ADVERTISEMENT

ಗದಗ: ಮೊಟ್ಟೆ ದರ ಹೆಚ್ಚಳ; ಒತ್ತಡದಲ್ಲಿ ಶಿಕ್ಷಕರು

ಗದಗ ಜಿಲ್ಲೆಯಲ್ಲಿ ಪ್ರತಿನಿತ್ಯ ಸರಾಸರಿ 95,203 ವಿದ್ಯಾರ್ಥಿಗಳಿಂದ ಮೊಟ್ಟೆ ಸ್ವೀಕಾರ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 3 ಡಿಸೆಂಬರ್ 2024, 4:22 IST
Last Updated 3 ಡಿಸೆಂಬರ್ 2024, 4:22 IST
ಮೊಟ್ಟೆ ಪ್ರದರ್ಶಿಸುತ್ತಿರುವ ಮಕ್ಕಳು
ಮೊಟ್ಟೆ ಪ್ರದರ್ಶಿಸುತ್ತಿರುವ ಮಕ್ಕಳು   

ಗದಗ: ಮೊಟ್ಟೆ ದರ ಏರಿಕೆ ಆಗಿರುವುದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ನಿತ್ಯ ಮೊಟ್ಟೆ ವಿತರಣೆ ಕಷ್ಟವಾಗುತ್ತಿದೆ. ಸರ್ಕಾರ ಮೊಟ್ಟೆಗೆ ನೀಡುತ್ತಿರುವ ಹಣ ಸಾಕಾಗುತ್ತಿಲ್ಲ, ದರ ಹೆಚ್ಚಿಸಲು ಮನವಿ ಸಲ್ಲಿಸಬೇಕು ಎಂದು ಶಾಲಾ ಶಿಕ್ಷಕರು ಅಕ್ಷರ ದಾಸೋಹ ಅಧಿಕಾರಿಗಳ ಮುಂದೆ ಅಲವತ್ತುಕೊಂಡಿದ್ದಾರೆ.

ಗದಗ ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1,27,619 ಮಂದಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಅದರಲ್ಲಿ ಪ್ರತಿನಿತ್ಯ ಶೇ 95ರಷ್ಟು ಹಾಜರಾತಿ ಇರುತ್ತದೆ. ಈ ಪೈಕಿ ಶೇ 85ರಷ್ಟು ವಿದ್ಯಾರ್ಥಿಗಳು ಮೊಟ್ಟೆ ಆಯ್ಕೆ ಮಾಡಿಕೊಂಡಿದ್ದಾರೆ. ಉಳಿದ ಮಕ್ಕಳು ಬಾಳೆಹಣ್ಣು ಮತ್ತು ಶೇಂಗಾ ಚಿಕ್ಕಿ ತಿನ್ನುತ್ತಾರೆ ಎಂದು ಜಿಲ್ಲಾ ಅಕ್ಷರ ದಾಸೋಹ ಇಲಾಖೆ ಜಿಲ್ಲಾ ಅಧಿಕಾರಿ ಸರಸ್ವತಿ ಕನವಳ್ಳಿ ತಿಳಿಸಿದ್ದಾರೆ.

‘ಸರ್ಕಾರ ಒಂದು ಮೊಟ್ಟೆಗೆ ₹6 ಅನುದಾನ ಕೊಡುತ್ತದೆ. ಇದರಲ್ಲಿ ವಿಂಗಡಣೆ ಇದ್ದು, ಮೊಟ್ಟೆ ಖರೀದಿಗೆ ₹5, ಮೊಟ್ಟೆ ಬೇಯಿಸಲು 50 ಪೈಸೆ, ಮೊಟ್ಟೆ ಬಿಡಿಸಲು 30 ಪೈಸೆ ಹಾಗೂ ಸಾಗಣೆ ವೆಚ್ಚ 20 ಪೈಸೆ ಇರುತ್ತದೆ. ಪ್ರಸ್ತುತ ಮೊಟ್ಟೆ ದರ ಹೆಚ್ಚಾಗಿರುವುದರಿಂದ ದರ ಹೆಚ್ಚಿಸುವಂತೆ ಶಿಕ್ಷಕರು ಕೋರಿದ್ದಾರೆ. ಶಿಕ್ಷಕರ ಬೇಡಿಕೆ ಮತ್ತು ಸಮಸ್ಯೆಗಳನ್ನು ಇಲಾಖೆಯ ಉನ್ನತ ಅಧಿಕಾರಿಗಳ ಗನಮಕ್ಕೆ ತರಲಾಗಿದೆ. ದರ ಹೆಚ್ಚಾದರೂ ಮೊಟ್ಟೆ ವಿತರಣೆ ಮಾಡುವುದು ನಿಂತಿಲ್ಲ. ಸದ್ಯದವರೆಗೆ ಶಿಕ್ಷಕರೇ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಈ ಹಿಂದೆ ಸರ್ಕಾರ ವಾರಕ್ಕೆ ಎರಡು ದಿನ ಮಕ್ಕಳಿಗೆ ಮೊಟ್ಟೆ ವಿತರಿಸುತ್ತಿತ್ತು. ಅಜೀಂ ಪ್ರೇಮ್‌ಜೀ ಪ್ರತಿಷ್ಠಾನದವರು ಕೈಜೋಡಿಸಿದ ನಂತರ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ವಾರಕ್ಕೆ ಆರು ದಿನ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಖರೀದಿ ಸಮಿತಿಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು, ಪೋಷಕರು ಇರುತ್ತಾರೆ. ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಯೋಜನೆ ಅನುಷ್ಟಾನಗೊಳಿಸುತ್ತಿರುವುದಾಗಿ ಶಿಕ್ಷಕರು ತಿಳಿಸಿದ್ದಾರೆ.

‘ಮೊಟ್ಟೆ ದರ ₹6ರಿಂದ ₹7 ಇರುವಾಗ ಬಡ ಹಾಗೂ ಮಧ್ಯಮವರ್ಗದ ಕುಟುಂಬದ ಪೋಷಕರು ತಮ್ಮ ಮಕ್ಕಳಿಗೆ ವಾರದಲ್ಲಿ ಆರು ದಿನ ಮಕ್ಕಳಿಗೆ ಮೊಟ್ಟೆ ಒದಗಿಸಲು ಸಾಧ್ಯವೇ ಇಲ್ಲ. ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಮಕ್ಕಳ ಪೌಷ್ಟಿಕತೆ ದೃಷ್ಟಿಯಿಂದಲೂ ಉತ್ತಮವಾಗಿದೆ. ಆದರೆ, ಈಗ ಬೆಲೆ ಏರಿಕೆ ಆಗಿರುವುದರಿಂದ ಸಮಸ್ಯೆ ಆಗುತ್ತಿದೆ. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕು’ ಎಂದು ಖರೀದಿ ಸಮಿತಿಯಲ್ಲಿರುವ ಪೋಷಕರು ಆಗ್ರಹಿಸಿದ್ದಾರೆ.

ಮೊಟ್ಟೆ ದರ ಏರಿಕೆಯಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ದರ ಹೆಚ್ಚಾಗಿದ್ದರೂ ಆರು ದಿನ ಮೊಟ್ಟೆ ವಿತರಣೆಗೆ ಕ್ರಮವಹಿಸಲಾಗಿದೆ
ಸರಸ್ವತಿ ಕನವಳ್ಳಿ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.