ADVERTISEMENT

ಗದಗ| ಹೆಣ್ಣಿನ ಪಾಲಿನ ನಿಜಶಾರದೆ ಸಾವಿತ್ರಿ ಬಾಯಿ ಫುಲೆ: ಬಿಇಒ ವಿ.ವಿ. ನಡುವಿನಮನಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 3:10 IST
Last Updated 11 ಜನವರಿ 2026, 3:10 IST
ಗದಗ ನಗರದ ವೃತ್ತಿಪರ ಮಹಿಳಾ ವಸತಿ ನಿಲಯದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಅವರ 195ನೇ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಗದಗ ನಗರದ ವೃತ್ತಿಪರ ಮಹಿಳಾ ವಸತಿ ನಿಲಯದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಅವರ 195ನೇ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು   

ಗದಗ: ‘ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಅವರು ಹೆಣ್ಣುಮಕ್ಕಳ ಪಾಲಿಗೆ ನಿಜಶಾರದೆ ಆಗಿದ್ದಾರೆ’ ಎಂದು ಗದಗ ಗ್ರಾಮೀಣ ವಲಯ ಕ್ಷೇತ್ರಶಿಕ್ಷಣಾಧಿಕಾರಿ ವಿ.ವಿ. ನಡುವಿಮನಿ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ ಗದಗ ತಾಲ್ಲೂಕು ಘಟಕ ಹಾಗೂ ಡಾ. ಬಿ.ಆರ್‌.ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ವೃತ್ತಿಪರ ಮಹಿಳಾ ವಸತಿ ನಿಲಯದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಅವರ 195ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಒಂದು ಕಾಲಘಟ್ಟದಲ್ಲಿ ದೇಶದ ಮಹಿಳೆಯನ್ನು ಶಿಕ್ಷಣದಿಂದ ದೂರವಿರಿಸಿ ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಇದರ ವಿರುದ್ಧ ಧ್ವನಿಯೆತ್ತಿ ಹೆಣ್ಣುಮಕ್ಕಳಿಗೂ ಕೂಡ ಶಿಕ್ಷಣದ ಜತೆಗೆ ಸಮಾನತೆ ಸಿಗುವಂತೆ ಮಾಡುವಲ್ಲಿ ಸಾವಿತ್ರಿಬಾಯಿ ಫುಲೆ ಅವರ ಹೋರಾಟ ಅವಿಸ್ಮರಣೀಯ’ ಎಂದರು.

ADVERTISEMENT

ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ಎಸ್‌.ಎನ್‌.ಬಳ್ಳಾರಿ ಮಾತನಾಡಿ, ‘ಸಾವಿತ್ರಿಬಾಯಿ ಫುಲೆ ಅವರ ಜೀವನ ಪ್ರತಿಯೊಬ್ಬ ಸ್ವಾಭಿಮಾನಿ ಮಹಿಳೆಗೆ ಸ್ಪೂರ್ತಿಯಾಗಿದೆ. ಅವರ ಸಾಮಾಜಿಕ ಕಳಕಳಿ, ಮಹಿಳೆಯರ ಏಳಿಗೆಗೆ ಶ್ರಮಿಸಿದ ಪರಿ ಅದ್ಭುತ. ಪ್ರತಿಯೊಬ್ಬರೂ ಅವರ ಆದರ್ಶ ಪಾಲಿಸಬೇಕು’ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ನಂದಾ ಹಣಬರಟ್ಟಿ ಮಾತನಾಡಿ, ‘ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಉನ್ನತ ಗುರಿ ಹೊಂದಬೇಕು. ಛಲ, ನಿರಂತರ ಪರಿಶ್ರಮ ಇದ್ದರೆ ಅಸಾಧ್ಯವಾದುದು ಯಾವುದು ಇಲ್ಲ. ಸಾಧಿಸುವ ಚಲವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ದಲಿತ ನೌಕರರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರು ಮೇಲಿನಮನಿ, ಕಾರ್ಯದರ್ಶಿ ಮುತ್ತು ಮಾದರ, ತಾಲ್ಲೂಕು ಸಂಚಾಲಕ ವಿನಾಯಕ ಬಳ್ಳಾರಿ, ದಲಿತ ನಾಯಕ ಮಂಜುನಾಥ ಮುಳಗುಂದ ಹಾಗೂ ವಿದ್ಯಾರ್ಥಿ ನಾಯಕ ವಿಶಾಲ ಗೋಶಲ್ಲನವರ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಾಗರಾಜ ಗುತ್ತಿ ದಲಿತ ಕಲಾಮಂಡಳಿ ಸಂಚಾಲಕ ಅವರಿಂದ ಕ್ರಾಂತಿಗೀತೆ ಮೂಡಿಬಂದವು.

ಜಿಲ್ಲಾ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಕೃಷ್ಣ ಪೂಜಾರ ಸ್ವಾಗತಿಸಿದರು. ಹರೀಶ ಭಾವಿಮನಿ ವಂದಿಸಿದರು. ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಗೋಪಾಲ ಪವಾರ, ನಿಲಯ ಪಾಲಕರಾದ ಸುಜಾತಾ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.