ನರಗುಂದ: ರೈತರ ಬೇಡಿಕೆಗಳು ಹಲವು ವರ್ಷಗಳಿಂದ ಈಡೇರದ ಮಧ್ಯೆಯೂ ಈ ವರ್ಷದ ಹುತಾತ್ಮ ರೈತ ದಿನಾಚರಣೆಯನ್ನು ಜುಲೈ 21ರಂದು ಆಚರಿಸಲು ರೈತ ಸಂಘಟನೆಗಳು ಮುಂದಾಗಿದ್ದು, ಸಂಘಟನೆಗಳಲ್ಲಿನ ಒಡಕು ನಿಜವಾದ ರೈತರಿಗೆ ಬೇಸರ ತರಿಸಿದೆ.
ರೈತ ಬಂಡಾಯ ಹಿನ್ನೆಲೆ: ಬಂಡಾಯ ಶಬ್ದ ಕೇಳಿದಾಗೆಲ್ಲಾ ನರಗುಂದ ಹೆಸರು ಥಟ್ ಅಂತ ಮನಸ್ಸಿಗೆ ಬರುತ್ತದೆ. ಇದಕ್ಕೆ ಕಾರಣ 1858ರಲ್ಲಿ ನಡೆದ ಭಾಸ್ಕರರಾವ್ ಭಾವೆಯವರ(ಬಾಬಾಸಾಹೇಬ)
ಬ್ರಿಟಿಷರ ವಿರುದ್ಧದ ಬಂಡಾಯ ಹಾಗೂ 1980ರಲ್ಲಿ ನಡೆದ ರೈತ ಬಂಡಾಯ. ಅದರಲ್ಲೂ 1980 ಜುಲೈ 21ರಂದು ನಡೆದ ರೈತ ಬಂಡಾಯ ದೇಶವೇ ನರಗುಂದದತ್ತ ನೋಡುವಂತಾಯಿತು. ಕರ್ನಾಟಕದಾದ್ಯಂತ ರೈತ ಚಳವಳಿಗಳಿಗೆ ನಾಂದಿ ಹಾಡಿತು.
ರೈತ ಬಂಡಾಯಕ್ಕೆ 45 ವರ್ಷ: ಅವಿಭಜಿತ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳ ಮಲಪ್ರಭೆ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ಮಲಪ್ರಭಾ ನದಿಗೆ ಸವದತ್ತಿ ಬಳಿಯ ನವಿಲುತೀರ್ಥದಲ್ಲಿ ಆಣೆಕಟ್ಟು ನಿರ್ಮಾಣವಾಯಿತು. ಆದರೆ, ಪ್ರತಿಯಾಗಿ ರೈತರ ಮೇಲೆ ಸರ್ಕಾರ ಅಭಿವೃದ್ಧಿ ಕರ ವಿಧಿಸಿದ್ದು, ಕಾಲುವೆಗಳಿಗೆ ನೀರು ಹರಿಯದಿದ್ದರೂ ಕರ ತುಂಬಬೇಕಿತ್ತು. ಭರಿಸದಿದ್ದಾಗ ರೈತರ ಪಹಣಿ ಪತ್ರಿಕೆ ಮೇಲೆ ಸರ್ಕಾರಿ ಎಂದು ನಮೂದಿಸಿತು.
ರೈತ ಸಂಘಟನೆ ಕಿಚ್ಚು: ರೈತ ಬಂಡಾಯದ ಪರಿಣಾಮ ಕರ್ನಾಟಕದಲ್ಲಿ ರೈತ ಹೋರಾಟ ಹಾಗೂ ರೈತ ಸಂಘ ಉಗಮವಾಗಲು ಕಾರಣವಾಯಿತು. ರೈತ ಬಂಡಾಯ ಅನೇಕ ದಾಖಲೆಗಳಿಗೆ ಸಾಕ್ಷಿಯಾಯಿತು. ಅನೇಕ ರೈತ ಸಂಘಗಳು, ಸಮಿತಿಗಳು ಹುಟ್ಟಿಕೊಂಡು ಹೋರಾಟ ನಡೆಸುತ್ತಲಿವೆ. ಆದರೆ, ಈ ಭಾಗದ ರೈತರ ಕನಸು ನನಸಾಗುತ್ತಿಲ್ಲ. ಕಳಸಾ ಬಂಡೂರಿ, ಮಹದಾಯಿ ಹೋರಾಟ ನಡೆಯುತ್ತಲೇ ಇದೆ. ಸಮಸ್ಯೆ ಬಗೆಹರಿಯದ ಕಾರಣ ಮತ್ತೊಮ್ಮೆ ಬಂಡಾಯ ನಡೆಯಬೇಕೆಂಬ ಧ್ವನಿ ಮೂಡುತ್ತಿದ್ದು, ಇದುವರೆಗೂ ಮಹದಾಯಿ ಅನುಷ್ಠಾನ ಗೊಳ್ಳುತ್ತಿಲ್ಲ.
45ವರ್ಷವಾದರೂ ದಿ.ವೀರಪ್ಪ ಕಡ್ಲಿಕೊಪ್ಪರ ವೀರಗಲ್ಲು ಖಾಸಗಿಯವರ ಜಾಗೆಯಲ್ಲಿಯೇ ಇದೆ. ಅವರ ಹೆಸರಲ್ಲಿ ಇಲ್ಲಿಯವರೆಗೂ ಒಂದು ಸ್ಮಾರಕವಿಲ್ಲ. ಆದರೆ, ಕರ್ನಾಟಕ ರೈತ ಸೇನೆ, ರೈತ ಸಂಘ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಒತ್ತಡ ತಂದಿದ್ದು ಜು 21ರಂದು ಬೆಳಿಗ್ಗೆ 9ಕ್ಕೆ ಸಚಿವ ಎಚ್.ಕೆ.ಪಾಟೀಲ ಭೂಮಿಪೂಜೆ ನೆರವೇರಿಸಲಿದ್ದಾರೆ. ಆದರೆ ಈ ಜಾಗೆ ಖಾಸಗಿಯದಾಗಿದ್ದು, ಅವರು ದಾನ ನೀಡಲು ಒಪ್ಪಿಗೆ ನೀಡಿದ್ದಾರೆ. ಕೊನೆಗೂ ರೈತ ಸ್ಮಾರಕ ನಿರ್ಮಾಣದ ಕಾರ್ಯ ಆರಂಭಗೊಳ್ಳಲಿದೆ ಎಂಬ ಖುಷಿ ರೈತರಿಗೆ ಬಂದಿದೆ.
ರೈತ ಬಂಡಾಯ ನಡೆದು 45 ವರ್ಷವಾಯಿತು. ರೈತ ವೀರಗಲ್ಲು ಇನ್ನೂ ಖಾಸಗಿ ಶಜಾಗೆಯಲ್ಲಿದ್ದು ಸ್ಮಾರಕ ನಿರ್ಮಾಣವಂತು ಕನಸಾಗಿ ಉಳಿದಿದೆ. ರೈತರ ಪ್ರಮುಖ ಬೇಡಿಕೆ ಕಳಸಾಬಂಡೂರಿ ಮಹದಾಯಿ ಯೋಜನೆ ಅನುಷ್ಠಾನ ಗೊಳ್ಳದಿರುವುದು ಬೇಸರ ತರಿಸಿದೆವಿಜಯ ಕುಲಕರ್ಣಿ ಸಂಸ್ದಾಪಕ ಅಧ್ಯಕ್ಷ ಕಳಸಾಬಂಡೂರಿ ಹೋರಾಟ ಸಮಿತಿ ನರಗುಂದ
ರೈತ ಸ್ಮಾರಕ ನಿರ್ಮಾಣ ಬಹುದಿನದ ಕನಸು ನನಸಾಗುತ್ತಿದ್ದು ನಿರ್ಮಾಣಕ್ಕೆ ಸಚಿವ ಎಚ್. ಕೆ.ಪಾಟೀಲ ಭೂಮಿಪೂಜೆ ನೆರವೇರಿಸುವರು. ಹಾಲಿ ಹಾಗೂ ಮಾಜಿ ಶಾಸಕರು ರೈತ ಸಂಘಟನೆ ಸದಸ್ಯರು ಭಾಗವಹಿಸುವರುಶಂಕರ ಅಂಬಲಿ ಅಧ್ಯಕ್ಷರು ಕರ್ನಾಟಕ ರೈತ ಸೇನೆ ನರಗುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.