ ಯುವಕ ಸಂಘದ ಕಥೆ ಬಲು ರೋಚಕ.

ಕೇವಲ ಒಂಬತ್ತು ಉತ್ಸಾಹಿ ತರುಣರು ಒಂದೆಡೆ ಸೇರಿ ಗ್ರಾಮದ ಅಭಿವೃದ್ಧಿ ಕನಸು ಹೊತ್ತು ‘ನವಚೇತನ ಯುವಕ ಸಂಘ’ ವನ್ನು ಹುಟ್ಟುಹಾಕಿದರು. ಆರಂಭದಿಂದಲೇ ಹಲವು ಕ್ಷೇತ್ರಗಳಲ್ಲಿ ಸಂಘ ಸೇವೆ ಸಲ್ಲಿಸುವ ಮೂಲಕ ಗ್ರಾಮದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದ್ದು ಶ್ಲಾಘನೀಯ.

ADVERTISEMENT

ಸಾಮಾಜಿಕ ಸೇವೆ: ಹಳ್ಳಿಯ ಸ್ವಚ್ಛತೆ, ಪರಿಸರ ಸಂರಕ್ಷಣೆ, ಬಡವರಿಗೆ ನೆರವು ನೀಡುವ ಮೂಲಕ ಸಾಮಾಜಿಕ ಸೇವೆಯಲ್ಲಿ ಸಂಘ ಸಕ್ರಿಯವಾಗಿದೆ.

ಧಾರ್ಮಿಕ ಕಾರ್ಯಕ್ರಮಗಳು: ಹಳ್ಳಿಯ ಏಕತೆ ಮತ್ತು ಆಧ್ಯಾತ್ಮಿಕತೆ ಬೆಳೆಸುವ ಹಬ್ಬ, ಜಾತ್ರೆಗಳಲ್ಲಿ ಸಂಘದ ಯುವಕರು ನಿರಂತರವಾಗಿ ಶ್ರಮಿಸಿದ್ದಾರೆ. ಜಾತ್ರಾ ಮಹೋತ್ಸವಗಳಲ್ಲಿ ಅನೇಕ ಜನಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಗಮನ ಸೆಳೆದಿದ್ದಾರೆ.

ಶೈಕ್ಷಣಿಕ ಚಟುವಟಿಕೆಗಳು: ಸಂಘದ ವತಿಯಿಂದ ನೂರಾರು ಬಡ ಮಕ್ಕಳಿಗೆ ಪಠ್ಯ ಸಾಮಗ್ರಿ ವಿತರಿಸುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಸಂಘ ನೆರವಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ಕೂಡ ನೀಡುತ್ತಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು: ನಾಟಕ, ಕವಿಗೋಷ್ಠಿ, ಹಬ್ಬಗಳ ಆಚರಣೆ ಮೂಲಕ ಹಳ್ಳಿಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸಂಘದ ಸದಸ್ಯರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವುದು ಮಾದರಿಯಾಗಿದೆ.

ಕ್ರೀಡಾ ಚಟುವಟಿಕೆಗಳು: ವಾಲಿಬಾಲ್, ಕ್ರಿಕೆಟ್, ಕಬಡ್ಡಿ ಸೇರಿದಂತೆ ಮುಂತಾದ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಯುವಕರಲ್ಲಿ ಹೊಸ ಉತ್ಸಾಹ ತುಂಬುವ ಕೆಲಸವನ್ನು ಸಂಘ ಮಾಡಿದೆ.

21 ವರ್ಷಗಳ ಸೇವಾ ಪಯಣವನ್ನು ಪೂರೈಸಿರುವ ಸಂಘ ಇಂದು 130 ಯುವಕರನ್ನು ಒಳಗೊಂಡಿದೆ. ಪ್ರತಿ ಯುವಕರೂ ಸಮಾಜ ಸೇವೆಯಲ್ಲಿ ಭಾಗವಹಿಸುವುದು ಸಂಘದ ಕಾರ್ಯಚಟುವಟಿಕೆಗೆ ಹಿಡಿದ ಕನ್ನಡಿಯಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ರಕ್ತದಾನ ಶಿಬಿರ ಇಂದು

ಸಂಘ ಕಳೆದ ಎಂಟು ವರ್ಷಗಳಿಂದ ಗಣೇಶೋತ್ಸವ ಸಂದರ್ಭದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡು ಬರುತ್ತಿದ್ದು, ಈವರೆಗೆ ಒಟ್ಟು 339 ಪ್ಯಾಕೆಟ್‌ ರಕ್ತವನ್ನು ಸಂಗ್ರಹಿಸಲಾಗಿದೆ. ಅದರೊಂದಿಗೆ ಉಚಿತ ಆರೋಗ್ಯ ಶಿಬಿರಗಳನ್ನೂ ಸಹ ನಡೆಸಿಕೊಂಡು ಬರುತ್ತಿದೆ. ಈ ವರ್ಷ ಕೂಡ ಸೆ.2ರಂದು ನಡೆಯುವ ಶಿಬಿರದಲ್ಲಿ ರಕ್ತದಾನ ಶಿಬಿರ ನಡೆಸಲು ಸಂಘದ ಸದಸ್ಯರು ಸಿದ್ಧತೆ ನಡೆಸಿದ್ದಾರೆ.

ರಕ್ತದಾನ ಶಿಬಿರದಿಂದ ಅನೇಕ ಬಡವರ ಜೀವ ಉಳಿಸಿದೆ. ಸೂರಣಗಿ ಗ್ರಾಮದ ಬಡ ಕುಟುಂಬಗಳು ಮತ್ತು ಗರ್ಭಿಣಿ ಮಹಿಳೆಯರು ಸೇರಿದಂತೆ ಅನೇಕ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ರಕ್ತ ಪೂರೈಕೆ ಆಗಿದೆ. 600ಕ್ಕಿಂತ ಹೆಚ್ಚು ಜನರು ರಕ್ತ ಪಡೆದುಕೊಂಡಿದ್ದಾರೆ. ನವಚೇತನ ಯುವಕ ಸಂಘದ ಸದಸ್ಯರ ನಿಸ್ವಾರ್ಥ ಸೇವೆ ಎಲ್ಲರಿಗೂ ಮಾದರಿ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.