ADVERTISEMENT

ಮುಂಡರಗಿ| ರೈತರ ಹಿತ ಕಾಪಾಡುವಲ್ಲಿ ಸರ್ಕಾರಗಳು ವಿಫಲ: ಉದ್ಯಮಿ ವಿಜಯ ಸಂಕೇಶ್ವರ

‘ಬದುಕಿನ ಪಯಣ’ ಕೃತಿ ಬಿಡುಗಡೆ ಸಮಾರಂಭ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 7:50 IST
Last Updated 4 ಜನವರಿ 2026, 7:50 IST
ಮುಂಡರಗಿಯ ವಿವೇಕಾನಂದ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈಶ್ವರಪ್ಪ ಹಂಚಿನಾಳ ಅವರ ಕುರಿತ ‘ಬದುಕಿನ ಪಯಣ’ ಚಿತ್ರಸಂಪುಟ ಕೃತಿಯನ್ನು  ಗಣ್ಯರು ಬಿಡುಗಡೆಗೊಳಿಸಿದರು
ಮುಂಡರಗಿಯ ವಿವೇಕಾನಂದ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈಶ್ವರಪ್ಪ ಹಂಚಿನಾಳ ಅವರ ಕುರಿತ ‘ಬದುಕಿನ ಪಯಣ’ ಚಿತ್ರಸಂಪುಟ ಕೃತಿಯನ್ನು  ಗಣ್ಯರು ಬಿಡುಗಡೆಗೊಳಿಸಿದರು   

ಮುಂಡರಗಿ: ‘ರೈತರ ಹಿತ ಕಾಪಾಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ರೈತರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿವೆ. ಕಬ್ಬು ಸೇರಿದಂತೆ ಬಹುತೇಕ ಬೆಳೆಗಳ ಲಾಭ ರೈತರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಈ ಕುರಿತು ರೈತರು ಜಾಗೃತರಾಗಬೇಕು’ ಎಂದು ಉದ್ಯಮಿ ವಿಜಯ ಸಂಕೇಶ್ವರ ಹೇಳಿದರು.

ಪಟ್ಟಣದ ಶ್ರೀಸ್ವಾಮಿ ವಿವೇಕಾನಂದ ಶಾಲಾ ಆವರಣದಲ್ಲಿ ಈಶ್ವರಪ್ಪ ಹಂಚಿನಾಳ ಅವರ ಅಭಿಮಾನಿ ಬಳಗದಿಂದ ಶನಿವಾರ ಹಮ್ಮಿಕೊಂಡಿದ್ದ ಈಶ್ವರಪ್ಪ ಹಂಚಿನಾಳ ಅವರ ಕುರಿತಾದ ‘ಬದುಕಿನ ಪಯಣ’ ಚಿತ್ರ ಸಂಪುಟ ಕೃತಿ ಲೋಕಾರ್ಪಣೆ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನೀರು, ಫಲವತ್ತಾದ ಮಣ್ಣು ಮೊದಲಾದವುಗಳಿಲ್ಲದ ಇಸ್ರೇಲ್ ಹಾಗೂ ಮತ್ತಿತರ ರಾಷ್ಟ್ರಗಳು ಕೃಷಿ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುತ್ತಿವೆ. ನಮ್ಮ ದೇಶದಲ್ಲಿ ಉತ್ತಮ ನೈಸರ್ಗಿಕ ಸಂಪನ್ಮೂಲ ಹಾಗೂ ಸವಲತ್ತುಗಳು ಇದ್ದರೂ ಯುವಕರು ಕೃಷಿಯಿಂದ ವಿಮುಖರಾಗುತ್ತಿರುವುದು ದುರ್ದೈವದ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ‘ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ದುಡಿದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದು ಈಶ್ವರಪ್ಪ ಹಂಚಿನಾಳ ಹಾಗೂ ವಿಜಯ ಸಂಕೇಶ್ವರ ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ’ ಎಂದರು.

ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ, ‘ಕೃಷಿಯಲ್ಲಿ ಅಧಿಕ ಲಾಭ ಪಡೆಯಲು ರೈತರು ಬೆಳೆಗಳಿಗೆ ಯಥೇಚ್ಛವಾಗಿ ರಾಸಾಯನಿಕ ಗೊಬ್ಬರ ಬಳಸುತ್ತಿದ್ದು, ಇದರಿಂದ ಭೂಮಿ ಬರಡಾಗುತ್ತಿದೆ. ರೈತರು ರಾಸಾಯನಿಕದ ಬದಲಾಗಿ ಸಾವಯವ ಗೊಬ್ಬರ ಬಳಸಬೇಕು’ ಎಂದು ಸಲಹೆ ನೀಡಿದರು.

ಬಿ.ವಿ.ಶಿರೂರ ಅಧ್ಯಕ್ಷತೆ ವಹಿಸಿದ್ದರು. ರಾಮನಗರದ ಪರಮಾನಂದ ಸ್ವಾಮೀಜಿ, ಕೃಷಿ ಪಂಡಿತ ಈಶ್ವರಪ್ಪ ಹಂಚಿನಾಳ, ಎಸ್.ಎಸ್.ಬೀಳಗೀಫೀರ, ನಿಂಗು ಸೊಲಗಿ ಮಾತನಾಡಿದರು. 

ಮಾಜಿ ಶಾಸಕ ರಾಮಣ್ಣ ಲಮಾಣಿ ಇದ್ದರು. ವೀರೇಶ ಹಂಚಿನಾಳ ಸ್ವಾಗತಿಸಿದರು, ಸಿ.ಎಸ್.ಅರಸನಾಳ, ಜಿ.ಎಂ.ಲಿಂಗಶೆಟ್ಟರ ನಿರೂಪಿಸಿದರು, ಎಸ್.ವಿ.ಪಾಟೀಲ ವಂದಿಸಿದರು.

‘ಶಿಕ್ಷಣ ಪದ್ಧತಿ ಬದಲಾಗಲಿ’

‘ಇಂದಿನ ದಿನಗಳಲ್ಲಿ ಜನರು ಮಕ್ಕಳಿಗೆ ಮೆಕಾಲೆ ಸೂಚಿಸಿರುವ ನಿರರ್ಥಕ ಶಿಕ್ಷಣ ನೀಡುತ್ತಿದ್ದು ಅದರಿಂದ ಮಕ್ಕಳು ಯಾವ ಕೌಶಲವನ್ನೂ ಕಲಿಯುತ್ತಿಲ್ಲ. ಅಂಕಗಳಿಗಿಂತ ಮಕ್ಕಳಿಗೆ ಸ್ಫೂರ್ತಿ ತುಂಬುವ ಹಾಗೂ ಬದುಕು ಕಟ್ಟಿಕೊಳ್ಳುವ ಶಿಕ್ಷಣದ ಅಗತ್ಯವಿದೆ. ಏನನ್ನಾದರೂ ಸಾಧಿಸುವ ಛಲ ತುಂಬಿಸುವ ಶಿಕ್ಷಣವನ್ನು ನಾವು ಮಕ್ಕಳಿಗೆ ನೀಡಬೇಕು. ಅಂತಹ ಶಿಕ್ಷಣ ದೊರೆತಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ’ ಎಂದು ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕೃತಿ ಪರಿಚಯ

ಕೃತಿ: ಬದುಕಿನ ‍ಪಯಣ

ಲೇಖಕ: ನಿಂಗು ಸೊಲಗಿ

ಪ್ರಕಾಶನ: ಪುಣ್ಯಕೋಟಿ ವೃಕ್ಷಧಾಮ ನಾಗರಳ್ಳಿ

ಬೆಲೆ: ಗೌರವ ಪ್ರತಿ (ಉಚಿತ)

ಪುಟ: 110