ADVERTISEMENT

ಚರಂಡಿ, ರಸ್ತೆ ಕಾಮಗಾರಿ ನೆನೆಗುದಿಗೆ

ಚಿಂಚಲಿ ಗ್ರಾಮಸ್ಥರಿಗೆ ತಪ್ಪದ ಪರದಾಟ: ಅಧಿಕಾರಿಗಳ ನಿರ್ಲಕ್ಷ್ಯ–ಗ್ರಾಮಸ್ಥರ ಕಿಡಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 6:11 IST
Last Updated 4 ಮಾರ್ಚ್ 2026, 6:11 IST
ಮುಳಗುಂದ ಸಮೀಪದ ಚಿಂಚಲಿ ಗ್ರಾಮದ ತೇರಿನ ಗಡ್ಡಿ ಹತ್ತಿರ ಚರಂಡಿ ನಿರ್ಮಾಣಕ್ಕೆ ಅಗೆದ ಗುಂಡಿಯಲ್ಲಿ ಟೇಲರ್‌ ಜಾರಿ ಬಿದ್ದಿರುವುದು
ಮುಳಗುಂದ ಸಮೀಪದ ಚಿಂಚಲಿ ಗ್ರಾಮದ ತೇರಿನ ಗಡ್ಡಿ ಹತ್ತಿರ ಚರಂಡಿ ನಿರ್ಮಾಣಕ್ಕೆ ಅಗೆದ ಗುಂಡಿಯಲ್ಲಿ ಟೇಲರ್‌ ಜಾರಿ ಬಿದ್ದಿರುವುದು   

ಮುಳಗುಂದ: ಸಮೀಪದ ಚಿಂಚಲಿ ಗ್ರಾಮದಲ್ಲಿ ಸಿ.ಸಿ ರಸ್ತೆ ಕಾಮಗಾರಿ ನನೆಗುದಿಗೆ ಬಿದಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಗ್ರಾಮದ ತೇರಿನಗಡ್ಡಿ ಮನೆ ಸಮೀಪ ಕೊಳಚೆ ಹಾಗೂ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಈ ಸ್ಥಳದಲ್ಲೇ ವಾರದ ಸಂತೆ ನಡೆಯುತ್ತಿದ್ದು, ಸಂತೆ ತ್ಯಾಜ್ಯ, ಮಳೆ ನೀರು ತಗ್ಗು ಪ್ರದೇಶದಲ್ಲಿ ನಿಂತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಲೋಕೋಪಯೋಗಿ ಇಲಾಖೆ ವತಿಯಿಂದ ಅಂದಾಜು ₹1 ಕೋಟಿ ಅನುದಾನದಲ್ಲಿ ಸಿ.ಸಿ ರಸ್ತೆ, ಚರಂಡಿ ಕಾಮಗಾರಿಗೆ ಸಚಿವ ಎಚ್.ಕೆ. ಪಾಟೀಲ ಅವರು ಈಚೆಗೆ ಭೂಮಿಪೂಜೆ ನೆರವೇರಿಸಿದ್ದರು. ಇದಾದ ಕೆಲವು ದಿನಗಳ ನಂತರ ಕೆಲಸ ಪ್ರಾರಂಭಿಸಿದ ಗುತ್ತಿಗೆದಾರರು ಚರಂಡಿ ನಿರ್ಮಾಣಕ್ಕೆ ರಸ್ತೆಯ ಎರಡು ಬದಿ ಅಗೆದು ಎರಡು ತಿಂಗಳಿಂದ ಹಾಗೆ ಬಿಟ್ಟಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ADVERTISEMENT

ರಸ್ತೆಯಿಂದ ಬರುವ ದೂಳಿನಿಂದ ಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ರಸ್ತೆ ಅಗೆದು ಎರಡು ತಿಂಗಳು ಕಳೆದರೂ ಕಾಮಗಾರಿ ಆರಂಭಿಸಿಲ್ಲ. ಇದರಿಂದ ಗುಂಡಿಯಲ್ಲಿ ಮಳೆ ಹಾಗೂ ತ್ಯಾಜ್ಯ ನೀರು ಸಂಗ್ರಹವಾಗಿ ಜನರಲ್ಲಿ ರೋಗ ಹರಡುವ ಭೀತಿ ಉಂಟಾಗಿದೆ. ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಗ್ರಾಮದ ಯಲ್ಲಪ್ಪ ಆರೋಪಿಸಿದರು.

ಅಣ್ಣಿಗೇರಿ, ಹುಬ್ಬಳ್ಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ನಿತ್ಯ ವಾಹನ ದಟ್ಟನೆ ಅಧಿಕವಾಗಿರುತ್ತದೆ. ಕಾಮಗಾರಿ ಪೂರ್ಣಗೊಳ್ಳದ ಕಾರಣ ವಾಹನ ಸಂಚಾರಕ್ಕೂ ತೊಂದರೆ ಆಗುತ್ತಿದೆ. ಈಚೆಗೆ ಕಲ್ಲು ತುಂಬಿದ್ದ ಟ್ರ್ಯಾಕ್ಟರ್‌ವೊಂದು ರಸ್ತೆ ಪಕ್ಕದ ಗುಂಡಿಗೆ ಜಾರಿದ ಘಟನೆ ಸಂಭವಿಸಿದೆ. ನಿತ್ಯ ಬೈಕ್ ಸವಾರರು ಕೈಯಲ್ಲಿ ಜೀವ ಹಿಡಿದು ಸಂಚರಿಸುವ ಪರಿಸ್ಥಿತಿ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಗುಂಡಿಯಲ್ಲಿ ನಿಂತು ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಈ ಸ್ಥಳದಲ್ಲೇ ವಾರದ ಸಂತೆ ನಡೆಯುತ್ತಿದ್ದು, ಗುಂಡಿಯು ತ್ಯಾಜ್ಯದಿಂದ ತುಂಬಿಕೊಂಡಿದೆ. ಸ್ವಚ್ಛತೆ ಕುರಿತು ಕ್ರಮ ವಹಿಸಬೇಕಾದ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಚಿಂಚಲಿ ಮುಖ್ಯ ರಸ್ತೆ ಬದಿ ಚರಂಡಿ ನಿರ್ಮಾಣ ಅಗೆದ ಗುಂಡಿಯಲ್ಲಿ ಕೊಳಚೆ ನೀರು ತುಂಬಿರುವುದು 
ರಸ್ತೆ ಕಾಮಗಾರಿ ಕೊಡಲೇ ಆರಂಭಿಸುವಂತೆ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿದೆ. ರಸ್ತೆ ವಿಸ್ತರಿಸುವ ಸಲುವಾಗಿ ಸ್ಥಳೀಯರು ಸಹಕಾರ ನೀಡದ ಕಾರಣ ಕಾಮಗಾರಿ ಸ್ಥಗಿತಗೊಂಡಿತ್ತು. ಮುಂದೆ ತೊಂದರೆ ಆಗದಂತೆ ಕ್ರಮವಹಿಸಲಾಗುವುದು.
ಕಿರಣ ಕೆ. , ಲೋಕೋಪಯೋಗಿ ಇಲಾಖೆ, ಕಿರಿಯ ಎಂಜಿನಿಯರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.