ADVERTISEMENT

ರೈತರು ಯಂತ್ರಗಳ ಸದುಪಯೋಗ ಪಡೆದುಕೊಳ್ಳಿ: ಚೇತನಾ ಪಾಟೀಲ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 6:24 IST
Last Updated 26 ಫೆಬ್ರುವರಿ 2026, 6:24 IST
ಮುಂಡರಗಿ ತಾಲ್ಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಬೆಳೆ ಪದ್ದತಿ ಆಧಾರಿತ ತರಬೇತಿ ಹಾಗೂ ಕಡಲೆ ಬೆಳೆಯ ಯಂತ್ರದ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು 
ಮುಂಡರಗಿ ತಾಲ್ಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಬೆಳೆ ಪದ್ದತಿ ಆಧಾರಿತ ತರಬೇತಿ ಹಾಗೂ ಕಡಲೆ ಬೆಳೆಯ ಯಂತ್ರದ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು    

ಮುಂಡರಗಿ: ‘ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಸಮಸ್ಯೆ ವಿಪರೀತವಾಗಿದ್ದು, ರೈತರು ಇದರಿಂದ ಹೈರಾಣಾಗುತ್ತಿದ್ದಾರೆ. ಒಕ್ಕಲು, ಧಾನ್ಯಗಳ ಶುದ್ಧಿಕರಣ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಯಂತ್ರಗಳು ನೆರವಾಗುತ್ತಿದ್ದು, ರೈತರು ಯಂತ್ರಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಸಲಹೆ ನೀಡಿದರು.

ತಾಲ್ಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಮಂಗಳವಾರ ನಡೆದ ಕೃಷಿ ಇಲಾಖೆಯ ಆಹಾರ ಮತ್ತು ಪೌಷ್ಠಿಕ ಭದ್ರತೆ ಯೋಜನೆಯಡಿ ಬೆಳೆ ಪದ್ದತಿ ಆಧಾರಿತ ತರಬೇತಿ ಹಾಗೂ ಕಡಲೆ ಬೆಳೆಯ ಯಂತ್ರದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕೃಷಿ ಯಂತ್ರೋಪಕರಣಗಳು ರೈತರಿಗೆ ಬಹಳ ನೆರವಾಗುತ್ತಿದ್ದು, ಆರ್ಥಿಕವಾಗಿ ಸಬಲರಾಗಿರುವ ರೈತರು ಸ್ವಂತ ಯಂತ್ರಗಳನ್ನು ಖರೀದಿಸುವ ಮೂಲಕ ಕೃಷಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಯಂತ್ರಗಳ ನೆರವಿನಿಂದ ಉತ್ತಮವಾಗಿ ಕಾಳುಗಳನ್ನು ಸುದ್ಧಿಕರಿಸಬಹುದು. ಇದರಿಂದ ರೈತರು ಮಾರುಕಟ್ಟೆಯಲ್ಲಿ ತಮ್ಮ ಬೆಳೆಗಳಿಗೆ ಹೆಚ್ಚಿನ ದರ ಪಡೆಯಬಹುದಾಗಿದೆ’ ಎಂದರು.

ADVERTISEMENT

ಬಸವಾ ಇಂಡಸ್ಟ್ರೀಸ್ ಸಂಸ್ಥೆಯ ನಿರ್ದೇಶಕ ಸಚೀನ ಬಡಿಗೇರ ಮಾತನಾಡಿ, ‘ಯಂತ್ರಗಳು ಕೃಷಿ ಕ್ಷೇತ್ರದ ಉತ್ತಮ ಆವಿಷ್ಕಾರಗಳು. ಹತ್ತು ಜನ ಕೂಲಿ ಕಾರ್ಮಿಕರು ಮಾಡುವ ಕೆಲಸ ಕಾರ್ಯಗಳನ್ನು ಯಂತ್ರಗಳು ಸುಲಭವಾಗಿ ಮಾಡುತ್ತವೆ. ಕೃಷಿ ಕೂಲಿ ಕಾರ್ಮಿಕರು ಯಂತ್ರಗಳನ್ನು ಬಳಸುವಾಗ ಜಾಗೃತರಾಗಿರಬೇಕು’ ಎಂದು ತಿಳಿಸಿದರು.

ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಮಾತನಾಡಿ, ‘ಆರ್ಥಿಕವಾಗಿ ಸಶಕ್ತರಾಗಿರುವ ರೈತರು ಕಡಲೆ ಕಾಳು ಒಕ್ಕಲು ಯಂತ್ರಗಳನ್ನು ಸ್ವಂತ ಖರ್ಚಿನಲ್ಲಿ ಖರೀದಿಸಬಹುದು. ಇನ್ನುಳಿದ ರೈತರಿಗೆ ಕೃಷಿ ಇಲಾಖೆಯು ಯಂತ್ರಗಳ ಖರೀದಿಗೆ ಸಹಾಯ ಧನ ನೀಡುತ್ತಿದ್ದು, ಆಸಕ್ತ ರೈತರು ಅಗತ್ಯ ದಾಖಲೆಗಳೊಂದಿಗೆ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕು’ ಎಂದರು.

ಜಿ.ಎಂ. ಲಿಂಗಶೆಟ್ಟರ ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್., ಮಂಜುನಾಥ ಭರಮಗೌಡರ ನಿಂಗಾರಡ್ಡಿ, ಬಸಪ್ಪ ಮಲ್ಲಕ್ಕಿ, ಬಸಪ್ಪ ಲಕ್ಕುಂಡಿ, ಗವಿಶಿದ್ದಪ್ಪ ಹಿರೇಮಠ, ಬಸಪ್ಪ ಮದ್ಲಾಪೂರ, ಶರಣಪ್ಪ ಗೋಂಡಬಾಳ, ಎಸ್.ಬಿ. ರಾಮೇನಹಳ್ಳಿ, ನಾಗರಾಜ ಬೋವಿ, ಮಾರುತಿ ರಾತೋಡ, ಅಕ್ಕಮಹಾದೇವಿ ಶೆಲವಡಿ, ಗೌರಿಶಂಕರ ಸಜ್ಜನರ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.