ರೋಣ: ಪ್ರಸಕ್ತ ಸಾಲಿನಲ್ಲಿ ಪೂರ್ವ ಮುಂಗಾರು ಚೆನ್ನಾಗಿದ್ದು, ರೈತಾಪಿ ವರ್ಗದಲ್ಲಿ ಸಂತಸ ಉಂಟು ಮಾಡಿದೆ. ಪ್ರಮುಖ ಆಹಾರ ಬೆಳೆಗಳಾದ ಹೆಸರು, ಮೆಕ್ಕೆಜೋಳ ಬಿತ್ತನೆ ಕೂಡ ಪ್ರಾರಂಭವಾಗಿದೆ. ಆದರೆ, ತಾಲ್ಲೂಕಿನಾದ್ಯಂತ ಹೆಚ್ಚುತ್ತಿರುವ ಕೃಷ್ಣಮೃಗಗಳ ಹಾವಳಿಗೆ ರೈತರು ತೊಂದರೆಅನುಭವಿಸುತ್ತಿದ್ದಾರೆ.
ರೋಣ ತಾಲ್ಲೂಕು ಸೇರಿದಂತೆ ಸಮೀಪದಲ್ಲಿರುವ ಸವಡಿ ಚಿಕ್ಕಮಣ್ಣೂರು, ಜಕ್ಕಲಿ, ಹಿರೇಮಣ್ಣೂರು, ಕೊತಬಾಳ, ಮುಗಳಿ, ಜಿಗಳೂರು, ಹೊಸಳ್ಳಿ, ಕುರಟ್ಟಿ ಗ್ರಾಮಗಳ ಜಮೀನುಗಳಲ್ಲಿ ಹೆಸರು ಬೆಳೆ ಮೊಳಕೆಯೊಡೆದು, ಸಸಿ ಹಂತ ತಲುಪಿದೆ. ಈ ಮಧ್ಯೆ ಕೃಷ್ಣಮೃಗಗಳ ಹಾವಳಿಗೆ ರೈತರು ಕಂಗಾಲಾಗಿದ್ದಾರೆ.
ರೋಣ ಭಾಗದ ಪ್ರಮುಖ ಬೆಳೆಯಾದ ಹೆಸರು ರೈತರಿಗೆ ಆದಾಯ ತಂದುಕೊಡುತ್ತದೆ. ಕಳೆದ ಕೆಲವು ವರ್ಷಗಳಿಂದ ಕಡಿಮೆಯಾಗಿದ್ದ ಕೃಷ್ಣಮೃಗಗಳ ಹಾವಳಿ ಇತ್ತೀಚೆಗೆ ವ್ಯಾಪಕವಾಗಿದ್ದು, ಬೆಳಿಗ್ಗೆ ಮತ್ತು ಸಂಜೆ ಕೃಷ್ಣಮೃಗಗಳನ್ನು ಕಾಯುವುದೇ ರೈತರ ಕೆಲಸವಾಗಿದೆ.
ಕೃಷ್ಣಮೃಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾದ ಅರಣ್ಯ ಇಲಾಖೆ ಮತ್ತು ಕೃಷಿ ಇಲಾಖೆಗಳು ಈ ಕುರಿತು ಮೌನವಹಿಸಿರುವುದು ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಕೃಷ್ಣಮೃಗಗಳ ಹಾವಳಿಗೆ ಕಡಿವಾಣ ಹಾಕಲು ಬೇಕಾದ ವೈಜ್ಞಾನಿಕ ಸಲಕರಣೆ ವಿತರಣೆಗೆ ಇಲಾಖೆಗಳು ಮುಂದಾಗಿಲ್ಲ. ಜತೆಗೆ ದುಬಾರಿ ಬೆಲೆ ತೆತ್ತು ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಈಗಾಗಲೇ ಸಾಕಷ್ಟು ಖರ್ಚು ಮಾಡಿರುವ ರೈತರನ್ನು ಒಂದು ಕಡೆ ಮಳೆಯ ಕೊರತೆಯ ಚಿಂತೆ ಕಾಡುತ್ತಿದ್ದರೆ; ಮತ್ತೊಂದೆಡೆ ಕೃಷ್ಣಮೃಗಗಳ ಹಾವಳಿ ರೈತರನ್ನು ಹೈರಾಣಾಗಿಸುತ್ತಿದೆ. ಕೂಡಲೇ ಕೃಷ್ಣ ಮೃಗಗಳ ಹಾವಳಿ ತಡೆಯಲು ಇಲಾಖೆಗಳು ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಜಿಂಕೆಗಳು ಹೊಲಗಳಿಗೆ ದಾಳಿ ನಡೆಸಿ, ಬೆಳೆ ಹಾಳು ಮಾಡುತ್ತಿವೆ. ಆದರೆ, ಅರಣ್ಯ ಇಲಾಖೆ ಮಾತ್ರ ಗಮನ ಹರಿಸುತ್ತಿಲ್ಲ. ಹೀಗೆ ಮುಂದುವರಿದರೆ ರೈತರಿಗೆ ಅಪಾರ ನಷ್ಟ ಸಂಭವಿಸಲಿದೆ. ಈ ಸಂಬಂಧ ಕೂಡಲೇ ಕ್ರಮ ಕೈಗೊಳ್ಳಬೇಕು.ದೊಡ್ಡಬಸಪ್ಪ ನವಲಗುಂದ, ರೈತ ಸಂಘದ ಕಾರ್ಯದರ್ಶಿಗಳು
2018ರಲ್ಲಿ ಕೃಷ್ಣಮೃಗಗಳ ಹಾವಳಿ ತಪ್ಪಿಸಲು ಜಿಂಕೆ ಪಾರ್ಕ್ ನಿರ್ಮಿಸುವ ಸಲುವಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಅನುಮೋದನೆಗೊಂಡಿಲ್ಲ. ರೈತರ ಬೆಳೆ ನಾಶವಾಗಿದ್ದರಿಂದ, ಬೆಳೆ ಪರಿಹಾರಕ್ಕೆ ರೈತರು ಅರ್ಜಿ ಸಲ್ಲಿಸಬಹುದು.ಅನ್ವರ್, ಕೋಲಾರ ವಲಯ ಅರಣ್ಯಾಧಿಕಾರಿ, ರೋಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.