
ಪ್ರಜಾವಾಣಿ ವಾರ್ತೆ
ಮುಂಡರಗಿ: ಎಳ್ಳ ಅಮವಾಸ್ಯೆ ಅಂಗವಾಗಿ ಪಟ್ಟಣವು ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರ ರೈತರು ತಮ್ಮ ಜಮೀನುಗಳಿಗೆ ತೆರಳಿ ಭೂಮಿತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.
ರೈತರು ಮುಂಜಾನೆ ತಮ್ಮ ಆಪ್ತರು, ಬಂಧುಗಳು, ನೆರೆ ಹೊರೆಯವರನ್ನು ಎತ್ತಿನ ಚಕ್ಕಡಿ, ಟಂಟಂ, ಟ್ರ್ಯಾಕ್ಟರ್ ಹಾಗೂ ಮತ್ತಿತರ ವಾಹನಗಳ ಮೂಲಕ ಜಮೀನುಗಳಿಗೆ ಕರೆದೊಯ್ದದರು. ಅಲ್ಲಿ ಶಾಸ್ತ್ರೋಕ್ತವಾಗಿ ಭೂಮಿತಾಯಿಗೆ ಪೂಜೆ ಸಲ್ಲಿಸಿದರು.
ಕೆಲವು ರೈತರು ತಮ್ಮ ಜಮೀನುಗಳಲ್ಲಿದ್ದ ಬನ್ನಿ, ಬೇವು, ಆಲ ಮೊದಲಾದ ಮರಗಳಿಗೆ ಸೀರೆ ಉಡಿಸಿ ವಿಶೇಷ ಪೂಜೆ ಸಲ್ಲಿಸಿದರು. ಜಮೀನಿನಲ್ಲಿ ಪಾಂಡವರನ್ನು ಸ್ಥಾಪಿಸಿ ಅವುಗಳಿಗೆ ಪೂಜೆ ನೆರವೇರಿಸಿದರು.
ಪೂಜೆಯ ನಂತರ ಮಹಿಳೆಯರು ಸಾಮೂಹಿಕವಾಗಿ ಭೂತಾಯಿಗೆ ಚರಗ ಚಲ್ಲಿದರು.
ನಂತರ ಎಲ್ಲರೊಂದಿಗೆ ಜಮೀನಿನಲ್ಲಿ ಕುಳಿತು ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ನವಣಿ ಹೋಳಿಗೆ, ಕರ್ಜಿಕಾಯಿ, ಸುರಂಗದ ಹೋಳಿಗೆ, ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಚಪಾತಿ, ವಿವಿಧ ಬಗೆಯ ಕಾಳು ಹಾಗೂ ತರಕಾರಿ ಪಲ್ಯ, ಬಗೆ ಬಗೆಯ ಚಟ್ನಿ, ಕೆನೆ ಮೊಸರು ಮೊದಲಾದವಗಳನ್ನು ಒಳಗೊಂಡ ಭರ್ಜರಿ ಭೋಜನ ಸವಿದರು.
ಈ ವರ್ಷ ಹಿಂಗಾರಿ ಬಿತ್ತನೆಗೆ ಅನುಕೂಲವಾಗುವಂತೆ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಉತ್ತಮವಾಗಿ ಮಳೆ ಸುರಿದಿದ್ದು ರೈತರ ಹರ್ಷವನ್ನು ಇಮ್ಮಡಿಗೊಳಿಸಿದೆ. ಕಡಲೆ, ಕುಸುಬಿ, ಬಿಳಿಜೋಳ, ಹುಳ್ಳಿ ಮೊದಲಾದವುಗಳು ಉತ್ತಮವಾಗಿ ಬೆಳೆದಿದ್ದು, ರೈತರು ಭಾರಿ ಫಸಲಿನ ನಿರೀಕ್ಷೆಯಲ್ಲಿದ್ದಾರೆ.
ಬಗೆಬಗೆಯ ಉತ್ತರ ಕರ್ನಾಟಕ ತಿನಿಸು
ಲಕ್ಷ್ಮೇಶ್ವರ: ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಆಚರಿಸುವ ಎಳ್ಳು ಅಮಾವಾಸ್ಯೆಯನ್ನು ಶುಕ್ರವಾರ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ರೈತರು ಸಡಗರ ಸಂಭ್ರಮದಿಂದ ಆಚರಿಸಿದರು. ವಿಶೇಷವಾಗಿ ಮುಂಗಾರು ಹಂಗಾಮಿನಲ್ಲಿ ಮಸಾರಿ ಭಾಗದ ರೈತರು ಸೀಗಿ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿದರೆ ಹಿಂಗಾರು ಹಂಗಾಮಿನಲ್ಲಿ ಎರೆ ಸೀಮೆಯ ರೈತರು ಎಳ್ಳು ಅಮಾವಾಸ್ಯೆಯನ್ನು ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಅಮಾವಾಸ್ಯೆಗೆ ವಿಶೇಷ ಸ್ಥಾನ ಇದೆ. ರೈತರು ಬಂಧು ಬಾಂಧವರೊಡನೆ ಚಕ್ಕಡಿ ಟ್ರ್ಯಾಕ್ಟರ್‌ಗಳಲ್ಲಿ ಹೊಲಗಳಿಗೆ ಆಗಮಿಸಿದರು. ಬನ್ನಿಮರಕ್ಕೆ ಪೂಜೆ ಸಲ್ಲಿಸಿ ಭೂ ತಾಯಿಗೆ ಚರಗ ಚೆಲಿದರು. ನಂತರ ಎಲ್ಲರೂ ಸೇರಿ ಎಳ್ಳು ಹಚ್ಚಿದ ಸಜ್ಜೆ ಜೋಳದ ರೊಟ್ಟಿ ವಿವಿಧ ಬಗೆಯ ಚಟ್ನಿ ಕಾಳು ಎಣ್ಣೆಗಾಯಿ ಎಳ್ಳು ಹಾಗೂ ಸೇಂಗಾ ಹೋಳಿಗೆಯ ಊಟ ಸವಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.