ADVERTISEMENT

ಗದಗ ರೈಲ್ವೆ ನಿಲ್ದಾಣಕ್ಕೆ ‘ನಾಮಕರಣ’ದ ಕೂಗು

ಪುಟ್ಟರಾಜ ಗವಾಯಿ, ಭೀಮಸೇನ ಜೋಶಿ, ಸಿದ್ಧನಗೌಡ ಪಾಟೀಲರ ಹೆಸರು ಮುನ್ನೆಲೆಗೆ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 25 ಮೇ 2025, 5:11 IST
Last Updated 25 ಮೇ 2025, 5:11 IST
ಗದಗ ರೈಲ್ವೆ ನಿಲ್ದಾಣದ ಹೊರನೋಟ
ಗದಗ ರೈಲ್ವೆ ನಿಲ್ದಾಣದ ಹೊರನೋಟ   

ಗದಗ: ಅಮೃತ ಭಾರತ ಸ್ಟೇಷನ್‌ ಯೋಜನೆ ಅಡಿ ಗದಗ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿಗೊಂಡು, ಈಚೆಗಷ್ಟೇ ಜನ ಬಳಕೆಗೆ ಮುಕ್ತವಾಗಿದೆ. ರೈಲ್ವೆ ನಿಲ್ದಾಣ ಉದ್ಘಾಟನೆಗೊಂಡ ಬೆನ್ನಲ್ಲೇ ಈ ನಿಲ್ದಾಣಕ್ಕೆ ಜಿಲ್ಲೆಯ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹೆಗ್ಗುರುತಿನ ವ್ಯಕ್ತಿಗಳ ಹೆಸರನ್ನು ನಾಮಕರಣ ಮಾಡಬೇಕು ಎಂಬ ಕೂಗು ಮುನ್ನಲೆಗೆ ಬಂದಿದೆ.

ಗದಗ ಜಿಲ್ಲಾ ಬ್ರಾಹ್ಮಣರ ಸಂಘ, ಹಾಲುಮತ ಮಹಾಸಭಾ, ಎಸ್‌ಎಸ್‌ಕೆ ಸಮಾಜ ಸೇರಿದಂತೆ ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸಂಘ, ಸಂಸ್ಥೆಗಳು ಗದಗ ರೈಲ್ವೆ ನಿಲ್ದಾಣಕ್ಕೆ ಯಾರ ಹೆಸರನ್ನು, ಯಾತಕ್ಕಾಗಿ ಇಡಬೇಕು ಎಂಬ ವಿವರಣೆಯೊಂದಿಗೆ ಸಚಿವರು, ಅಧಿಕಾರಿಗಳ ಮೂಲಕ ಸರ್ಕಾರವನ್ನು ಒತ್ತಾಯಿಸಿವೆ.

ಈ ಪೈಕಿ ಹೆಚ್ಚಿನ ಸಂಘಟನೆಯವರು ವೀರೇಶ್ವರ ಪುಣ್ಯಾಶ್ರಮದ ಪಂಡಿತ್‌ ಪುಟ್ಟರಾಜ ಕವಿ ಗವಾಯಿಗಳು, ಸಂಗೀತ ಕ್ಷೇತ್ರದ ದಿಗ್ಗಜ ಪಂಡಿತ್‌ ಭೀಮಸೇನ ಜೋಶಿ ಹಾಗೂ ಸಹಕಾರಿ ಭೀಷ್ಮ ಕಣಗಿನಹಾಳದ ಸಿದ್ಧನಗೌಡ ಪಾಟೀಲ ಅವರ ಹೆಸರನ್ನು ಮುಂಚೂಣಿಗೆ ತಂದು, ನಾಮಕರಣ ಮಾಡುವಂತೆ ಬೇಡಿಕೆ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಗದಗ ರೈಲ್ವೆ ನಿಲ್ದಾಣಕ್ಕೆ ಪಂಡಿತ್ ಪುಟ್ಟರಾಜ ಗವಾಯಿಗಳವರ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ನಮ್ಮ ಮನವಿ ಸ್ವೀಕರಿಸಿದ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಕ್ರಾಂತಿ ಸೇನಾ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಬಾಬು ಬಾಕಳೆ ತಿಳಿಸಿದ್ದಾರೆ.

‘ಗದಗ ಸಂಗೀತ ಕ್ಷೇತ್ರಕ್ಕೆ ಹೆಸರುವಾಸಿಯಾದ ನೆಲ. ಹಾಗಾಗಿ, ಗದಗ ಅಂದ ತಕ್ಷಣ ವೀರೇಶ್ವರ ಪುಣ್ಯಾಶ್ರಮ ನೆನಪಿಗೆ ಬರುತ್ತದೆ. ಅಂಧ ಅನಾಥರ ಆಶಾಕಿರಣ ಈ ಆಶ್ರಮ. ಪುಟ್ಟರಾಜ ಗವಾಯಿಗಳ ಹೆಸರು ಗದಗ ರೈಲ್ವೆ ನಿಲ್ದಾಣಕ್ಕೆ ಇಡುವ ಮುಖಾಂತರ ಗವಾಯಿಗಳಿಗೆ ಗೌರವ ಸಲ್ಲಿಸಬೇಕು. ಈ ಮೂಲಕ ಅವರ ಭಕ್ತರ ಕೋರಿಕೆ ಈಡೇರಿಸಬೇಕು’ ಎನ್ನುತ್ತಾರೆ ಅವರು.

ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ, ‘ಭಾರತ ರತ್ನ’ ಪಡೆದ ಪಂಡಿತ್‌ ಭೀಮಸೇನ ಜೋಶಿ ಅವರ ಹೆಸರನ್ನು ಗದಗ ರೈಲ್ವೆ ನಿಲ್ದಾಣಕ್ಕೆ ಇಡಬೇಕು ಎಂದು ಒತ್ತಾಯಿಸಿ ಗದಗ ಜಿಲ್ಲಾ ಬ್ರಾಹ್ಮಣ ಸಮುದಾಯ ಕೂಡ ಈಚೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಸಹಕಾರ ರಂಗದ ಪಿತಾಮಹ ಕಣಗಿನಹಾಳದ ಸಿದ್ಧನಗೌಡ ಪಾಟೀಲ ಅವರ ಹೆಸರನ್ನು ಗದಗ ರೈಲು ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದು ಹಾಲುಮತ ಮಹಾಸಭಾದವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

‘ಏಷ್ಯಾ ಖಂಡದಲ್ಲೇ ಪ್ರಥಮವಾಗಿ ಸಹಕಾರ ಸಂಘ ಸ್ಥಾಪಿಸಿ ಇತಿಹಾಸ ಬರೆದ ಕಣಗಿನಹಾಳದ ಸಿದ್ಧನಗೌಡ ಪಾಟೀಲ ಅವರ ಹೆಸರನ್ನು ಶಾಶ್ವತವಾಗಿರಿಸಲು ಪುನರಾಭಿವೃದ್ಧಿಗೊಂಡ ರೈಲು ನಿಲ್ದಾಣಕ್ಕೆ ಅವರ ಹೆಸರು ಇಡಲು ಸರ್ಕಾರ ಕ್ರಮವಹಿಸಬೇಕು’ ಎಂದು ಹಾಲುಮತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರುದ್ರಣ್ಣ ಗುಳಗುಳಿ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಹೆಸರು ಶಿಫಾರಸು ಮಾಡಬೇಕು: ಕನಮಡಿ

‘ರೈಲ್ವೆ ನಿಲ್ದಾಣಕ್ಕೆ ಜಾಗ ಕೊಟ್ಟಿರುವುದು ರಾಜ್ಯ ಸರ್ಕಾರ. ರೈಲ್ವೆ ನಿಲ್ದಾಣಕ್ಕೆ ಯಾರದ್ದೇ ಹೆಸರು ಇಡಬೇಕಾದರೂ ಅದಕ್ಕೆ ಕೆಲವೊಂದಿಷ್ಟು ಕಾನೂನು ಮತ್ತು ನಿಯಮಗಳು ಇವೆ. ಅದರ ಅನುಸಾರವಾಗಿಯೇ ಆ ಪ್ರಕ್ರಿಯೆ ನಡೆಯುತ್ತದೆ’ ಎನ್ನುತ್ತಾರೆ ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್‌ ಕನಮಡಿ.

‘ಸ್ಥಳೀಯ ಜನರ ಬೇಡಿಕೆ ಒತ್ತಾಸೆಯಂತೆ ರಾಜ್ಯ ಸರ್ಕಾರದಿಂದ ಒಂದು ಹೆಸರು ಶಿಫಾರಸು ಆಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಹೋಗುತ್ತದೆ. ರಾಜ್ಯ ಸರ್ಕಾರದ ಶಿಫಾರಸಿಗೆ ಗೃಹ ಸಚಿವಾಲಯ ಅನುಮೋದನೆ ಕೊಟ್ಟ ನಂತರ ಗೆಜೆಟ್‌ ಅಧಿಸೂಚನೆ ಹೊರಡಿಸಲಾಗುತ್ತದೆ. ನೋಟಿಫಿಕೇಷನ್‌ ಆದ ನಂತರ ಅವರು ಸೂಚಿಸಿದ ಹೆಸರನ್ನು ನಿಲ್ದಾಣಕ್ಕೆ ನಾಮಕರಣ ಮಾಡಲಾಗುತ್ತದೆ. ಇದರಲ್ಲಿ ರೈಲ್ವೆ ಇಲಾಖೆಯದ್ದು ಯಾವುದೇ ಹಸ್ತಕ್ಷೇಪ ಇರುವುದಿಲ್ಲ. ಯಾವುದೇ ನಿಲ್ದಾಣಕ್ಕೆ ಹೆಸರು ನಾಮಕರಣ ಮಾಡಬೇಕಾದರೂ ಅದು ಆಯಾ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿರುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.