ADVERTISEMENT

ಲಾಠಿ ಚಾರ್ಜ್ ಪ್ರಕರಣ | ನ್ಯಾಯ ಸಿಗುವವರೆಗೆ ಹೋರಾಟ ನಿರಂತರ: ಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 5:40 IST
Last Updated 9 ಡಿಸೆಂಬರ್ 2025, 5:40 IST
ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬಸವಜಯ ಮೃತ್ಯುಂಜಯ ಸ್ವಾಮೀಜಿ   

ಗದಗ: ‘ಸರ್ಕಾರ ಎಷ್ಟೇ ಲಾಠಿ ಏಟು ಕೊಟ್ಟರೂ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಸರ್ಕಾರ ದ್ವೇಷದಿಂದ ಪಂಚಮಸಾಲಿ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದರೆ; ನಾವು ಶಾಂತಿಯಿಂದ ಹೋರಾಟ ಮುಂದುವರಿಸುತ್ತೇವೆ. ಬೆಳಗಾವಿಯ ಅದೇ ಸ್ಥಳದಿಂದ ಮತ್ತೊಮ್ಮೆ ಹೋರಾಟದ ಸಂಕಲ್ಪ ಮಾಡುತ್ತೇವೆ’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಕಳೆದ ವರ್ಷ ಸುವರ್ಣ ವಿಧಾನಸೌಧ ಬಳಿ ಪಂಚಮಸಾಲಿ ಮೀಸಲಾತಿ ಹೋರಾಟ ವೇಳೆ ಲಾಠಿ ಚಾರ್ಜ್ ಪ್ರಕರಣ ಕುರಿತು ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಪೊಲೀಸರಿಗೆ ಕುಮ್ಮಕ್ಕು ನೀಡಿ ನಮ್ಮ ಸಮುದಾಯದ ಜನರ ಮೇಲೆ ಅಮಾನವೀಯವಾಗಿ ನಡೆದುಕೊಂಡಿತ್ತು. ನಮ್ಮ ಸಮುದಾಯದ ಮೇಲೆ ದೌರ್ಜನ್ಯ ಮಾಡಿದ್ದು ಅದೇ ಮೊದಲು’ ಎಂದು ಹರಿಹಾಯ್ದರು.

‘ಇದರಿಂದ ಪಂಚಮಸಾಲಿ ಸಮುದಾಯದ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ. ಡಿ.10ರಂದು ಲಿಂಗಾಯತ ದೌರ್ಜನ್ಯ ದಿನ ಎಂದು ಆಚರಿಸುತ್ತೇವೆ. ಬೆಳಗಾವಿಯ ಗಾಂಧಿ ಭವನದಿಂದ ಸುವರ್ಣ ವಿಧಾಣಸೌಧದವರೆಗೆ ಕೈ, ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು, ಪಂಚಮಸಾಲಿ ಧ್ವಜ ಹಿಡಿದು ಮೌನ ಪಥ ಸಂಚಲನ ಮಾಡುವ ಮೂಲಕ ಯಾವುದೇ ಜನಾಂಗದ ಹೋರಾಟ ಹತ್ತಿಕ್ಕುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡುತ್ತೇವೆ’ ಎಂದು ಹೇಳಿದರು.

ADVERTISEMENT

ಗದಗ ನಗರದ ಅಶೋಕ ಸಂಕಣ್ಣವರ ಮಿಲ್‍ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಂಚಮಸಾಲಿ ಹಿರಿಯರ ಘಟಕದ ಅಧ್ಯಕ್ಷರು ಅನಿಲಕುಮಾರ ಪಾಟೀಲ್, ಅಶೋಕ ಸಂಕಣ್ಣವರ, ಮೋಹನ ಮಾಳಶೆಟ್ಟಿ, ಎಸ್.ಎಸ್.ಹುರಕಡ್ಲಿ, ವಿರುಪಾಕ್ಷಪ್ಪ ಮಟ್ಟಿ, ಕುಬೇರಗೌಡ ಮಲ್ಲಫೂರ, ಡಾ. ಎಸ್.ವಿ.ಶಿವನಗೌಡ್ರ, ಯುವ ಘಟಕದ ಅಧ್ಯಕ್ಷರು ಅಯ್ಯಪ್ಪ ಅಂಗಡಿ, ವಸಂತ ಪಡಗದ, ಈರಣ್ಣ ಕೊಟಗಿ, ನಗರಸಭೆ ಸದಸ್ಯರಾದ ಮಹಾಂತೇಶ ನಲವಡಿ, ಪ್ರಕಾಶ್ ಅಂಗಡಿ, ಶಿವು ಹಿರೇಮನಿಪಾಟೀಲ, ಸಂಗಮೇಶ ಕವಳಿಕಾಯಿ, ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಗೊಳಗೊಳಕಿ, ಸಿದ್ದಣ್ಣ ಜೀವನಗೌಡ್ರ, ಸಿದ್ದು ಪಾಟೀಲ ಇದ್ದರು.

ಡಿ.10ರಂದು ಬೆಳಗಾವಿಯ ಗಾಂಧಿಭವನದಿಂದ ಸುವರ್ಣಸೌಧವರೆಗೆ ಮೌನ ಪಥಸಂಚಲನ ನೆಡೆಸಲು ನಿರ್ಣಯ ಕೈಗೊಳ್ಳಲಾಗಿದೆ. ಆದ್ದರಿಂದ ಗದಗ ಜಿಲ್ಲೆ ಪಂಚಮಸಾಲಿ ಸಮಾಜ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು
ಬಸವಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಸಮಾಜ

‘ಗೋಹತ್ಯೆ ಕಾಯ್ದೆ ರಚನೆಗೆ ವಿರೋಧವಿದೆ’ 

‘ಗೋವು ರೈತನ ಮಿತ್ರ. ಗೋ ಹತ್ಯೆಗೆ ಬೆಂಬಲಿಸುವುದಾಗಲಿ ಗೋ ಹತ್ಯೆಗೆ ಪೂರಕವಾದ ಕಾಯ್ದೆ ರಚನೆ ಮಾಡುವುದನ್ನು ವಿರೋಧಿಸುತ್ತೇವೆ’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ‘ಗೋವು ಹತ್ಯೆ ಬಗ್ಗೆ ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ತಿದ್ದುಪಡಿ ವಿಧೇಯಕ ಮಂಡಿಸಿದರೆ ದಯಾಮೂಲ ಸಂಸ್ಕೃತಿಗೆ ಸರ್ಕಾರ ವಿರೋಧ ಮಾಡುತ್ತಿದೆ ಎಂಬ ಭಾವನೆ ಹೆಚ್ಚಾಗುತ್ತದೆ’ ಎಂದು ಹೇಳಿದರು. ‘ಗೋವು ಹತ್ಯೆ ನಿಷೇಧ ಮಾಡಬೇಕು ಎಂಬುದು ಭಾರತೀಯರ ಆಗ್ರಹವಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಪೂರಕವಾದ ಆಲೋಚನೆ ಮಾಡಬೇಕು. ವ್ಯತಿರಿಕ್ತ ಆಲೋಚನೆ ಮಾಡುವುದು ಕೃಷಿಕರಿಗೆ ಮಾಡಿದ ಅವಮಾನವಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.