ನರಗುಂದ: ಪಟ್ಟಣ ದಿನೇ ದಿನೇ ಬೆಳೆಯುತ್ತಿದೆ. ಹೊಸ ಬಡಾವಣೆ, ನಗರಗಳು ತಲೆ ಎತ್ತಿವೆ. ಅವುಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದು ಸವಾಲಿನ ಕೆಲಸ. ಇವೆಲ್ಲದರ ನಡುವೆ ನೂತನ ರಾಣಿ ಚನ್ನಮ್ಮನಗರದಲ್ಲಿ ಒಳಚರಂಡಿ ಕಾಮಗಾರಿಗೆ ಕೇಂದ್ರ ಸರ್ಕಾರದ ವಿಶೇಷ ಅನುದಾನ ಬಿಡುಗಡೆಯಾಗಿದೆ. ಈ ಕಾಮಗಾರಿ ಸುಗಮವಾಗಿ ನಡೆಯಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
ಪಟ್ಟಣದ ರಾಣಿ ಚನ್ನಮ್ಮ ನಗರದಲ್ಲಿ ಶನಿವಾರ ರಾಷ್ಟ್ರೀಯ ಪರಿಸರ ಪರಿಹಾರ ನಿಧಿ ಹಾಗೂ ಸ್ವಚ್ಛ ಭಾರತ ಅಭಿಯಾನ 2.0 ನಿಧಿ ಅಡಿಯಲ್ಲಿ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಹಾಗೂ ಪುರಸಭೆ ಆಶ್ರಯದಲ್ಲಿ ನಡೆದ ₹9.76ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಆರೋಗ್ಯದಿಂದಿರಲು ಸ್ವಚ್ಛತೆ ಅಗತ್ಯ. ಸ್ವಚ್ಛತೆ ಹೆಚ್ಚಾಗಬೇಕಾದರೆ ಒಳಚರಂಡಿ ಯೋಜನೆ ತೀರಾ ಅಗತ್ಯವಿದೆ. ಅದನ್ನು ಮನಗಂಡು ಮೂರು ವರ್ಷಗಳ ಹಿಂದೆಯೇ ವಿಶೇಷ ಪ್ರಸ್ತಾವನೆ ಸಲ್ಲಿಸಿದ ಪರಿಣಾಮ ಕೇಂದ್ರ ಸರ್ಕಾರದಿಂದ ಈ ಅನುದಾನ ಒದಗಿದೆ.ಇದರ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ರೀತಿಯ ಅಭಿವೃದ್ಧಿ ಕಾಮಗಾರಿ ನಡೆಯುವಾಗ ತಾತ್ಕಾಲಿಕ ವಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಇದನ್ನು ಗಮನದಲ್ಲಿಟ್ಟುಕೊಂಡು ಸಹಕಾರ ನೀಡಬೇಕು. ಗುತ್ತಿಗೆ ದಾರರು ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಮೂರು ವರ್ಷಗಳ ಹಿಂದೆಯೇ ಮಾಜಿ ಸಚಿವರಾದ ಸಿ.ಸಿ.ಪಾಟೀಲರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ವಿಶೇಷ ಸಭೆ ನಡೆಸಿ ಒಳಚರಂಡಿ ನಿರ್ಮಾಣ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಅದು ಈಡೇರಿದ್ದು ಸಂತಸ ತಂದಿದೆ ಎಂದರು. ತಹಶೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ನೀಲಮ್ಮ ಒಡ್ಡಿಗೇರಿ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಸದಸ್ಯರಾದ ರಾಚನಗೌಡ ಪಾಟೀಲ, ಪ್ರಕಾಶ ಹಾದಿಮನಿ, ವಕೀಲ ಎಸ. ಆರ್.ಪಾಟೀಲ, ಚಂದ್ರು ದಂಡಿನ, ವಿಜಯ ಚಲವಾದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.