ADVERTISEMENT

ಖಿನ್ನತೆ | ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ಅಗತ್ಯ: ಡಾ.ನಾ.ಸೋಮೇಶ್ವರ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 5:15 IST
Last Updated 16 ಅಕ್ಟೋಬರ್ 2025, 5:15 IST
ಗದಗ ಐಎಂಎ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಸಾಹಿತಿ, ನಿರೂಪಕ ಡಾ. ನಾ.ಸೋಮೇಶ್ವರ ಉದ್ಘಾಟಿಸಿದರು
ಗದಗ ಐಎಂಎ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಸಾಹಿತಿ, ನಿರೂಪಕ ಡಾ. ನಾ.ಸೋಮೇಶ್ವರ ಉದ್ಘಾಟಿಸಿದರು   

ಗದಗ: ‘ವಿದ್ಯಾರ್ಥಿಗಳು ಅದರಲ್ಲೂ ವಿಶೇಷವಾಗಿ ವೈದ್ಯಕೀಯ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇಂತಹ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ನಡೆಸಿ, ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಆಗಬೇಕಿದೆ’ ಎಂದು ಸಾಹಿತಿ, ನಿರೂಪಕ ಡಾ. ನಾ.ಸೋಮೇಶ್ವರ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಐಎಂಎ ಗದಗ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

‘ಕೆಲವೊಮ್ಮೆ ಪಾಲಕ ಪೋಷಕರ ಒತ್ತಾಸೆಯ ಮೇರೆಗೆ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಆರ್ಥಿಕ, ಕೌಟುಂಬಿಕ, ಒತ್ತಡ ಹಾಗೂ ಇನ್ನಿತರ ಕಾರಣಗಳಿಂದಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವರು. ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ಖಿನ್ನತೆಗೆ ಒಳಗಾದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ತಜ್ಞ ವೈದ್ಯರಿಂದ ಆಪ್ತಸಮಾಲೋಚನೆ, ಐಎಂಎದಿಂದ ಆತ್ಮಸ್ಥೈರ್ಯ ತುಂಬಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ಕಾರ್ಯ ಆಗಬೇಕಿದೆ. ಈ ಕಾರ್ಯ ಗದುಗಿನಿಂದಲೇ ಆರಂಭಗೊಂಡು ರಾಜ್ಯದಲ್ಲಿ ಆಂದೋಲನ ರೀತಿಯಲ್ಲಿ ನಡೆಯಲಿ’ ಎಂದರು.

ADVERTISEMENT

ಐಎಂಎ ರಾಜ್ಯ ಘಟಕದ ನಿಕಟಪೂರ್ವ ಅಧ್ಯಕ್ಷ ಡಾ.ಮಧುಸೂಧನ್ ಕಾರಿಗನೂರ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿ, ‘ರಾಜ್ಯ ಐಎಂಎಗೆ ಗದಗ ಐಎಂಎ ಬಹು ದೊಡ್ಡ ಕೊಡುಗೆ ನೀಡಿದೆ. ಜತೆಗೆ ರಾಜ್ಯ ಐಎಂಎ ಅಧ್ಯಕ್ಷ ಸ್ಥಾನಕ್ಕೆ ಗದುಗಿನದ್ದೇ ಸಿಂಹಪಾಲ ಇದೆ’ ಎಂದರು.

ಗದಗ ಐಎಂಎ ನೂತನ ಅಧ್ಯಕ್ಷ ಡಾ. ಶ್ರೀಧರ ವಿ. ಕುರಡಗಿ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಡಾ. ಸುನೀತಾ ಎಸ್. ಕುರಡಗಿ ಮಾತನಾಡಿ, ಐಎಂಎ ಗದಗ ಶಾಖೆಯ ಶತಮಾನೋತ್ಸವ ವರ್ಷಾಚರಣೆಯನ್ನು ಸರ್ವರ ಸಹಕಾರದೊಂದಿಗೆ ಆಚರಿಸಲು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ವೇದಿಕೆಯ ಮೇಲೆ ಐಎಂಎ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಜಿ.ಬಿ.ಬಿಡಿನಹಾಳ, ಗದಗ ಐಎಂಎ ಅಧ್ಯಕ್ಷ ಅಧ್ಯಕ್ಷ ಡಾ.ಶ್ರೀಧರ ಕುರಡಗಿ, ಕಾರ್ಯದರ್ಶಿ ಡಾ.ರಾಹುಲ್ ಶಿರೋಳ, ಖಜಾಂಚಿ ಡಾ.ಜಯರಾಜ ಪಾಟೀಲ, ಮಹಿಳಾ ಘಟಕದ ಅಧ್ಯಕ್ಷೆ ಡಾ.ಸುನೀತಾ ಕುರಡಗಿ, ಕಾರ್ಯದರ್ಶಿ ಡಾ.ಸಪ್ನಾ ಜೋಷಿ, ಖಜಾಂಚಿ ಡಾ.ಜ್ಯೋತಿ ಪಾಟೀಲ ಉಪಸ್ಥಿತರಿದ್ದರು.

ಡಾ.ಪವನ ಪಾಟೀಲ ಸ್ವಾಗತಿಸಿದರು. ಡಾ.ತುಕಾರಾಮ ಸೋರಿ ವರದಿ ವಾಚಿಸಿದರು. ಡಾ.ಶ್ರುತಿ ಪಾಟೀಲ ಹಾಗೂ ಡಾ.ಅರವಿಂದ ಕರಿನಾಗಣ್ಣವರ ನಿರೂಪಿಸಿದರು. ಕಾರ್ಯದರ್ಶಿ ಡಾ.ರಾಹುಲ್ ಶಿರೋಳ ವಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.