ಗದಗ: ‘ಮೆಕ್ಕೆಜೋಳದ ಬೆಲೆ ವ್ಯತ್ಯಾಸ ಮೊತ್ತ ಪಾವತಿಯನ್ನು ಡಿಬಿಟಿ ಮೂಲಕ ರೈತರಿಗೆ ಪಾವತಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಪ್ರಸಕ್ತ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ದರ ಪ್ರತಿ ಕ್ವಿಂಟಲ್‌ಗೆ ₹1,900 ಇದೆ. ಈ ಸಾಲಿನ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ (ಪಿಡಿಪಿಎಸ್) ಯೋಜನೆ ಅಡಿ ಮೆಕ್ಕೆಜೋಳ ಖರೀದಿಸಲು ಮಾರುಕಟ್ಟೆ ಮಧ್ಯಪ್ರವೇಶ ದರ ಪ್ರತಿ ಕ್ವಿಂಟಲ್‌ಗೆ ₹2,150ರಂತೆ ಸರ್ಕಾರ ಜನವರಿ 4ರಿಂದ ಆದೇಶ ಹೊರಡಿಸಿದೆ. ವ್ಯತ್ಯಾಸದ ಮೊತ್ತ ₹250ಗಳನ್ನು ನಿಯಮಾನುಸಾರ ಅರ್ಹ ರೈತರಿಗೆ ತಲುಪಿಸುವ ಕ್ರಮ ಸರಿಯಾಗಿ ಆಗಬೇಕು’ ಎಂದು ಸೂಚಿಸಿದರು.
‘ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಮೆಕ್ಕೆಜೋಳ ಉತ್ಪನ್ನವನ್ನು ಗದಗ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಕೃಷಿ ಉತ್ಪನ್ನ ಮಾರುಕಟ್ಟೆ, ಉಪ ಮಾರುಕಟ್ಟೆಗಳಲ್ಲಿ ಯುಎನ್‌ಪಿ ವೇದಿಕೆ ಮೂಲಕ 3.86 ಲಕ್ಷ ಕ್ವಿಂಟಲ್ ವಹಿವಾಟು ಮಾಡಲು ತೀರ್ಮಾನಿಸಲಾಗಿದೆ. ಅದರಂತೆ ಕ್ರಮವಹಿಸಬೇಕು’ ಎಂದು ತಿಳಿಸಿದರು.
‘ಈ ಯೋಜನೆಯಿಂದ ಪ್ರತಿ ಎಕರೆಗೆ 12 ಕ್ವಿಂಟಲ್‌ನಂತೆ ಫ್ರೂಟ್ ತಂತ್ರಾಂಶದಲ್ಲಿ ಲಭ್ಯವಾಗುವ ರೈತರು ಹೊಂದಿರುವ ಜಮೀನಿನ ವಿಸ್ತಿರ್ಣಕ್ಕನುಗುಣವಾಗಿ ಪ್ರತಿ ರೈತರಿಗೆ ಗರಿಷ್ಠ 50 ಕ್ವಿಂಟಲ್‌ಗೆ ಮಿತಿಗೊಳಿಸಿ ವ್ಯತ್ಯಾಸದ ಮೊತ್ತವನ್ನು ನೀಡಬೇಕು. ಮೆಕ್ಕೆಜೋಳದ ಎಫ್‌ಎಕ್ಯು ಗುಣಮಟ್ಟ ಕಡ್ಡಾಯವಾಗಿ ಪರಿಶೀಲಿಸಿ ದೃಢೀಕರಿಸಲು ತಾಂತ್ರಿಕ ಅಧಿಕಾರಿಗಳನ್ನು ನೇಮಿಸಬೇಕು’ ಎಂದರು.
‘ಈ ಯೋಜನೆಯಡಿ ರೈತರ ನೋಂದಣಿ ಕಾರ್ಯವನ್ನು ಯೋಜನಾ ಅನುಷ್ಠಾನದ ಏಜೆನ್ಸಿ ವತಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಪಿಎಂಸಿ ಪ್ರಾಂಗಣದಲ್ಲಿ ತೆರೆಯುವ ಕೇಂದ್ರಗಳಲ್ಲಿ ಮಾತ್ರ ನೋಂದಾಯಿಸಬೇಕು’ ಎಂದು ತಿಳಿಸಿದರು.
ರಾಜ್ಯ ಸಹಕಾರ ಮಾರಾಟ ಮಂಡಳ ಮತ್ತು ಎಪಿಎಂಸಿ ಸಮಿತಿಯ ಕಾರ್ಯದರ್ಶಿಗಳು ದಿನಂಪ್ರತಿ ಆವಕವಾಗುವ ಮೆಕ್ಕೆಜೋಳದ ಉತ್ಪನ್ನದ ಪ್ರಮಾಣ, ವಹಿವಾಟಾದ ಪ್ರಮಾಣ ಮತ್ತು ರೈತರ ಸಂಖ್ಯೆ ಇತ್ಯಾದಿ ವಿವರಗಳನ್ನು ಅಂದಿನ ದಿನವೇ ಯುಎಂಪಿ ವೇದಿಕೆಯಲ್ಲಿ ದಾಖಲಿಸಬೇಕು ಎಂದು ಸೂಚಿಸಿದರು.
ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಸಹಕಾರ ಸಂಘಗಳ ಇಲಾಖೆ ಅಧಿಕಾರಿಗಳು, ಮಾರ್ಕೆಟಿಂಗ್ ಫೆಡರೇಷನ್ ಶಾಖಾ ವ್ಯವಸ್ಥಾಪಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಇದ್ದರು.
ಮೆಕ್ಕೆಜೋಳ ಉತ್ಪನ್ನದ ಮೊದಲ ವಹಿವಾಟು ಯುಎಂಪಿ ತಂತ್ರಾಂಶದಲ್ಲಿ ಆಗುವ ದಿನಾಂಕದಿಂದ ಒಂದು ತಿಂಗಳ ಅವಧಿಗೆ ಮಾತ್ರ ಈ ಯೋಜನೆ ಚಾಲ್ತಿಯಲ್ಲಿರುತ್ತದೆ. ಈ ಅವಧಿಯಲ್ಲಿಯೇ ಅರ್ಹ ರೈತರಿಗೆ ಸೌಲಭ್ಯ ದೊರಕಿಸಬೇಕುಸಿ.ಎನ್.ಶ್ರೀಧರ್, ಜಿಲ್ಲಾಧಿಕಾರಿ
ಈ ಯೋಜನೆ ಅಡಿ ಮೆಕ್ಕೆಜೋಳ ಖರೀದಿಗೆ ಜಿಲ್ಲೆಯ ಗದಗ , ನರಗುಂದ, ಲಕ್ಷ್ಮೇಶ್ವರ, ಮುಂಡರಗಿ, ಗಜೇಂದ್ರಗಡ ಎಪಿಎಂಸಿ ಪ್ರಾಂಗಣಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗುವುದುಸುಧಾ ಬಂಡಿ, ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.