ADVERTISEMENT

ಗರ್ಭಿಣಿ ಕೊನೆಯುಸಿರೆಳೆದ ತಕ್ಷಣ ಶಸ್ತ್ರಚಿಕಿತ್ಸೆ: ಬದುಕುಳಿದ ಮಗು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 21:30 IST
Last Updated 11 ನವೆಂಬರ್ 2021, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗದಗ: ನಗರದ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರ ಸಮಯಪ್ರಜ್ಞೆಯಿಂದ ಒಂದು ಮಗುವಿನ ಜೀವ ಉಳಿದಿದೆ. ಹುಟ್ಟಿದಾಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಹೆಣ್ಣು ಮಗುವಿನ ಆರೋಗ್ಯ ಈಗ ದಿನೇದಿನೇ ಚೇತರಿಸಿಕೊಳ್ಳುತ್ತಿದೆ.

ಮೃತ ಗರ್ಭಿಣಿಯ ಹೊಟ್ಟೆಯಿಂದ ಮಗುವನ್ನು ಜೀವಂತವಾಗಿ ಹೊರತೆಗೆದ ಆಶ್ಚರ್ಯಕರ ಘಟನೆಯೊಂದು ನಗರದಲ್ಲಿ ನಡೆದಿದ್ದು, ತಡವಾಗಿತಿಳಿದಿದೆ. ವೈದ್ಯರ ಸಮಯಪ್ರಜ್ಞೆ ಹಾಗೂ ಮೃತ ಗರ್ಭಿಣಿಯ ಸಂಬಂಧಿಕರ ಸಹಕಾರದಿಂದ ಮಗುವಿನ ಜೀವ ಉಳಿದಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕರೀಗೌಡರ ತಿಳಿಸಿದ್ದಾರೆ.

ಗದಗ ಜಿಲ್ಲೆ ಗಜೇಂದ್ರಗಡ ತಾಲ್ಲೂಕಿನ ಮುಶಿಗೇರಿಯ ಅನ್ನಪೂರ್ಣ ಅಬ್ಬಿಗೇರಿ ಲೋ ಬಿಪಿ ಹಾಗೂ ಮೂರ್ಛೆ ರೋಗದಿಂದ ಬಳಲುತ್ತಿದ್ದರು. ತುಂಬು ಗರ್ಭಿಣಿಯಾಗಿದ್ದ ಇವರಿಗೆ ನ.4ರಂದು ಬೆಳಿಗ್ಗೆ 8.55ಕ್ಕೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಕುಟುಂಬದವರು ತಕ್ಷಣವೇ ಆಕೆಯನ್ನು ಕರೆದುಕೊಂಡು ಊರಿಂದ ಹೊರಟರಾದರೂ ಆಸ್ಪತ್ರೆಗೆ ಬರುವಷ್ಟರಲ್ಲಿ ಬಹುತೇಕ ಸಾಯುವ ಹಂತದಲ್ಲಿದ್ದರು.

ADVERTISEMENT

‘ಮಹಿಳೆಗೆ ಆ ದಿನ ಮನೆಯಲ್ಲಿ ಎರಡು ಬಾರಿ ಪಿಟ್ಸ್‌ ಬಂದಿದೆ. ಜತೆಗೆ ಆಂಬುಲೆನ್ಸ್‌ನಲ್ಲಿ ಕರೆತರುವಾಗಲೂ ಮೂರ್ಛೆ ಬಿದ್ದಿದ್ದಾರೆ. ಇಲ್ಲಿಗೆ ಕರೆತಂದಾಗ ಆಕೆ ಇನ್ನೇನು ಕೊನೆಯುಸಿರು ಎಳೆಯುವ ಹಂತದಲ್ಲಿದ್ದರು. ತಕ್ಷಣವೇ ಆಕೆಗೆ ಇಸಿಜಿ ಮಾಡಲಾಯಿತು. ಆ ವೇಳೆ ಗರ್ಭಿಣಿಯ ಉಸಿರು ನಿಂತಿತು. ಮಹಿಳೆಯ ಹೃದಯದ ಬಡಿತ ನಿಂತಿದೆ ಎಂಬುದಕ್ಕೆ ಸಾಕ್ಷಿಯಾಗಿ ಇಸಿಜಿ ಮಷಿನ್‌ ಮೇಲೆ ಸಮರೇಖೆ ಮೂಡಿತು’ ಎಂದು ಅಂದು ನಡೆದ ಘಟನೆಯನ್ನು ವಿವರಿಸಿದರು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕರೀಗೌಡರ.

ಆ ವೇಳೆಗೆ ಗರ್ಭಿಣಿಯ ಕಡೆಯವರು 30 ಮಂದಿ ಆಸ್ಪತ್ರೆಗೆ ಬಂದಿದ್ದರು. ಅಲ್ಲಿದ್ದ ಹಿರಿಯರನ್ನು ಸಂಪರ್ಕಿಸಿದ ವೈದ್ಯರ ತಂಡ ತಾಯಿ ಉಳಿಯುವುದು ಕಷ್ಟ. ನೀವು ಅನುಮತಿ ನೀಡಿದರೆ ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರಗೆ ತೆಗೆಯುತ್ತೇವೆ ಎಂದು ತಿಳಿಸಿದ್ದಾರೆ. ಇದಕ್ಕೆ ಹಿರಿಯರು ಸಹ ಒಪ್ಪಿಗೆ ನೀಡಿದ್ದರಿಂದ 30 ನಿಮಿಷದೊಳಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರು ಮಗುವನ್ನು ಹೊರತೆಗೆದಿದ್ದಾರೆ.‌

ಡಾ.ಕರೀಗೌಡರ

‘ಮೃತ ಗರ್ಭಿಣಿಯನ್ನು ಸ್ಕ್ಯಾನಿಂಗ್‌ ಮಾಡಿ ನೋಡಿದಾಗ ಗರ್ಭದಲ್ಲಿದ್ದ ಮಗುವಿನ ಹೃದಯ ಇನ್ನೂ ಬಡಿದುಕೊಳ್ಳುತ್ತಿತ್ತು. ಆಕೆ ಗರ್ಭಿಣಿ ಆದಾಗಿನಿಂದಲೂ ಸ್ಥಳೀಯ ವೈದ್ಯರ ಬಳಿಯೇ ತೋರಿಸಿಕೊಳ್ಳುತ್ತಿದ್ದರು. ಹಾಗಾಗಿ, ಆಕೆಯ ಆರೋಗ್ಯ ಸ್ಥಿತಿಗತಿ ಬಗ್ಗೆ ಏನೂ ತಿಳಿದಿರಲಿಲ್ಲ. ಆದರೂ, ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಹೊರತೆಗೆದೆವು. ಮಗು ಹೊರಬಂದಾಗ ಅದರ ಆರೋಗ್ಯ ಕೂಡ ಚೆನ್ನಾಗಿರಲಿಲ್ಲ. ತಕ್ಷಣವೇ ವೆಂಟಿಲೇಟರ್‌ ಕೊಟ್ಟು, ಕಾಳಜಿ ಮಾಡಿದೆವು. ಕ್ರಮೇಣ ಮಗುವಿನ ಆರೋಗ್ಯ ಸುಧಾರಿಸುತ್ತಾ ಬಂತು. ಮಗು ಈಗ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯದಿಂದಿದೆ’ ಎಂದು ಅವರು ಹೇಳಿದರು.

ಲೋ ಬಿಪಿ, ಮೂರ್ಛೆ ರೋಗದಿಂದ ನರಳುತ್ತಿದ್ದ ಮಹಿಳೆಗೆ ಒಮ್ಮಿಂದೊಮ್ಮೆಲೆ ಕಾರ್ಡಿಯಾಕ್‌ ಆರೆಸ್ಟ್‌ ಆಗಿ ಮೃತಪಟ್ಟಿದ್ದಾರೆ.
- ಡಾ.ಕರೀಗೌಡರ, ಜಿಲ್ಲಾ ಶಸ್ತ್ರಚಿಕಿತ್ಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.