
ಗದಗ: ಅವಳಿ ನಗರದಲ್ಲಿ ನಾಲ್ಕು ದಶಕಗಳಿಂದ ಜೀವಂತವಾಗಿರುವ ಕುಡಿಯುವ ನೀರಿನ ಸಮಸ್ಯೆ ಮನುಷ್ಯ ಪಿತೂರಿ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಅವರ ಸ್ವಾರ್ಥಕ್ಕಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆಯಾಗಿ ಎರಡೂವರೆ ದಶಕಗಳು ಕಳೆದರೂ ಗದಗ ನಗರಕ್ಕೆ ಸಮರ್ಪಕವಾಗಿ ನೀರು ಕೊಡಲು ಸಾಧ್ಯವಾಗದಿದ್ದರೆ ನಾಚಿಕೆ ಆಗಬೇಕು...
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗಬೇಕಿರುವ ಮನೆಗಳ ನಿರ್ಮಾಣ ಕಾರ್ಯ 10 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಪ್ರತಿ ಸಲ ಬಂದಾಗಲೂ ಅಧಿಕಾರಿಗಳು ಹಳೆಯ ಮಾಹಿತಿಯನ್ನೇ ಕೊಡುತ್ತಿದ್ದಾರೆ. ಕೆಲಸ ಮಾತ್ರ ಮುಂದುವರಿದಿಲ್ಲ. ತಕ್ಷಣವೇ ಹಣ ಬಿಡುಗಡೆಯಾದರೆ ಕೆಲಸ ಆರಂಭಿಸಿ, ಇಲ್ಲವಾದರೆ ಯೋಜನೆಯನ್ನೇ ಬಂದ್ ಮಾಡಲು ಹೇಳಿಬಿಡಿ...
ಬಡವರಿಗೆ ನೀಡುವ ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಸಾಗಣೆ ನಡೆಯುತ್ತಿದೆ. ಗಂಗಾವತಿ ಅಕ್ಕಿ ದಂಧೆಯ ಪ್ರಮುಖ ಕೇಂದ್ರವಾಗಿದೆ. ಅಕ್ಕಿ ಕಳ್ಳರು ಪಡಿತರ ಅಕ್ಕಿಯನ್ನು ಗದಗ ಜಿಲ್ಲೆಯಿಂದ ಗಂಗಾವತಿ ಮೂಲಕ ಆಂಧ್ರ ಪ್ರದೇಶಕ್ಕೆ ಸಾಗಣೆ ಮಾಡುತ್ತಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು, ಪೊಲೀಸರು ಅಕ್ಕಿ ಕಳ್ಳರನ್ನು ಮಟ್ಟ ಹಾಕದಿದ್ದರೆ ಅವರೇ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಭಾವನೆ ಮೂಡುತ್ತದೆ...
ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಸಂಸದ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಚಾಟಿ ಬೀಸಿದ್ದು ಹೀಗೆ.
‘ಅವಳಿ ನಗರದ ನೀರು ಪೂರೈಕೆ ಸಂಬಂಧ ವ್ಯವಸ್ಥಿತವಾಗಿ ಯೋಜನೆ ಕೊಲ್ಲುವ ಪಿತೂರಿ ನಡೆಯುತ್ತಿದೆ. ಅಮೃತ ಯೋಜನೆಯ ಅನುದಾನ ಕೇಂದ್ರ ಸರ್ಕಾರದ್ದು; ಅದನ್ನು ಸದ್ಬಳಕೆ ಮಾಡಬೇಕು’ ಎಂದು ಬೊಮ್ಮಾಯಿ ಸೂಚಿಸಿದರು.
ಬಡವರು ಮತ್ತು ಅರ್ಹರಿಗೆ ಮನೆ ಮಂಜೂರು ಮಾಡುವ ಮನಸ್ಸು ಅಧಿಕಾರಿಗಳಲ್ಲಿ ಇರಬೇಕು. ಮನೆ ಮಂಜೂರು ಮಾಡದಿರುವುದಕ್ಕೆ ನಿಮ್ಮಲ್ಲಿ 101 ಕಾರಣಗಳಿರುತ್ತವೆ. ಆದರೆ, ಬಡವರಿಗಾಗಿ ಕೆಲಸ ಮಾಡಬೇಕು ಎಂಬ ಮನೋಭಾವ ಇದ್ದರೆ ಒಂದೇ ಬಾರಿಗೆ ಕೆಲಸ ಆಗುತ್ತದೆ. ಅಧಿಕಾರಿಗಳು ಈ ಭಾವನೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಪಿಎಂ ಕುಸುಮ್–ಬಿ ಯೋಜನೆ ಕುರಿತು ಇಂಧನ ಇಲಾಖೆಯೊಂದಿಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಒಟ್ಟಾಗಿ ರೈತರಿಗೆ ಸಮಗ್ರ ಅರಿವು ಮೂಡಿಸಬೇಕು. ಜಲ ಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ನೀರು ತಲುಪುವಂತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಶಾಲೆ ಪವಿತ್ರ ಸ್ಥಳ. ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಿ ಅಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಬೇಕು. ಈ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ನೆರವು ಪಡೆಯಬೇಕು. ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿ, ಕಾಮಗಾರಿ ಕೈಗೊಳ್ಳಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ನೇರವಾಗಿ ಜನಸಾಮಾನ್ಯರಿಗೆ ತಲುಪುವಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಕೇಂದ್ರ ಸರ್ಕಾರವು ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ರಸ್ತೆ, ವಸತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜನಹಿತದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಪ್ರಯೋಜನ ಅರ್ಹ ಫಲಾನುಭವಿಗಳಿಗೆ ತಲುಪುವಲ್ಲಿ ಯಾವುದೇ ವಿಳಂಬ, ನಿರ್ಲಕ್ಷ್ಯ ಅಥವಾ ಅಸಡ್ಡೆಗೆ ಅವಕಾಶ ನೀಡಬಾರದು ಎಂದು ತಿಳಿಸಿದರು.
ಶಾಸಕ ಸಿಸಿ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಕಳ್ಳಸಂತೆಯಲ್ಲಿ ಅನ್ನಭಾಗ್ಯದ ಅಕ್ಕಿ ಮಾರಾಟವಾಗದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಭದ್ರತಾ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಪಟ್ಟಿ ಒದಗಿಸಬೇಕು. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಕುರಿತು ವ್ಯಾಪಕ ಪ್ರಚಾರ ಕೈಕೊಳ್ಳಬೇಕು’ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಜಿಲ್ಲೆಯ ಕೆಲವೊಂದು ಶಾಲಾ ಆವರಣಗಳಲ್ಲಿ ಮದ್ಯದ ಬಾಟಲಿಗಳು ಬಿದ್ದಿರುವುದು ಕಂಡುಬರುತ್ತಿವೆ. ಎಲ್ಲ ಶಾಲೆಗಳಲ್ಲಿ ಸಿಸಿಟಿವಿ ಅಳವಡಿಸಲು ಕ್ರಮ ವಹಿಸಬೇಕು.ಎಸ್.ವಿ.ಸಂಕನೂರ ವಿಧಾನ ಪರಿಷತ್ ಸದಸ್ಯ
ಜೆಜೆಎಂ ಅಡಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಳ್ಳಬೇಕಾದರೆ ಪ್ರತಿ ಮನೆಗೂ ನೀರು ತಲುಪಬೇಕು. ಆದರೆ ಪೈಪ್‌ಲೈನ್ ಅಳವಡಿಕೆ ಸೇರಿದಂತೆ ಇತರೆ ಕಾರ್ಯಗಳನ್ನಷ್ಟೇ ಮಾಡಿರುವುದರಿಂದ ಜೆಜೆಜೆಂ ಯೋಜನೆ ಸಂಪೂರ್ಣ ಯಶಸ್ವಿಯಾಗಿಲ್ಲ.ಡಾ. ಚಂದ್ರು ಲಮಾಣಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.