ADVERTISEMENT

ಗದಗ ಜಿಲ್ಲೆಯಲ್ಲಿ ಒಣಗಿದ ಕಡಲೆ ಬೆಳೆ: ರೈತ ಕಂಗಾಲು

ಈ ಬಾರಿ ಎಕರೆಗೆ 5 ಕೆ.ಜಿ. ಫಸಲು ಕೂಡ ಬರದಂತಹ ಪರಿಸ್ಥಿತಿ

ಲಕ್ಷ್ಮಣ ಎಚ್.ದೊಡ್ಡಮನಿ
Published 25 ಜನವರಿ 2019, 10:39 IST
Last Updated 25 ಜನವರಿ 2019, 10:39 IST
ಡಂಬಳ ಹೋಬಳಿಯ ಹಿರೇವಡ್ಡಟ್ಟಿ ಗ್ರಾಮದಲ್ಲಿ ಕಡಲೆ ಬೆಳೆ ತೇವಾಂಶ ಕೊರತೆಯಿಂದಾಗಿ ಒಣಗಿರುವುದು
ಡಂಬಳ ಹೋಬಳಿಯ ಹಿರೇವಡ್ಡಟ್ಟಿ ಗ್ರಾಮದಲ್ಲಿ ಕಡಲೆ ಬೆಳೆ ತೇವಾಂಶ ಕೊರತೆಯಿಂದಾಗಿ ಒಣಗಿರುವುದು   

ಡಂಬಳ: ಹಿಂಗಾರು ಹಂಗಾಮಿನಲ್ಲಿ ಕಡಲೆ ಬಿತ್ತನೆ ಮಾಡಿದ ಹೋಬಳಿ ರೈತರು ಬೆಳೆಹಾನಿಯಿಂದ ಕಂಗಾಲಾಗಿದ್ದಾರೆ. ಮಳೆ ಕೊರತೆಯಿಂದಾಗಿ ಬೆಳೆಗಳು ಸಂಪೂರ್ಣ ಒಣಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

ತಾಲ್ಲೂಕಿನಲ್ಲಿ ಕೆರೆ ಮತ್ತು ಕೊಳವೆ ಬಾವಿಯ ನೀರಿನ ಲಭ್ಯತೆ ಹೊಂದಿರುವ ರೈತರ ಜಮೀನಿನಲ್ಲಿ ಮಾತ್ರ ಕಡಲೆ ಬೆಳೆ ಹಸಿರಿನಿಂದ ಕೂಡಿದೆ. ಉಳಿದಂತೆ ಇನ್ನುಳಿದ ಪ್ರದೇಶದಲ್ಲಿ ಸಂಪೂರ್ಣ ಬೆಳೆ ಒಣಗಿದೆ. ಒಂದು ಎಕೆರೆಗೆಬಿತ್ತನೆಗೆ 5 ಕೆ.ಜಿ. ಕಡಲೆ ಬೀಜ ಬೇಕಾಗುತ್ತದೆ. ಆದರೆ, ಈ ಬಾರಿ ಎಕರೆಗೆ 5 ಕೆ.ಜಿ. ಫಸಲು ಕೂಡ ಬರದಂತಹ ಪರಿಸ್ಥಿತಿ ಇದೆ ಎನ್ನುತ್ತಾರೆ ರೈತರು.

‘ಕೃಷಿ ಇಲಾಖೆ ಪ್ರತಿ ವರ್ಷ ಬೆಳೆ ಹಾನಿ ಸಮೀಕ್ಷೆ ನಡೆಸುತ್ತದೆ. ಆದರೆ, ಪರಿಹಾರ ರೈತರಿಗೆ ಲಭಿಸುತ್ತಿಲ್ಲ. ದುಡಿಯುವ ಕೈಗಳಿಗೆ ಉದ್ಯೋಗವಿಲ್ಲ. ಜಾನುವಾರುಗಳಿಗೆ ನೀರು ಮತ್ತು ಮೇವಿನ ಕೊರತೆ ಎದುರಾಗಿದೆ. ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ₹ 10 ಸಾವಿರ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸುತ್ತಾರೆ ಹಿರೇವಡ್ಡಟ್ಟಿ ಗ್ರಾಮದ ರೈತ ವೀರಣ್ಣ ಕನ್ಯಾಳ ಡಂಬಳದ ರೈತ ಮಂಜುನಾಥ ಸಂಜೀವಣ್ಣನವರ ಮತ್ತು ಡೋಣಿ ಗ್ರಾಮದ ರೈತ ದೇವರಾಜ ಕಟ್ಟಿಮನಿ.

ADVERTISEMENT

‘2018-19ನೇ ಸಾಲಿನ ಹಿಂಗಾರಿ ಹಂಗಾಮಿನಲ್ಲಿ 11,000 ಹೆಕ್ಟೇರ್‌ನಲ್ಲಿ ಕಡಲೆ ಬಿತ್ತನೆ ಗುರಿಹೊಂದಲಾಗಿತ್ತು. ನೀರಾವರಿ ಕ್ಷೇತ್ರದಲ್ಲಿ 102 ಹೆಕ್ಟೇರ್‌ ಬಿತ್ತನೆಯಾಗಿದ್ದರೆ, ಖುಷ್ಕಿ ಜಮೀನಿನಲ್ಲಿ 9,591 ಹೆಕ್ಟೇರ್‌ ಅಂದರೆ ಒಟ್ಟು ಶೇ 88 ರಷ್ಟು ಬಿತ್ತನೆಯಾಗಿದೆ. ಆದರೆ, ಮಳೆ ಕೊರತೆಯಿಂದ ಹಲವೆಡೆ ಬೆಳೆ ಒಣಗಿದೆ. ಬೆಳೆಹಾನಿ ಪರಿಹಾರಕ್ಕೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು’ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ನೆಗಳೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.