ADVERTISEMENT

ಗದಗ | ಅಧ್ಯಾಪಕರು ಓದುವ ಪ್ರವೃತ್ತಿ ಬೆಳೆಸಿಕೊಳ್ಳಲಿ: ಬಿಇಒ

ಮಮತಾ ದೊಡ್ಡಮನಿ ಅವರ ‘ಮಾತಿಗಿಳಿದ ಹಣತೆ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 2:51 IST
Last Updated 22 ಜನವರಿ 2026, 2:51 IST
ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕಿ ಮಮತಾ ಚ. ದೊಡ್ಡಮನಿ ಅವರ ‘ಮಾತಿಗಿಳಿದ ಹಣತೆ’ ಪುಸ್ತಕ ಲೋಕಾರ್ಪಣೆಗೊಂಡಿತು
ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕಿ ಮಮತಾ ಚ. ದೊಡ್ಡಮನಿ ಅವರ ‘ಮಾತಿಗಿಳಿದ ಹಣತೆ’ ಪುಸ್ತಕ ಲೋಕಾರ್ಪಣೆಗೊಂಡಿತು   

ಗದಗ: ‘ಅನುಭವಗಳಿಗೆ ಅಕ್ಷರ ತೊಡಿಸಿ; ಕಾವ್ಯವಾಗಿಸುವ ಮೂಲಕ ಸಹೃದಯರಲ್ಲಿ ವಿಶಿಷ್ಟ ಅನುಭೂತಿ ಉಂಟು ಮಾಡುವ ಕವಿ ಸದಾವಕಾಲ ಸ್ಮರಣೆಯಲ್ಲಿ ಉಳಿಯುತ್ತಾನೆ. ಪ್ರಚಲಿತ ಸಂಕಟಗಳನ್ನು ಕಾವ್ಯ ಒಳಗೊಂಡು ಒಳ ಮತ್ತು ಹೊರ ಬದಲಾವಣೆ ಕಾರಣವಾಗಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಮನಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕಿ ಮಮತಾ ಚ. ದೊಡ್ಡಮನಿ ಅವರ ‘ಮಾತಿಗಿಳಿದ ಹಣತೆ’ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.

ಪ್ರವೃತ್ತಿಗಳು ಉತ್ತಮವಾಗಿದ್ದರೂ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಅಧ್ಯಾಪಕರು ಓದುವ ಪ್ರವೃತ್ತಿಯನ್ನು ಅಧಿಕಗೊಳಿಸಬೇಕು ಎಂದು ತಿಳಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ‘ಇಲ್ಲಿಯ ಕವಿತೆಗಳು ನೆಲಮೂಲ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ನಮ್ಮ ಬೆಳವಣಿಗೆಗೆ ಕಾರಣವಾಗಿರುವ ವ್ಯಕ್ತಿ ಮತ್ತು ವಸ್ತುಗಳ ಕುರಿತು ಕಾವ್ಯ ರಚಿಸಿದ್ದಾರೆ. ಇನ್ನಷ್ಟು ಆಳವಾದ ಅಧ್ಯಯನದ ಮೂಲಕ ಉತ್ತಮ ಕೃತಿಗಳು ರಚನೆಯಾಗಲಿ’ ಎಂಬ ಆಶಯ ವ್ಯಕ್ತಪಡಿಸಿದರು.

ಪುಸ್ತಕ ಪರಿಚಯ ಮಾಡಿದ ಸಾಹಿತಿ ಶಿಲ್ಪಾ ಮ್ಯಾಗೇರಿ, ‘ಹಣತೆ ಹೆಣ್ಣಿನ ಪ್ರತೀಕವಾಗಿ ಈ ಸಂಕಲನದಲ್ಲಿ ಮೂಡಿಬಂದಿದೆ. ನಿತ್ಯ ಜೀವನದ ಅನೇಕ ಸಂಗತಿಗಳು ಇಲ್ಲಿ ಅಕ್ಷರ ತೋರಣ ಕಟ್ಟಿವೆ. ಜೀವಪರ ವಿಚಾರಗಳನ್ನು ಕವಿತೆಗಳ ಮೂಲಕ ಹಂಚುವ ಕಾರ್ಯವನ್ನು ಕವಯತ್ರಿ ಇಲ್ಲಿ ಮಾಡಿದ್ದಾರೆ. ಪುರುಷರಿಗಿಂತ ಮಹಿಳೆಯರ ವಿಚಾರಗಳು, ತಲ್ಲಣಗಳು ಬೇರೆಯಾಗಿರುವುದರಿಂದ ಅವುಗಳನ್ನು ದಾಖಲಿಸುವ ಪ್ರಯತ್ನವನ್ನು ಈ ಸಂಕಲನದಲ್ಲಿ ಮಾಡಿದ್ದಾರೆ’ ಎಂದು ತಿಳಿಸಿದರು.

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಹೂಗಾರ ಮಾತನಾಡಿ, ‘ಶಿಕ್ಷಕರು ಸಾಹಿತ್ಯ, ಸಂಸ್ಕೃತಿಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳಲ್ಲೂ ಆಸಕ್ತಿ ಮೂಡಿಸಿ ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯ ಮಾಡಬೇಕು’ ಎಂದರು. 

ಕವಯತ್ರಿ ಮಮತಾ ದೊಡ್ಡಮನಿ ಅವರು ತಮ್ಮ ಸಾಹಿತ್ಯ ಪಯಣವನ್ನು ವಿವರಿಸಿದರು. ಮುಖ್ಯಶಿಕ್ಷಕ ಡಿ.ಕೆ.ಕಲ್ಲೊಳ್ಳಿ, ಸಿಆರ್‌ಪಿ ಎಂ.ಐ.ಮುಗಳಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕವಿ ಎ.ಎಸ್.ಮಕಾನದಾರ ಅವರ ‘ದರ್ವೇಶಿ ಪದ್ಯಗಳು’ ಕೃತಿಯ ಮುಖಪುಟ ಅನಾವರಣಗೊಳಿಸಲಾಯಿತು.

ಭಾಗ್ಯಶ್ರೀ ಹುರಕಡ್ಡಿ, ಕೊಟ್ರೇಶ ಜವಳಿ, ರಮಾ ಚಿಗಟೇರಿ, ಆನಂದ ಹಕ್ಕೆನ್ನವರ, ಸುಷ್ಮಾ ಹುಚ್ಚಣ್ಣವರ, ಕವನ ವಾಚಿಸಿದರು. ನೀಲಮ್ಮ ಅಂಗಡಿ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್.ಬಾಪುರಿ ವಂದಿಸಿದರು.

ಸಾಹಿತ್ಯ ಸಂಸ್ಕೃತಿಯ ಚಟುವಟಿಕೆಗಳಲ್ಲಿ ತೊಡಗಿರುವ ಶಿಕ್ಷಕರನ್ನು ಇಲಾಖೆ ಗುರುತಿಸಿ ಗೌರವಿಸಬೇಕು. ಮಮತಾ ದೊಡ್ಡಮನಿ ಅವರು ದೈಹಿಕ ಶಿಕ್ಷಣ ಶಿಕ್ಷಕಿಯರಾಗಿದ್ದರೂ ಅವರ ಸಾಹಿತ್ಯ ಪ್ರೀತಿ ಮಾದರಿಯಾಗಿದೆ.
–ಡಿ.ಎಸ್.ತಳವಾರ ಗೌರವಾಧ್ಯಕ್ಷ ಸರ್ಕಾರಿ ನೌಕರರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.