ADVERTISEMENT

‘ಸಾಮಾಜಿಕ ಅಂತರ’ ಹೆಚ್ಚಿದ ಜಾಗೃತಿ

ಮನೆಗಳಲ್ಲೇ ಉಳಿದ ಜನರು; ಮನೆ ಬಾಗಿಲಲ್ಲೇ ತರಕಾರಿ ಮಾರಾಟ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 13:19 IST
Last Updated 27 ಮಾರ್ಚ್ 2020, 13:19 IST
ಗದುಗಿನಲ್ಲಿ ಶುಕ್ರವಾರ ವ್ಯಾಪಾರಿಗಳು ವಾಹನಗಳಲ್ಲಿ ತರಕಾರಿಯನ್ನು ಗ್ರಾಹಕರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿದರು
ಗದುಗಿನಲ್ಲಿ ಶುಕ್ರವಾರ ವ್ಯಾಪಾರಿಗಳು ವಾಹನಗಳಲ್ಲಿ ತರಕಾರಿಯನ್ನು ಗ್ರಾಹಕರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿದರು   

ಗದಗ: ಲಾಕ್‌ಡೌನ್‌ ಘೋಷಣೆಯಾಗಿ ನಾಲ್ಕು ದಿನಗಳು ಕಳೆದ ಬೆನ್ನಲ್ಲೇ, ‘ಸಾಮಾಜಿಕ ಅಂತರ’ ಕಾಯ್ದುಕೊಳ್ಳುವ ಕುರಿತು ಜಿಲ್ಲೆಯಲ್ಲಿ ಜಾಗೃತಿ ಹೆಚ್ಚುತ್ತಿದೆ.

ಬುಧವಾರ ಮತ್ತು ಗುರುವಾರಕ್ಕೆ ಹೋಲಿಸಿದರೆ, ಶುಕ್ರವಾರ ರಸ್ತೆಗಿಳಿಯದೇ ಮನೆಗಳಲ್ಲೇ ಉಳಿದವರ ಸಂಖ್ಯೆ ಹೆಚ್ಚಿದೆ. ಗದಗ–ಬೆಟಗೇರಿ ಅವಳಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಕಡಿಮೆ ಸಂಖ್ಯೆಯ ಜನರು ರಸ್ತೆಗೆ ಇಳಿದಿದ್ದರು. ಬೆಳಿಗ್ಗೆ ತರಕಾರಿ ಮತ್ತು ದಿನಸಿ ಖರೀದಿಗಾಗಿ ಜನರು ಹೊರಬಂದರೂ, ತ್ವರಿತವಾಗಿ ಖರೀದಿ ಪ್ರಕ್ರಿಯೆ ಮುಗಿಸಿ, 10 ಗಂಟೆಯ ಒಳಗೆ ಮನೆಯೊಳಗೆ ಸೇರಿಕೊಂಡರು. ಹೀಗಾಗಿ 11 ಗಂಟೆಯ ನಂತರ ನಗರದಲ್ಲಿ ಜನರ ಮತ್ತು ವಾಹನ ಸಂಚಾರ ವಿರಳವಾಗಿತ್ತು.

ಔಷಧ, ಅಗತ್ಯ ವಸ್ತುಗಳ ಖರೀದಿಗೆ ಹೊರಬರುವವರು ಮಾಸ್ಕ್‌ ಧರಿಸುವುದನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. ಮಾಸ್ಕ್‌ ಇಲ್ಲದೆ ವಾಹನಗಳೊಂದಿಗೆ ರಸ್ತೆಗಿಳಿಯುವವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ. ಬುಧವಾರ ಮತ್ತು ಗುರುವಾರ ಲಾಕ್‌ಡೌನ್‌ ಉಲ್ಲಂಘಿಸಿ ರಸ್ತೆಗಿಳಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದರು. ಹೀಗಾಗಿ ಶುಕ್ರವಾರ ರಸ್ತೆಗಿಳಿಯುವರ ಸಂಖ್ಯೆ ತೀರಾ ಕಡಿಮೆಯಾಗಿತ್ತು.

ಗದಗ–ಬೆಟಗೇರಿ ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ, ರೋಟರಿ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಪೊಲೀಸರು ಬ್ಯಾರಿಕೇಡ್‌ ಹಾಕಿದ್ದು, ಸವಾರರ ಮೇಲೆ ನಿಗಾ ವಹಿಸಿದ್ದಾರೆ. ನಗರದಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪೊಲೀಸರ ಕಣ್ಣುತಪ್ಪಿಸಿ ಹೋಗಲು ಸಾಧ್ಯವೇ ಇಲ್ಲದಂತಾಗಿದೆ. ಹೀಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದ ಯುವಕರು ಅನಿವಾರ್ಯವಾಗಿ ಮನೆಯಲ್ಲೇ ಉಳಿಯುವಂತಾಗಿದೆ. ಶುಕ್ರವಾರ ಸಂಜೆ ಯಾವುದೇ ಕಾರಣ ಇಲ್ಲದೆ, ದ್ವಿಚಕ್ರ ವಾಹನಗಳೊಂದಿಗೆ ರಸ್ತೆಗಿಳಿದ ಯುವಕರಿಗೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿದರು. ವಾಹನಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ, ಠಾಣೆಗೆ ತೆಗೆದುಕೊಂಡು ಹೋದರು. ಲಾಕ್‌ಡೌನ್‌ ಅವಧಿ ಮುಗಿದ ನಂತರ ವಾಹನ ಬಿಟ್ಟುಕೊಡುವುದಾಗಿ ಹೇಳಿದರು.

ADVERTISEMENT

ಗುರುವಾರ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರೇ, ಲಾಠಿ ಹಿಡಿದು ಮಾರುಕಟ್ಟೆಗೆ ಬಂದು, ಲಾಕ್‌ಡೌನ್‌ ಉಲ್ಲಂಘಿಸಿದ ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಸಾರ್ವಜನಿಕ ಅಂತರ ಕಾಯ್ದುಕೊಳ್ಳುವ ಮಹತ್ವದ ಕುರಿತು ಪಾಠ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.