ನರೇಗಲ್: ಐದು ದಿನಗಳಿಗೊಮ್ಮೆ ಪಟ್ಟಣದ ಜನತೆಗೆ ಕುಡಿಯುವ ನೀರನ್ನು ಪಟ್ಟಣ ಪಂಚಾಯಿತಿ ವತಿಯಿಂದ ಪೂರೈಸಲಾಗುತ್ತಿದೆ. ಉಳಿದ ದಿನಗಳಲ್ಲಿ ಮರಳಿ ನೀರು ಬಿಡುವವರೆಗೆ ಕೊಳವೆಬಾವಿಗಳ ಸವುಳ ನೀರು ಗತಿಯಾಗಿದೆ. ದಿನದಿಂದ ದಿನಕ್ಕೆ ಪಟ್ಟಣ ಬೆಳೆಯುತ್ತಿದ್ದು ಅದಕ್ಕೆ ತಕ್ಕಂತೆ ನೀರಿನ ಸಮಸ್ಯೆಯೂ ಇಮ್ಮಡಿಸುತ್ತಿದೆ.
ಅದರಲ್ಲೂ ಪೈಪ್ ಮೂಲಕ ಬಂದ ಹೊಳೆ ನೀರನ್ನು ತುಂಬಿಕೊಳ್ಳಲು ಹೋದರೆ ಅದರಲ್ಲಿ ಹುಳುಗಳು ಕಂಡು ಬರುವುದು ಸಾಮಾನ್ಯವಾಗಿದೆ. ಹುಳು ಇಲ್ಲವಾದರೆ ಗೊಡಗು, ಜೊಂಡು, ಹೊಲಸು ನೀರು ಬರುತ್ತದೆ. ಕೇಳಲು ಹೋದರೆ ಪೈಪ್ ಒಡೆದಿದೆ, ಚರಂಡಿ ಹತ್ತಿರದ ವಾಲ್‌ನಲ್ಲಿ ತೊಂದರೆಯಾಗಿದೆ. ಎರಡು ದಿನಗಳಲ್ಲಿ ಸರಿಪಡಿಸಿ ಕೊಡುತ್ತೇವೆ ಎನ್ನುವ ಸಬೂಬು ನೀಡುತ್ತಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಅಧಿಕಾರಿಗಳು, ನೀರು ಸರಬರಾಜು ಮಾಡುವ ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ವಿವಿಧ ತಾಂತ್ರಿಕ ತೊಂದರೆಗಳಿಂದಾಗಿ ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತೋಟಗಂಟಿ, ಕೋಚಲಾಪುರ, ದ್ಯಾಂಪುರ, ಕೋಡಿಕೊಪ್ಪ ಮಜರೆ ಹಳ್ಳಿಗಳನ್ನು ಒಳಗೊಂಡಿರುವ ನರೇಗಲ್ ಪಟ್ಟಣ ಪಂಚಾಯಿತಿಯು ಒಟ್ಟು 17 ವಾರ್ಡ್‌ಗಳನ್ನು ಹೊಂದಿದೆ. ಅಂದಾಜು 25 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಸದ್ಯ ವಿಂಡ್ ಕಂಪನಿಗಳಲ್ಲಿ ಕೆಲಸ ಮಾಡುವ ಉತ್ತರ ಭಾರತದ ಜನರು ಅಪಾರ ಸಂಖ್ಯೆಯಲ್ಲಿ ಇಲ್ಲಿಯೇ ಠಿಕಾಣಿ ಹೂಡಿರುವ ಕಾರಣ ಯಾವಾಗಲೂ ಜನದಟ್ಟಣೆಯಿಂದ ಕೂಡಿರುತ್ತದೆ. ಆದರೆ, ಮೂಲಭೂತವಾಗಿರುವ ಕುಡಿಯುವ ನೀರಿನ ಸಮಸ್ಯೆ ಈ ಮೊದಲಿಂದಲೂ ಹಾಗೆಯೇ ಉಳಿದುಕೊಂಡಿದೆ.
ನರೇಗಲ್ ಪಟ್ಟಣಕ್ಕೆ ಯಾವುದೇ ರೀತಿಯ ಜಲಮೂಲಗಳ ಆಸರೆ ಇಲ್ಲ. ನದಿ, ಕಾಲುವೆ, ಬೃಹತ್ ಹಳ್ಳಗಳು ಸಮೀಪದಲ್ಲಿ ಎಲ್ಲೂ ಇಲ್ಲವಾಗಿದೆ. ಆದಕಾರಣ ನರೇಗಲ್ ಪಟ್ಟಣ ಪಂಚಾಯಿತಿಯವರು ಬೇಸಿಗೆ ಆರಂಭದ ಮೊದಲು ಕೊಳವೆಬಾವಿಗಳ ದುರಸ್ತಿ, ಕುಡಿಯುವ ನೀರಿನ ಪರಿಕರಗಳ ದುರಸ್ತಿ, ಜಲ ಸಂಗ್ರಹಕಗಳ ದುರಸ್ತಿ ಕಾರ್ಯಗಳನ್ನು ಮಾಡುತ್ತಿದ್ದರು. ಆದರೆ ಈ ಬಾರಿ ಅಂತಹ ಸಿದ್ಧತೆಗಳನ್ನು ಮಾಡಿಕೊಳ್ಳುವಲ್ಲಿ ಪಟ್ಟಣ ಪಂಚಾಯಿತಿಯವರು ಎಡವಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಪಟ್ಟಣ ಪಂಚಾಯಿತಿಯ ಜವಾಬ್ದಾರಿ. ಆದರೆ, ಸಾಕಷ್ಟು ಸಮಸ್ಯೆಗಳು ತಲೆದೋರಿವೆ. ಹಳೇ ಪೈಪ್‍ಗಳು ತುಕ್ಕು ಹಿಡಿದು ಹಾಳಾಗಿವೆ. ಅದರೊಂದಿಗೆ ಚೇಂಬರ್‌ಗಳು ಒಡೆದು ಸಾಕಷ್ಟು ನೀರು ಪೋಲಾಗುತ್ತಿದೆ. ಅಂದರೆ ಮಾರ್ಗ ಮಧ್ಯದಲ್ಲಿಯೇ ಶೇ 35ರಿಂದ 40ರಷ್ಟು ನೀರು ವ್ಯರ್ಥವಾಗುತ್ತಿದೆ. ಇದರಿಂದಾಗಿ ನೀರಿನ ಸಮಸ್ಯೆ ಉಂಟಾಗಿದೆ.
‘ರೋಣ ತಾಲ್ಲೂಕಿನ ಜಿಗಳೂರು ಕೆರೆಯಿಂದ ನದಿ ನೀರನ್ನು ಪಟ್ಟಣಕ್ಕೆ ನೀರಿನ ಪೂರೈಕೆ ಶುರುವಾಗಿದ್ದು ಅಂದಿನಿಂದ ಇಂದಿನವರೆಗೆ ಪಟ್ಟಣದ ಶೇ 70ರಷ್ಟು ಜನರಿಗೆ ನದಿ ನೀರು ಸಿಗುತ್ತಿದೆ. ನವನಗರ ನಿವಾಸಿಗಳಿಗೆ ನೀರುವ ಬಿಡುವಾಗ ಕೆಳಗಡೆ ಭಾಗದ ಓಣಿಗಳಿಗೂ ಒಂದೇ ದಿನ ಪೂರೈಕೆ ಮಾಡುತ್ತಾರೆ. ಆಗ ನಮ್ಮ ನಗರದ ನಳಗಳಿಗೆ ಪೈಪ್ ಹಚ್ಚಿದರು ನೀರು ಬರುವುದಿಲ್ಲ. ಈ ಕುರಿತು ನೀರುವ ಬಿಡುವ ಸಿಬ್ಬಂದಿ ಗಮನಕ್ಕೆ ತಂದಿದ್ದೇವೆ’ ಎನ್ನುತ್ತಾರೆ ನಿವೃತ್ತ ಸೇನಾಧಿಕಾರಿ ರಾಮಣ್ಣ ಸಕ್ರೋಜಿ.
ಆಗಾಗ ಕೈಕೊಡುವ ವಿದ್ಯುತ್ ಮತ್ತು ಮೋಟಾರ್ ಸುಡುವ ಕಾರಣಗಳಿಂದಾಗಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು ಈ ಕುರಿತು ಅಧಿಕಾರಿಗಳು ಸೂಕ್ತ ಗಮನ ಹರಿಸಿಲ್ಲ ಎಂಬ ಆರೋಪಗಳು ಇವೆ.
ಶುದ್ಧ ನೀರಿನ ಘಟಕಗಳ ಮೇಲೆ ಅವಲಂಬನೆ
ನದಿ ನೀರನ್ನು ಶುದ್ಧ ಮಾಡಿ ಪೂರೈಸಬೇಕು. ಆದರೆ ಶುದ್ಧೀಕರಣದ ವ್ಯವಸ್ಥೆಯೇ ಸರಿಯಾಗಿಲ್ಲ. ಹೀಗಾಗಿ ಕೆಲವೊಮ್ಮೆ ಜೊಂಡಿನಿಂದ ಹುಳುಗಳಿಂದ ಕೂಡಿದ ನೀರು ಪೂರೈಕೆ ಆಗುತ್ತಿದೆ. ಹೀಗಾಗಿ ಜನತೆ ಅನಿವಾರ್ಯವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅವಲಂಬಿಸುವಂತಾಗಿದೆ. ಆದರೆ ಶುದ್ದ ನೀರಿನ ಘಟಕಗಳ ಶುದ್ಧೀಕರಣ ವ್ಯವಸ್ಥೆಯನ್ನು(ಕ್ವಾಲಿಟಿ ಟೆಸ್ಟ್) ಪಟ್ಟಣ ಪಂಚಾಯಿತಿಯಿಂದ ಪರೀಕ್ಷಿಸುವ ಕಾರ್ಯವನ್ನು ಒಮ್ಮೆಯೂ ಮಾಡುವುದಿಲ್ಲ. ಇದರಿಂದಾಗಿ ಟೆಂಡರ್ ಪಡೆದ ವ್ಯಕ್ತಿಗಳು ಕೇವಲ ಪೌಡರ್ ಮಿಕ್ಸ್ ಮಾಡಿ ಶುದ್ಧೀಕರಣ ಮಾಡದ ನೀರು ಪೂರೈಸಿ ಜನರ ಜೀವದ ಜೊತೆಗೆ ಆಟವಾಡುತ್ತಿದ್ದಾರೆ ಎಂದು ಜೈ ಭೀಮ್ ಸೇನಾ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಮೈಲಾರಪ್ಪ ವೀ. ಚಳ್ಳಮರದ ಆರೋಪಿಸಿದ್ದಾರೆ.
ಹೊಳೆ ನೀರಿನಲ್ಲಿ ಬರುತ್ತಿರುವ ಗೊಡಗು ಜೊಂಡು ಹುಳಗಳ ಆರೋಪದ ಬಗ್ಗೆ ಪರೀಕ್ಷಿಸಲಾಗುವುದು. ಸದ್ಯ ಮೀಟರ್ ಅವಳವಡಿಸುವ ಕಾರ್ಯ ಎಲ್ಲೆಡೆ ನಡೆದಿದೆ. ಹಾಗಾಗಿ 2-3 ದಿನಕ್ಕೆ ನೀರು ಬಿಡುತ್ತೇವೆ.-–ಮಹೇಶ ಬಿ. ನಿಡಶೇಶಿ, ಮುಖ್ಯಾಧಿಕಾರಿ ನರೇಗಲ್ ಪಟ್ಟಣ ಪಂಚಾಯಿತಿ
ಕ್ಲೋರಿನೇಷನ್ ಹಾಗೂ ಬ್ಲೀಚಿಂಗ್ ಪೌಡರ್ ಹಾಕಿದ್ದೇವೆ. ಕುಡಿಯುವ ಶುದ್ಧ ನೀರನ್ನು 12 ವಾರ್ಡ್‌ಗಳಿಗೆ ನಾಲ್ಕು ದಿನಗಳಿಗೊಮ್ಮೆ ಹಾಗೂ 5 ವಾರ್ಡ್‌ಗಳಿಗೆ (ಮಜರೆ ಹಳ್ಳಿಗಳಿಗೆ) ಎರಡು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿದ್ದೇವೆ-ಶಂಕ್ರಪ್ಪ ದೊಡ್ಡಣ್ಣವರ, ನೀರು ಪೂರೈಕೆ ವಿಭಾಗದ ಸಿಬ್ಬಂದಿ
ಏಳನೇ ವಾರ್ಡ್‌ನ ಭಾಗ್ಯ ನಗರದಲ್ಲಿ ಯಾವಾಗಲೂ ಗೊಡಗು ಹಾಗೂ ಹುಳುಗಳಿಂದ ತುಂಬಿದ ನೀರು ಪೂರೈಕೆಯಾಗುತ್ತದೆ. ಸೋಮವಾರ ಬಂದ ನೀರು ಹೀಗೆ ಇತ್ತು; ಅದನ್ನೇ ಸೋಸಿ ಕುಡಿದಿದ್ದೇವೆ–ಬಸಮ್ಮ ಗೊರೆಬಾಳ ಲಕ್ಷ್ಮೀ ತಳಗೇಡಿ, ಭಾಗ್ಯ ನಗರ ನಿವಾಸಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.