ADVERTISEMENT

ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿ ಇದ್ದಂತೆ: ಸಚಿವ ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 3:05 IST
Last Updated 19 ನವೆಂಬರ್ 2021, 3:05 IST

ಗದಗ: ‘ರಾಜ್ಯ ಸರ್ಕಾರದ ವಿರುದ್ಧ ಅಲೆ ಎದ್ದಿದೆ. ಅದರಲ್ಲಿ ಸರ್ಕಾರ ಕೊಚ್ಚಿಕೊಂಡು ಹೋಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅಲೆ, ಬಿರುಗಾಳಿ, ಸುನಾಮಿ ಶಬ್ದಗಳು ಕಾಂಗ್ರೆಸ್ ಪಕ್ಷಕ್ಕೆ ಸೇರಿವೆ’ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಲೇವಡಿ ಮಾಡಿದರು.

ನಗರದಲ್ಲಿ ಗುರುವಾರ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ‘2023ರ ವಿಧಾನಸಭಾ ಚುನಾವಣೆವರೆಗೂ ಕಾಯಬೇಕಿಲ್ಲ. ಅವರು ಹೇಳಿದಂತೆ, ಸದ್ಯ ನಡೆಯುತ್ತಿರುವ ಎಂಎಲ್‌ಸಿ ಚುನಾವಣೆಯಲ್ಲಿ ಸೋಲುಣ್ಣುವ ಮೂಲಕ ಅಲೆ, ಬಿರುಗಾಳಿ, ಸುನಾಮಿಯಲ್ಲಿ ಕಾಂಗ್ರೆಸ್ ಕೊಚ್ಚಿಕೊಂಡು ಹೋಗುವುದು ನಿಶ್ಚಿತ’ ಎಂದು ಭವಿಷ್ಯ ನುಡಿದರು.

‘ಸಿದ್ದರಾಮಯ್ಯ ಅವರು ಹಾವಾಡಿಗರಂತೆ ಮಾತನಾಡುತ್ತಿದ್ದಾರೆ. ಅವರ ನಾಯಕತ್ವವನ್ನು ಸ್ವಪಕ್ಷದವರೇ ಸ್ವೀಕರಿಸಲು ತಯಾರಿಲ್ಲ. ಅವರಲ್ಲಿಯೇ ಹೊಂದಾಣಿಕೆ ಇಲ್ಲ. ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್‌ ಎಂಬ ಮೂರು ಬಣಗಳಿದ್ದು, ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಾಗಿದೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ರಾಜ್ಯದಲ್ಲಿ ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಜನಸ್ವರಾಜ್ ಯಾತ್ರೆ ಮೂಲಕ ಬಿಜೆಪಿ ನಾಲ್ಕು ತಂಡಗಳಾಗಿ ಪ್ರಚಾರ ನಡೆಸಲಿದೆ’ ಎಂದು ತಿಳಿಸಿದರು.

‘ಬಿಟ್ ಕಾಯಿನ್ ಪ್ರಕರಣದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಗಳಿದ್ದರೂ ಅವರಿಗೆ ತಕ್ಕ ಶಾಸ್ತಿ ಆಗಲಿದೆ. ತಪ್ಪಿತಸ್ಥರು ಪಾತಾಳದಲ್ಲಿ ಅಡಗಿದ್ದರೂ ಅವರನ್ನು ಕರೆತರುವ ಶಕ್ತಿ ಸರ್ಕಾರಕ್ಕೆ ಇದೆ’ ಎಂದು ಹೇಳಿದರು.

‘ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದರೆ ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಬೇಕು. ವಿನಾಕಾರಣ ಬಿಜೆಪಿ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ಕಾಂಗ್ರೆಸ್ ಒಂದು ಸುಳ್ಳಿನ ಫ್ಯಾಕ್ಟರಿ ಇದ್ದಂತೆ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.