ADVERTISEMENT

ಲಕ್ಷ್ಮೇಶ್ವರ | ಹೆಚ್ಚಿದ ಚಳಿ: ಶೀತ, ಜ್ವರ ಬಾಧೆ; ತುಂಬಿದ ಆಸ್ಪತ್ರೆ ಆವರಣ

ನಾಗರಾಜ ಎಸ್‌.ಹಣಗಿ
Published 21 ಡಿಸೆಂಬರ್ 2023, 7:18 IST
Last Updated 21 ಡಿಸೆಂಬರ್ 2023, 7:18 IST
ಲಕ್ಷ್ಮೇಶ್ವರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿ
ಲಕ್ಷ್ಮೇಶ್ವರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿ   

ಲಕ್ಷ್ಮೇಶ್ವರ: ಕಳೆದ ಮೂರ್ನಾಲ್ಕು ದಿನಗಳಿಂದ ತಾಲ್ಲೂಕಿನಾದ್ಯಂತ ಚಳಿಯ ಪ್ರಭಾವ ಹೆಚ್ಚಾಗಿದ್ದು, ವೃದ್ಧರು ಸೇರಿ ಮಕ್ಕಳು ನೆಗಡಿ, ಕೆಮ್ಮು, ಜ್ವರ ಬಾಧೆಗೆ ಒಳಗಾಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ಎಲ್ಲಿ ನೋಡಿದರಲ್ಲಿ ಮಕ್ಕಳು, ವೃದ್ಧರು ಕಾಣುತ್ತಿದ್ದಾರೆ.

ಹೆಚ್ಚುತ್ತಿರುವ ರೋಗಿಗಳ ಸಂಖ್ಯೆ: ತಂಪು ವಾತಾವರಣದ ಹಿನ್ನೆಲೆಯಲ್ಲಿ ಪ್ರತಿದಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಇಮ್ಮಡಿಸಿದೆ. ಸಾಮಾನ್ಯ ದಿನಗಳಲ್ಲಿ ದಿನಕ್ಕೆ 250-300 ಜನ ಆಸ್ಪತ್ರೆಗೆ ಬರುತ್ತಿದ್ದರು. ಆದರೆ ಇದೀಗ ಆ ಸಂಖ್ಯೆ 350-400ನ್ನು ದಾಟಿದ್ದು ಆಸ್ಪತ್ರೆ ಆವರಣ ರೋಗಿಗಳಿಂದ ತುಂಬಿರುತ್ತದೆ.

ವೈದ್ಯರ ಅವಶ್ಯಕತೆ: ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ ಇಬ್ಬರು ವೈದ್ಯರು ಮಾತ್ರ ಕಾಯಂ ಇದ್ದು, ಉಳಿದ ನಾಲ್ಕು ಜನ ವೈದ್ಯರು ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ADVERTISEMENT

ಸದ್ಯ ಒಬ್ಬ ಸರ್ಜನ್, ಚಿಕ್ಕ ಮಕ್ಕಳು ಮತ್ತು ಅರವಳಿಕೆ ತಜ್ಞರು ಬಂದಿರುವುದು ರೋಗಿಗಳಿಗೆ ಹೆಚ್ಚಿನ ಅನುಕೂಲ ಆಗಿದೆ. ಆದರೆ ಇವರು ಗುತ್ತಿಗೆ ಆಧಾರದ ಮೇಲೆ ಬಂದ ವೈದ್ಯರಾಗಿದ್ದಾರೆ. ಇನ್ನು ಪ್ರತಿ ತಿಂಗಳು ಈ ಆಸ್ಪತ್ರೆಯಲ್ಲಿ 70-80 ಹೆರಿಗೆ ಆಗುತ್ತಿದ್ದು, ಹೆರಿಗೆ ತಜ್ಞರ ಅಗತ್ಯವೂ ಇದೆ. ಅರವಳಿಕೆ ತಜ್ಞರು ಇರುವುದರಿಂದ ಹರ್ನಿಯಾ, ಗರ್ಭಚೀಲ, ಮೂಲವ್ಯಾಧಿ, ಅಪೆಂಡಿಕ್ಸ್‌ಗೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆಗಳನ್ನು ಇಲ್ಲಿಯೇ ನಡೆಸಲು ಅನುಕೂಲವಾಗಿದೆ’ ಎಂದು ವೈದ್ಯಾಧಿಕಾರಿ ಡಾ.ಶ್ರೀಕಾಂತ ಕಾಟೆವಾಲೆ ತಿಳಿಸಿದ್ದಾರೆ.

‘ಆಸ್ಪತ್ರೆಯಲ್ಲಿ ಔಷಧಗಳ ಕೊರತೆ ಇಲ್ಲ. ಕೊರೊನಾ ಮುಂಜಾಗ್ರತಾ ಕ್ರಮವಾಗಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

ನಮ್ಮೂರಿನ ಆಸ್ಪತ್ರೆಗೆ ಪ್ರತಿದಿನ 400ಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ. ಹೀಗಾಗಿ ಇದನ್ನು ತಾಲ್ಲೂಕು ಆಸ್ಪತ್ರೆಯನ್ನಾಗಿ ಮಾಡಬೇಕು. ಅಂದರೆ ಬಡ ರೋಗಿಗಳಿಗೆ ಅನುಕೂಲ ಆಗುತ್ತದೆ
ಪೂರ್ಣಾಜಿ ಖರಾಟೆ ನಿವೃತ್ತ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.