
ಎಳ್ಳು ಅಮವಾಸ್ಯೆಗೆ ಚರಗ ಚೆಲ್ಲಲು ಎತ್ತಿನ ಬಂಡಿಯಲ್ಲಿ ಹೊಲಗಳಿಗೆ ತೆರಳುತ್ತಿರುವ ರೈತರು
(ಸಂಗ್ರಹ ಚಿತ್ರ)
ಗಜೇಂದ್ರಗಡ: ಅನ್ನ ನೀಡುವ ಭೂತಾಯಿ ಹಾಗೂ ಹೊಲದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಬೆಳೆಗೆ ಸಂಭ್ರಮದಿಂದ ಪೂಜೆ ಸಲ್ಲಿಸುವ ಹಬ್ಬ ಎಳ್ಳು ಅಮವಾಸ್ಯೆಗೆ ತಾಲ್ಲೂಕಿನ ರೈತರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ಎಳ್ಳು ಅಮವಾಸ್ಯೆಗೆ ನಾಡಿನ ರೈತ ಕುಟುಂಬಗಳಲ್ಲಿ ವಾರಗಟ್ಟಲೆ ಮೊದಲು ಎಳ್ಳು ಹೋಳಿಗೆ, ಎಣ್ಣಿ ಹೋಳಿಗೆ, ಶೇಂಗಾ ಹೋಳಿಗೆ, ಸಜ್ಜಿ ರೊಟ್ಟಿ, ಜೋಳದ ಖಡಕ್ ರೊಟ್ಟಿ, ಕರ್ಚಿಕಾಯಿ, ಕಾಳು ಪಲ್ಯೆ, ವಿವಿಧ ಬಗೆಯ ಚಟ್ನಿ, ಮೊಸರು ಹೀಗೆ ಬಗೆ ಬಗೆಯ ಭಕ್ಷಗಳನ್ನು ತಯಾರಿಸಿ ಅಮವಾಸ್ಯೆ ದಿನ ಎತ್ತಿನ ಬಂಡಿ, ಟಂಟಂ, ಟ್ರ್ಯಾಕ್ಟರ್‌ಗಳಲ್ಲಿ ಮನೆಯ ಸದಸ್ಯರ ಜೊತೆಗೆ ಸ್ನೇಹಿತರು, ಬಂಧುಗಳನ್ನು ಕರೆದುಕೊಂಡು ಎರಿ (ಕಪ್ಪು ಭೂಮಿ) ಹೊಲಕ್ಕೆ ಹೋಗಿ, ಹೊಲದಲ್ಲಿ ಸಮೃದ್ದವಾಗಿ ಬೆಳೆದ ಬಿಳಿಜೋಳ, ಕಡಲೆ, ಕುಸುಬಿ, ಗೋಧಿ ಫೈರಿನ ಮಧ್ಯದಲ್ಲಿ ಬನ್ನಿ ಗಿಡದ ಹತ್ತಿರ ಐದು ಕಲ್ಲುಗಳಿಗೆ ಸುಣ್ಣ ಹಚ್ಚಿ ಪಂಚ ಪಾಂಡವರನ್ನು ಮಾಡಿ ಪೂಜೆ ಸಲ್ಲಿಸುತ್ತಾರೆ.
ಎಲ್ಲ ಬಗೆಯ ತಿನಿಸುಗಳ ತುಣುಕನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಮುಂದೆ ಒಬ್ಬರು ತಿನಿಸುಗಳ ತುಣುಕನ್ನು ಹುಲ್ಲುಲ್ಗೊ ಎಂದು ಹೊಲದಲ್ಲಿ ಸಮೃದ್ದವಾಗಿ ಬೆಳೆದಿರುವ ಪೈರಿನ ಮಧ್ಯದಲ್ಲಿ ಎರಚಿದರೆ ಹಿಂದೆ ಒಬ್ಬರು ಚಲಂಬ್ರಿಗೊ ಎಂದು ನೀರನ್ನು ಎರಚುತ್ತ ಭೂತಾಯಿಗೆ ಪೂಜೆ ಸಲ್ಲಿಸುತ್ತಾರೆ. ಈ ರೀತಿಯಾಗಿ ಎರಚುವ ತಿನಿಸುಗಳನ್ನು ತಿನ್ನಲು ಬರುವ ಪಕ್ಷಿಗಳು ತಿನಿಸುಗಳ ಜೊತೆಗೆ ಪೈರಿನಲ್ಲಿರುವ ಕೀಟಗಳನ್ನು ತಿನ್ನುತ್ತವೆ.
ಈ ಬಾರಿ ಮಳೆ ಬಿಡುವು ನೀಡದ ಹಿನ್ನಲೆಯಲ್ಲಿ ತಾಲ್ಲೂಕಿನಲ್ಲಿ ತಡವಾಗಿ ಬಿತ್ತನೆಯಾಗಿದ್ದು, ಕಾಳು ಕಟ್ಟಬೇಕಿದ್ದ ಕಡಲೆ ಹೂ, ಚಟ್ಟಿ ಇದೆ. ತೆನೆ ಹಾಕಬೇಕಿದ್ದ ಬಿಳಿಜೋಳ ಇನ್ನೂ ಬೆಳೆಯುತ್ತಿದೆ. ಈಗಾಗಲೇ ರೈತರು ಕೀಟಗಳ ನಿರ್ವಹಣೆಗೆ ಎರಡ್ಮೂರು ಬಾರಿ ಕೀಟನಾಶಕ ಸಿಂಪಡಿಸಿದ್ದು, ಬೆಳೆ ಸಮೃದ್ಧವಾಗಿದೆ. ರೈತರು ಉತ್ತಮ ಫಸಲು ಬರುತ್ತದೆಂಬ ಆಶಯದಲ್ಲಿದ್ದಾರೆ. ಹೀಗಾಗಿ ಎಳ್ಳ ಅಮವಾಸ್ಯೆಗೆ ಸಕಲ ಸಿದ್ದತೆ ನಡೆಸುತ್ತಿದ್ದಾರೆ. ಎಳ್ಳು ಅಮಾವಾಸ್ಯೆ ಆಚರಣೆ ರೈತರ ಜೀವನದ ಸಂಭ್ರಮ ಮತ್ತು ಕೃಷಿಯ ಸಂಸ್ಕೃತಿಯ ಪ್ರತೀಕವಾಗಿದೆ.
ಎಳ್ಳು ವಾತದೋಷ ನಿವಾರಕ: ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುವ ಸಮಯದಲ್ಲಿ ಚಳಿಗೆ ವಾತ ಪ್ರಕೊಪ ಜಾಸ್ತಿಯಾಗಿ ನರಗಳಿಗೆ ಸಂಬಂಧಿಸಿದ ಕಾಯಿಲೆಗಳು ಜಾಸ್ತಿಯಾಗುತ್ತವೆ. ಇದನ್ನೆಲ್ಲ ಅರಿತಿದ್ದ ನಮ್ಮ ಹಿರಿಯರು ಈ ಸಮಯದಲ್ಲಿ ಬರುವ ಎಳ್ಳ ಅಮವಾಸ್ಯೆಗೆ ವಾತದೋಷ ನಿವಾರಕ ಗುಣ ಹೊಂದಿರುವ ಎಳ್ಳು ಮತ್ತು ಎಣ್ಣೆ ಗುಣ ಹೊಂದಿರುವ ವಿವಿಧ ಪದಾರ್ಥಗಳನ್ನು ತಯಾರಿಸಿ ಸವಿಯುವುದು ಆಚರಣೆಯಲ್ಲಿದೆ.
ಕೃತಜ್ಞತೆ ಸಲ್ಲಿಸಲು ಸಿದ್ಧತೆ
‘ಈ ಬಾರಿ ಮುಂಗಾರಿ ಬೆಳೆಗಳು ಅತಿವೃಷ್ಟಿಯಿಂದ ಹಾಳಾಗಿವೆ. ಸದ್ಯ ಹಿಂಗಾರಿ ಬೆಳೆಗಳು ಸಮೃದ್ಧವಾಗಿದ್ದು ಉತ್ತಮ ಚಳಿ ಬೀಳುತ್ತಿದೆ. ಹಿಂಗಾರಿ ಫಸಲಾದ್ರೂ ಉತ್ತಮವಾಗಿ ಬರಲೆಂಬ ಆಶಯದೊಂದಿಗೆ ಹಾಗೂ ಅನ್ನ ನೀಡುವ ಭೂತಾಯಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಎಳ್ಳ ಅಮವಾಸ್ಯೆ ಆಚರಣೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಕೊಡಗಾನೂರ ಗ್ರಾಮದ ರೇಣುಕಯ್ಯ ಅಂಗಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.