ADVERTISEMENT

ಗದಗ: ದೀಪಾವಳಿಗೆ ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತು, ಹಣತೆ ಖರೀದಿಗೆ ಮುಗಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 2:44 IST
Last Updated 20 ಅಕ್ಟೋಬರ್ 2025, 2:44 IST
ಗದಗಿನ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾದ ಸಾರ್ವಜನಿಕರು
ಗದಗಿನ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾದ ಸಾರ್ವಜನಿಕರು   

ಗದಗ: ಅಜ್ಞಾನದಿಂದ ಜ್ಞಾನದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಬೆಳಕಿನ ಹಬ್ಬದ ಸಡಗರ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮನೆಮಾಡಿದೆ. ಎಲ್ಲೆಡೆ ದೀಪಾವಳಿ ಆಚರಣೆಗೆ ಸಿದ್ಧತೆ ನಡೆದಿದ್ದು, ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತುಗಳು, ರಂಗೋಲಿ, ಹಣತೆ ಖರೀದಿಗೆ ಸಾರ್ವಜನಿಕರು ಮುಗಿ ಬಿದ್ದಿರುವುದು ಭಾನುವಾರ ಕಂಡುಬಂದಿತು.

ಸ್ಥಳೀಯ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳು ಬಂದಿದ್ದು, ಮಾರುಕಟ್ಟೆ ಜನಜಂಗುಳಿಯಿಂದ ಕೂಡಿತ್ತು. ಮಹೇಂದ್ರಕರ್ ವೃತ್ತ, ಟಾಂಗಾಕೂಟ, ಜನತಾ ಬಜಾರ್, ಮಾಬೂಸುಬಾನಿ ಕಟ್ಟಿ, ಕೆಸಿ ರಾಣಿ ರಸ್ತೆ, ಹಾಗೂ ಬೆಟಗೇರಿ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು.

ನಗರದ ಗ್ರೇನ್ ಮಾರುಕಟ್ಟೆ, ಕೆ.ಎಚ್. ಪಾಟೀಲ ಮೂರ್ತಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದು, ಹಬ್ಬದ ಸಾಮಗ್ರಿಗಳನ್ನು ಖರೀದಿಸಲು ಮುಗಿಬಿದ್ದಿದ್ದರು. ದೀಪಾವಳಿ ಹಿನ್ನೆಲೆಯಲ್ಲಿ ಸಿದ್ಧ ಉಡುಪುಗಳ ಮಳಿಗೆ ಹಾಗೂ ಬಟ್ಟೆ ಅಂಗಡಿಗಳು ರಿಯಾಯಿತಿ ಘೋಷಿಸಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ. ಅಲ್ಲದೆ, ಗೃಹೋಪಯೋಗಿ ಅಂಗಡಿ, ಎಲೆಕ್ಟ್ರಾನಿಕ್ಸ್ ಮಳಿಗೆ, ದಿನಸಿ ಅಂಗಡಿಗಳಲ್ಲಿ ಜನದಟ್ಟಣೆ ಜಾಸ್ತಿ ಕಂಡುಬಂದಿತು.

ADVERTISEMENT

ಅಂಗಡಿ, ಮನೆಗಳನ್ನು ಸ್ವಚ್ಛಗೊಳಿಸಿ ಸುಣ್ಣ-ಬಣ್ಣ ಬಳಿದು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಿ, ಧನಲಕ್ಮಿ ಪೂಜೆಗೆ ಸಿದ್ಧಗೊಳಿಸಿದ್ದಾರೆ. ಮಕ್ಕಳು ಹೊಸ ಬಟ್ಟೆ ಹಾಕಿಕೊಂಡು ಚಕ್ಕುಲಿ, ಕೊಡುಬಳೆ, ಕರ್ಚಿಕಾಯಿ ಮುಂತಾದ ಪದಾರ್ಥಗಳನ್ನು ಸವಿಯಲು ಕಾತುರದಿಂದ ಕಾಯುತ್ತಿದ್ದಾರೆ. 

ನಗರದ ಮಾರುಕಟ್ಟೆಯಲ್ಲಿ ದೀಪವಾಳಿ ಹಬ್ಬದ ಅಂಗವಾಗಿ ವಿವಿಧ ವಸ್ತುಗಳನ್ನು ಖರೀದಿ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಮಾರುಕಟ್ಟೆಯಲ್ಲಿ ಜನದಟ್ಟಣೆಯಿಂದ ಕೂಡಿತ್ತು. ಪೊಲೀಸ್‌ರು ಗ್ರಾಹಕರನ್ನು ನಿಯಂತ್ರಣ ಮಾಡಲು ಹರಸಾಹಸ ಪಟ್ಟರು.

ಹೂವು ಖರೀದಿ ಜೋರು: ದೀಪಾವಳಿ ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ಚೆಂಡು ಹೂವು, ಸೇವಂತಿಗೆ ಹೂವಿನ ಮಾರಾಟ ಜೋರಾಗಿದೆ. ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಹೂವಿನ ಬೆಳೆ ನಾಶವಾಗಿದ್ದು, ಹೀಗಾಗಿ ಹೂವಿನ ಬೆಲೆ ಅಧಿಕವಾಗಿದೆ. ಚೆಂಡು ಹೂವು ಕೆಜಿಗೆ ‌₹100, ಬಿಳಿ ಸೇವಂತಿಗೆ ಕೆಜಿಗೆ ‌₹150-‌₹200 ಮಾರಾಟವಾಗುತ್ತಿದೆ.  ಜೋಡಿ ಬಾಳೆ ಕಂದು ₹50 ಹಾಗೂ ಕಬ್ಬು ಜೋಡಿಗೆ ‌₹20 ರಿಂದ ‌₹40 ಮಾರಾಟವಾಗುತ್ತಿವೆ. ಒಂದು ಕೆಜಿ ಸೇಬು ‌₹100, ಬಾಳೆಹಣ್ಣು ‌₹40 ರಿಂದ ‌₹50, ಮೋಸಂಬಿ ‌₹50 ರಿಂದ ‌₹70, ದಾಳಿಂಬೆ ಒಂದು ಕೆಜಿಗೆ ‌₹80 ಬೆಲೆಯಿದ್ದು, ಗ್ರಾಹಕರು ಬೆಲೆ ಏರಿಕೆ ಕಂಡು ಬಂದರು ಖರೀದಿಗೆ ಮುಂದಾಗಿದ್ದಾರೆ.

ದೀಪಾವಳಿ ಅಂಗವಾಗಿ ಮಹಿಳೆಯರು ಬಾಲೆ ಕಂದು ಖರೀದಿಸಿದರು
ಒಂದು ವಾರದಿಂದ ದೀಪವಾಳಿ ಹಬ್ಬದ ಅಂಗವಾಗಿ ಜನರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ. ಕಳೆದ ಎರಡೂ ವರ್ಷ ಹೊಲಿಸಿದರೆ ಪ್ರಸಕ್ತ ವರ್ಷ ವ್ಯಾಪಾರ ಜೋರಾಗಿದೆ. ಬೆಲೆ ಏರಿಕೆಯಾದರೂ ಸಹ ಗ್ರಾಹಕರು ಖರೀದಿ ಮಾಡುತ್ತಿದ್ದಾರೆ
ರಾಕೇಶ್ ಹೂವಿನ ವ್ಯಾಪಾರಿ
ದೀಪವಾಳಿ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ ಮಾಡಲಾಗಿದೆ. ಈ ವರ್ಷ ದೀಪಾವಳಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಸ್ವಲ್ಪ ಬೆಲೆ ಏರಿಕೆ ಇದೆ ಆದರೂ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿ ಮಾಡಲೇಬೇಕು
ಸುರೇಶ ಬಾಳಿಕಾಯಿ ಸ್ಥಳಿಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.