ADVERTISEMENT

ನಿರೀಕ್ಷಿತ ಪ್ರಮಾಣದಲ್ಲಿ ಆಗದ ಅಭಿವೃದ್ಧಿ: ಸಾವು–ನೋವಿಗೂ ಸಾಕ್ಷಿಯಾದ ಗದಗ ಜಿಲ್ಲೆ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 29 ಡಿಸೆಂಬರ್ 2025, 4:30 IST
Last Updated 29 ಡಿಸೆಂಬರ್ 2025, 4:30 IST
ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗದಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಪ್ರಭಾರ ಸಿಇಒ ಆಗಿರುವ ಸಿ.ಎನ್‌.ಶ್ರೀಧರ್‌ ಪ್ರಶಸ್ತಿ ಸ್ವೀಕರಿಸಿದರು
ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗದಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಪ್ರಭಾರ ಸಿಇಒ ಆಗಿರುವ ಸಿ.ಎನ್‌.ಶ್ರೀಧರ್‌ ಪ್ರಶಸ್ತಿ ಸ್ವೀಕರಿಸಿದರು   

ಗದಗ: ಎರಡು ದಿನಗಳು ಕಳೆದರೆ ಹೊಸ ವರ್ಷ ಆರಂಭವಾಗಲಿದೆ. ಜಿಲ್ಲೆಯ ಜನರು ಹೊಸ ನಿರೀಕ್ಷೆಗಳೊಂದಿಗೆ 2026 ಅನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಈ ಹೊತ್ತಿನಲ್ಲಿ 2025ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ನಡೆದ ಪ್ರಮುಖ ವಿದ್ಯಮಾನಗಳ ಹಿನ್ನೋಟ ಇಲ್ಲಿದೆ.

ಸಿಎಂ ಸಿದ್ದರಾಮಯ್ಯ ಭೇಟಿ: 2025ನೇ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗದಗ ಜಿಲ್ಲೆಗೆ ಮೂರು ಬಾರಿ ಭೇಟಿ ನೀಡಿದ್ದರು.

ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ನಡೆಸಲು ಜೂನ್‌ 3ರಂದು ಚಾಲನೆ ನೀಡಿದ್ದರು. ಸೆ.20ರಂದು ಗದಗ ತಾಲ್ಲೂಕು ಕುರುಬರ ಸಂಘದ ರಜತ ಮಹೋತ್ಸವ ಹಾಗೂ ಡಿಸೆಂಬರ್‌ 13ರಂದು ಲಕ್ಷ್ಮೇಶ್ವರದಲ್ಲಿ ನಡೆದ ವಿಜ್ಞಾನ ವಿಸ್ತೃತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ADVERTISEMENT

‘ಚಾಲುಕ್ಯರು, ಹೊಯ್ಸಳರು, ವಿಜಯನಗರ, ಮೈಸೂರು ಸಂಸ್ಥಾನ ಸೇರಿದಂತೆ ಹಿಂದಿನ ಕಾಲದ ಸಾಂಸ್ಕೃತಿಕ ಸಂಪತ್ತು ಉಳಿಸಿಕೊಳ್ಳುವುದು ಅವಶ್ಯಕ. ದೇವಸ್ಥಾನಗಳ ರಕ್ಷಣೆ ಮಾಡುವ ಕೆಲಸವನ್ನು ಸರ್ಕಾರ ಮಾಡಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.

ಆದರೆ, ಉತ್ಖನನಕ್ಕೆ ಚಾಲನೆ ನೀಡಿದ್ದಷ್ಟೇ ಬಂತು; ಕೆಲಸ ಇನ್ನೂ ಆರಂಭಗೊಂಡಿಲ್ಲ.

ಕ್ಯಾಥ್‌ಲ್ಯಾಬ್‌ ಆರಂಭ: ಗದಗ ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ₹10 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಕ್ಯಾಥ್‌ಲ್ಯಾಬ್‌ ಸೌಲಭ್ಯ ಫೆಬ್ರುವರಿ 3ರಂದು ಲೋಕಾರ್ಪಣೆಗೊಂಡಿತು.

ಜಿಮ್ಸ್‌ ಹೆಸರು ಬದಲಾವಣೆ: ಜಟಾಪಟಿ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹೆಸರನ್ನು ಕೆ.ಎಚ್‌. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಎಂದು ಮರುನಾಮಕರಣ ಮಾಡಲಾಯಿತು.

ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ಪತ್ರ ಚಳವಳಿ ಸೇರಿದಂತೆ ವಿವಿಧ ರೀತಿಯಲ್ಲಿ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಮ್ಸ್‌ಗೆ ಕೆ.ಎಚ್‌. ಪಾಟೀಲ ಹೆಸರಿಡಲು ಕ್ರಮವಹಿಸುವುದಾಗಿ ಮಾರ್ಚ್‌ 16ರಂದು ಘೋಷಿಸಿದರು. ಬಳಿಕ ಹೆಸರು ಬದಲಾಯಿತು.

ವೈದ್ಯಕೀಯ ವಿಜ್ಞಾನದ ಆಸಕ್ತಿ ತಣಿಸಿದ ಮೆಡಿವಿಜನ್‌: ಜುಲೈ 21ರಿಂದ ಮೂರು ದಿನಗಳು ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಮೆಡಿವಿಜನ್‌ ಸಾವಿರಾರು ವಿದ್ಯಾರ್ಥಿಗಳ ವಿಜ್ಞಾನದ ಆಸಕ್ತಿ ತಣಿಸಿತು. ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ದೂರದೃಷ್ಟಿತ್ವ ಹಾಗೂ ಕಾರ್ಯಕ್ರಮ ಆಯೋಜನೆಯಲ್ಲಿನ ಅಚ್ಚುಕಟ್ಟುತನ ಗಮನ ಸೆಳೆಯಿತು.

ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ: ಹಲವು ತಿಂಗಳುಗಳಿಂದ ಮುಂದೂಡಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಂತಿಮವಾಗಿ ಜ.20ರಂದು ಗಜೇಂದ್ರಗಡದಲ್ಲಿ ನಡೆಯಿತು. ಸಾಹಿತಿ ಪ್ರೊ. ಚಂದ್ರಶೇಖರ ವಸ್ತ್ರದ ಸಮ್ಮೇಳನದ ಅಧ್ಯಕ್ಷರಾಗಿದ್ದರು. ರೋಣ ಶಾಸಕ ಜಿ.ಎಸ್‌. ಪಾಟೀಲ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಕನ್ನಡ ಜಾತ್ರೆ ಅಚ್ಚುಕಟ್ಟಾಗಿ ನೆರವೇರಿತು.

ಫೆಬ್ರುವರಿ 20ರಂದು ಗಜೇಂದ್ರಗಡ ತಾಲ್ಲೂಕು ಸಾಹಿತ್ಯ ಸಮ್ಮೇಳನ ನರೇಗಲ್‌ನಲ್ಲಿ ಹಾಗೂ ಏಪ್ರಿಲ್‌ 18ರಂದು ಗದಗ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕುರ್ತಕೋಟಿಯಲ್ಲಿ ನಡೆದವು.

ಪ್ರಭುವಿನೆಡೆ ಪ್ರಜಾಪ್ರಭುತ್ವ: ‘ದೇಶದಲ್ಲೇ ಮೊದಲು’ ಖ್ಯಾತಿಯ ಗದಗ ಜಿಲ್ಲೆ 2025ನೇ ಸಾಲಿನಲ್ಲಿ ಮತ್ತೊಂದು ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

ಪ್ರಜೆಗಳ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ‘ಪ್ರಭುವಿನೆಡೆ ಪ್ರಜಾಪ್ರಭುತ್ವ’ ಎಂಬ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಆಗಸ್ಟ್‌ 15ರಂದು ಚಾಲನೆ ನೀಡಿದ್ದರು.

‘ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡುವ ‘ಪ್ರಭುವಿನೆಡೆ ಪ್ರಜಾಪ್ರಭುತ್ವ’ ಕಾರ್ಯಕ್ರಮ ದೇಶದಲ್ಲೇ ಮೊದಲು’ ಎಂದು ಹೇಳಿದ್ದರು. ಸದ್ಯ ಗದಗ ನಗರದಲ್ಲಿ ಆರು ಎಸ್‌ಒಎಸ್‌ಗಳು (ಬಟನ್‌ ಒತ್ತಿ ದೂರು ಸಲ್ಲಿಸುವ ಯಂತ್ರ) ಕಾರ್ಯನಿರ್ವಹಿಸುತ್ತಿವೆ.

ರೈತರಿಗೆ ಸಂಕಷ್ಟ ತಂದ ಅತಿವೃಷ್ಟಿ: ಗದಗ ಜಿಲ್ಲೆಯಲ್ಲಿ ಜೂನ್‌, ಆಗಸ್ಟ್‌ನಲ್ಲಿ ಸುರಿದ ಅತಿಯಾದ ಮಳೆಯಿಂದ ರೈತರಿಗೆ ಭಾರಿ ಹಾನಿಯಾಯಿತು.

ಪ್ರಸಕ್ತ ವರ್ಷ ಉತ್ತಮ ಮಳೆ ಜೊತೆಗೆ ಆರಂಭವಾಗಿದ್ದ ಮುಂಗಾರು ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಮುಂಗಾರು ಹಂಗಾಮಿನಲ್ಲಿ ಹೆಸರು, ಗೋವಿನ ಜೋಳ, ಶೇಂಗಾ, ಹತ್ತಿ ಬೀಜ ಬಿತ್ತನೆ ಮಾಡಿದ್ದರು. ಹೆಸರು ಬೆಳೆ ಸಮೃದ್ದವಾಗಿ ಬೆಳೆದಿತ್ತು. ಆದರೆ, ನಿರಂತರವಾಗಿ ಸುರಿದ ಮಳೆಗೆ ಫಸಲು ಸಂಪೂರ್ಣ ನೆಲಕಚ್ಚಿತು. ಗೋವಿನಜೋಳ, ಹತ್ತಿ ಹಾಗೂ ಉಳ್ಳಾಗಡ್ಡಿ ಬೆಳೆಗಳಿಗೂ ಹಾನಿಯಾಯಿತು. ಬೆಣ್ಣೆಹಳ್ಳ, ಮಲಪ್ರಭಾ ಹಾಗೂ ತುಂಗಭದ್ರಾ ನದಿ ಪಾತ್ರದ ರೈತರು ಹೆಚ್ಚಿನ ಹಾನಿ ಅನುಭವಿಸಿದರು.

ಬೆಳೆಹಾನಿ ಪರಿಹಾರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣಕ್ಕೆ ಮನನೊಂದ ನರಗುಂದ ತಾಲ್ಲೂಕಿನ ಬೆಳ್ಳೇರಿ ಗ್ರಾಮದ ರೈತ ಸಿದ್ದನಗೌಡ ಹಿರೇಗೌಡ್ರ ನ.5ರಂದು ಕೊಣ್ಣೂರಿನ ನಾಡಕಚೇರಿಯ ಕಂದಾಯ ನಿರೀಕ್ಷಕರೇ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.

ಜಲ ಸಂರಕ್ಷಣೆ– ಗದಗ ರಾಜ್ಯಕ್ಕೆ ಪ್ರಥಮ: ಜಲಶಕ್ತಿ ಅಭಿಯಾನದ ಮಹತ್ವದ ಭಾಗವಾಗಿರುವ ‘ಜಲಸಂಚಾಯಿ ಜನಭಾಗಿದಾರಿ 1.0’ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆ ಐತಿಹಾಸಿಕ ಸಾಧನೆ ಮಾಡಿತ್ತು.

ಜಲ ಸಂರಕ್ಷಣೆ ಕಾಮಗಾರಿಗಳ ಅನುಷ್ಠಾನದಲ್ಲಿ ಗದಗ ಜಿಲ್ಲೆಯು ಕರ್ನಾಟಕದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ದೇಶದ 780 ಜಿಲ್ಲೆಗಳಲ್ಲಿ (ಝೋನ್ 3, ಕೆಟಗರಿ 3ರಲ್ಲಿ) ನಾಲ್ಕನೇ ಸ್ಥಾನ ಪಡೆಯುವ ಮೂಲಕ ₹25 ಲಕ್ಷ ನಗದು ಬಹುಮಾನಕ್ಕೆ ಭಾಜನವಾಗಿದೆ.

ಮೇಲ್ದರ್ಜೆಗೇರಿದ ಗದಗ ಜಂಕ್ಷನ್‌: ಅಮೃತ ಭಾರತ ಸ್ಟೇಷನ್‌ ಯೋಜನೆ (ಎಬಿಎಸ್‌ಎಸ್‌) ಅಡಿ ಪುನಾರ್‌ ಅಭಿವೃದ್ಧಿಗೊಂಡಿದ್ದ ಗದಗ ಜಂಕ್ಷನ್‌ ಮೇ 22ರಂದು ಜನರ ಬಳಕೆಗೆ ಮುಕ್ತಗೊಂಡಿತು.

₹23.24 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡಿದ್ದ ಗದಗ ಜಂಕ್ಷನ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್‌ ಆಗಿ ಉದ್ಘಾಟಿಸಿದ್ದರು.

ಈ ವರ್ಷವೂ ಪೂರ್ಣಗೊಳ್ಳದ ಸ್ಮಾರಕ ಭವನ: ಪಂಡಿತ್‌ ಪುಟ್ಟರಾಜ ಕವಿ ಗವಾಯಿಗಳ ಸ್ಮಾರಕ ಭವನ ನಿರ್ಮಾಣ ಕಾಮಗಾರಿ ಆರಂಭಗೊಂಡು 11 ವರ್ಷಗಳು ಕಳೆದಿವೆ. ‘ಏನೇ ಆಗಲಿ ಈ ವರ್ಷ ಅಗತ್ಯ ಅನುದಾನ ಒದಗಿಸಿ, ಕಟ್ಟಡ ಪೂರ್ಣಗೊಳಿಸಲಾಗುವುದು’ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಅವರ ಭರವಸೆ ಈಡೇರಲಿಲ್ಲ.

ತಾರ್ಕಿಕ ಅಂತ್ಯ ಕಾಣದ ಪ್ರತಿಭಟನೆಗಳು: ಬಗರ್‌ಹುಕುಂ ಸಾಗುವಳಿದಾರರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯಕ್ಕಾಗಿ ಜಮೀನು ಕಳೆದುಕೊಂಡ ರೈತರಿಗೆ ಸರ್ಕಾರ ತಕ್ಷಣವೇ ನ್ಯಾಯ ಒದಗಿಸಬೇಕು ಹಾಗೂ ಒಳಮೀಸಲಾತಿ ವರ್ಗೀಕರಣ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಿದ ಪ್ರತಿಭಟನೆ ಸೇರಿದಂತೆ ಹಲವು ಪ್ರತಿಭಟನೆಗಳು ಅನಿರ್ದಿಷ್ಟಾವಧಿವರೆಗೆ ನಡೆದರೂ ತಾರ್ಕಿಕ ಅಂತ್ಯ ಕಾಣಲಿಲ್ಲ. ಸಚಿವರು, ಅಧಿಕಾರಿಗಳ ಭರವಸೆ ಮಾತಿನ ಮೇಲೆ ನಂಬಿಕೆ ಇಟ್ಟು ಪ್ರತಿಭಟನೆ ಹಿಂಪಡೆಯಲಾಯಿತು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ನಡೆಸಿದ ಹೋರಾಟಕ್ಕೂ ಸರ್ಕಾರ ಸ್ಪಂದಿಸಲಿಲ್ಲ.

ಬೆಚ್ಚಿ ಬೀಳಿಸಿದ ಕೊಲೆ ಪ್ರಕರಣಗಳು: ವರದಕ್ಷಿಣೆಗಾಗಿ ಕಿರುಕುಳ ಕೊಟ್ಟು ಕೊಲೆ ಮಾಡಿ ಮನೆಯ ಮುಂದಿನ ನೀರಿನ ಟ್ಯಾಂಕಿನಲ್ಲಿ ಹಾಕಿದ ದುರ್ಘಟನೆ ಶಿರಹಟ್ಟಿ ತಾಲ್ಲೂಕಿನ ಮಜ್ಜೂರು ತಾಂಡಾದಲ್ಲಿ ಅಕ್ಟೋಬರ್‌ 15ರಂದು ನಡೆದಿತ್ತು. ಪ್ರಿಯಾಂಕ ಮಹಾಂತೇಶ ಲಮಾಣಿ (22) ಕೊಲೆಯಾದ ಮಹಿಳೆ.

ಅ.8ರಂದು ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಮೇಲೆ ಬೀಸುವ ಕಲ್ಲನ್ನು ಎತ್ತಿಹಾಕಿ, ಬಳಿಕ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ ಘಟನೆ ಗದಗ ತಾಲ್ಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ನಡೆದಿತ್ತು. ಸ್ವಾತಿ ಅಲಿಯಾಸ್‌ ಯಲ್ಲಮ್ಮ (44) ಕೊಲೆಯಾದ ಮಹಿಳೆ. ಗದಗ ಸಾರಿಗೆ ಡಿಪೊದಲ್ಲಿ ನಿರ್ವಾಹಕನಾಗಿ ಕೆಲಸ ನಿರ್ವಹಿಸುತ್ತಿದ್ದ ರಮೇಶ್‌ ನರಗುಂದ ಆರೋಪಿ.

ನರಗುಂದ ಪಟ್ಟಣದ ಸವದತ್ತಿ ರಸ್ತೆಯಲ್ಲಿರುವ ತಾಜ್ ಹೊಟೇಲ್‌ನಲ್ಲಿ ಊಟ ಮಾಡುತ್ತಿದ್ದ ಯುವಕನನ್ನು ಕಿಡಿಗೇಡಿಗಳು ಆಗಸ್ಟ್‌ 13ರಂದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿತ್ತು. ಬಸವರಾಜ ಬಾಳಪ್ಪ ಮಮಟಗೇರಿ (24) ಕೊಲೆಯಾದ ಯುವಕ.

ಗೆಳತಿಯನ್ನೇ ಕೊಂದು ಹೂತು ಹಾಕಿದ ಪ್ರೇಮಿಯನ್ನು ಗದಗ ಜಿಲ್ಲಾ ಪೊಲೀಸರು ಜೂನ್‌ 14ರಂದು ಬಂಧಿಸಿದ್ದರು. ಸತೀಶ ಹಿರೇಮಠ ಕೊಲೆ ಆರೋಪಿ.

ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ: ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ, ಆಕೆಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದರಿಂದ ಅಪರಾಧಿ ಲಕ್ಷ್ಮಣ ಕೊರವರಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ 20 ವರ್ಷ ಕಠಿಣ ಶಿಕ್ಷೆ ಹಾಗೂ ₹56 ಸಾವಿರ ದಂಡ ವಿಧಿಸಿ ಮೇ 14ರಂದು ತೀರ್ಪು ಪ್ರಕಟಿಸಿತ್ತು.

ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರವಿ ಮಾದರ ಎಂಬುವನಿಗೆ ಜೀವಾವಧಿ ಶಿಕ್ಷೆ, ₹2.35 ಲಕ್ಷ ದಂಡ ಹಾಗೂ ಸಂತ್ರಸ್ತ ಬಾಲಕಿ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿ ತೀರ್ಪು ಪ್ರಕಟವಾಗಿತ್ತು.

14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಸಾಬೀತಾಗಿದ್ದರಿಂದ ಗದಗ ನಗರದ ಪಂಚಾಕ್ಷರಿ ನಗರದ ನಿವಾಸಿ ಕಾರ್ತಿಕ ನಾಗರಾಜಗೆ 20 ವರ್ಷ ಜೈಲು ಶಿಕ್ಷೆ ನೀಡಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಏ.15ರಂದು ತೀರ್ಪು ನೀಡಿತ್ತು.

ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಸಾಬೀತಾದ ಕಾರಣ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಅಪರಾಧಿಗೆ 20 ವರ್ಷದ ಜೈಲು, ₹5 ಲಕ್ಷ ದಂಡ ವಿಧಿಸಿ ಮಾರ್ಚ್‌ 21 ಆದೇಶ ನೀಡಿತ್ತು. ಸಿದ್ಧಪ್ಪ ಪರಸಪ್ಪ ಮಾಗಡಿ (38) ಶಿಕ್ಷೆಗೆ ಗುರಿಯಾದ ವ್ಯಕ್ತಿ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಅಮರೇಶ ಉಮಾಪತಿ ಹಿರೇಮಠ ವಾದ ಮಂಡಿಸಿದ್ದರು.

ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ ಆರೋಪಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಮಾರ್ಚ್‌ 29ರಂದು ಜೀವಾವಧಿ ಶಿಕ್ಷೆ ವಿಧಿಸಿದ್ದರು. ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಮಲ್ಲಾಪುರ ಗ್ರಾಮದ ವೀರಯ್ಯ ಶಿವಯ್ಯ ಹಿರೇಮಠ ಶಿಕ್ಷೆಗೆ ಒಳಗಾದ ಅಪರಾಧಿ.

ಒಂಟಿ ಮಹಿಳೆ ಇರುವ ಮನೆಗೆ ನುಗ್ಗಿ ದರೋಡೆ ಜತೆಗೆ ಕೊಲೆ ಮಾಡಿದ ಆರೋಪ ಸಾಬೀತಾದ ಕಾರಣ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಐವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಾರ್ಚ್‌ 24ರಂದು ಆದೇಶ ನೀಡಿತ್ತು. ಶಂಕ್ರಪ್ಪ ಶಿವಪ್ಪ ಹರಣಶಿಕಾರಿ, ಚಂದ್ರಪ್ಪ ಹರಣಶಿಕಾರಿ, ಮಾರುತಿ ಚನ್ನಪ್ಪ ರೋಣ, ಮನ್ನಪ್ಪ ರೋಣ, ಮೋಹನ ರೋಣ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗಳು.

ಸರ್ಕಾರದ ಪರವಾಗಿ ಗದಗ ಅಭಿಯೋಜಕರಾದ ಸವಿತಾ ಎಂ. ಶಿಗ್ಲಿ ವಾದ ಮಂಡಿಸಿದ್ದರು.

2017ರ ಫೆಬ್ರುವರಿ 5ರಂದು ಲಕ್ಷ್ಮೇಶ್ವರ ಪಟ್ಟಣದ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 112 ಜನರ ವಿರುದ್ಧ ದಾಖಲಾಗಿದ್ದ ‍ಪ್ರಕರಣದಲ್ಲಿ, 23 ಮಂದಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಮಾರ್ಚ್‌ 10ರಂದು ಶಿಕ್ಷೆ ಪ್ರಕಟಿಸಿತ್ತು.

ಕಪ್ಪತಗುಡ್ಡದಲ್ಲಿರುವ ಸೆಲ್ಫಿ ಪಾಯಿಂಟ್‌
ಹೆದ್ದಾರಿಯಲ್ಲಿ ನಿರ್ಮಾಣಗೊಳ್ಳಲಿರುವ ಗದಗ ಮೃಗಾಲಯದ ಹೊಸ ಪ್ರವೇಶದ್ವಾರದ ಉದ್ದೇಶಿತ ವಿನ್ಯಾಸ
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಡೆದ ಮೆಡಿವಿಜನ್‌ನಲ್ಲಿ ಭಾಗವಹಿಸಿದ್ದ ಮಕ್ಕಳು
ಮುಳಗುಂದ ವ್ಯಾಪ್ತಿಯಲ್ಲಿ ನಿರಂತರ ಮಳೆ ಸುರಿದ ಪರಿಣಾಮ ಕಟಾವಿಗೆ ಬಂದಿದ್ದ ಹೆಸರು ಹಾನಿಯಾಗಿರುವುದು
ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿನ ಉತ್ಖನನ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು
ಅಮೃತ್‌ ಭಾರತ್‌ ಸ್ಟೇಷನ್‌ ಯೋಜನೆ ಅಡಿ ಅಭಿವೃದ್ಧಿಗೊಂಡಿರುವ ಗದಗ ಜಂಕ್ಷನ್‌
ಗದಗ ಬೆಟಗೇರಿ ನಗರಸಭೆ
ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ಲಕ್ಷ್ಮೇಶ್ವರದ ರೈತರು ದೀಡ್ ನಮಸ್ಕಾರ ಹಾಕುವುದರ ಮೂಲಕ ಗಮನ ಸೆಳೆದರು
ಮೊಮ್ಮಗ ಧವನ್‌ ಜತೆಗೆ ಜನರತ್ತ ಕೈಬೀಸಿದ ಸಿಎಂ ಸಿದ್ದರಾಮಯ್ಯ

ಗದಗ ಬೆಟಗೇರಿ ನಗರಸಭೆ: ‘ಕೈ’ಯಾರೆ ಅಧಿಕಾರ ಕಳೆದುಕೊಂಡ ಬಿಜೆಪಿ

ನಕಲಿ ಠರಾವು ಸೃಷ್ಟಿಸಿ ಅದಕ್ಕೆ ಪ್ರಭಾರ ಪೌರಾಯುಕ್ತರ ಸಹಿ ಫೋರ್ಜರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಫೆಬ್ರುವರಿ 15ರಂದು ಬಿಜೆಪಿಯ ಉಷಾ ದಾಸರ ಅನಿಲ್‌ ಅಬ್ಬಿಗೇರಿ ಮತ್ತು ಗೂಳಪ್ಪ ಮುಶಿಗೇರಿ ಅವರ ಸದಸ್ಯತ್ವ ರದ್ದುಗೊಳಿಸಿ ಆದೇಶಿಸಿದ್ದರು. ಈ ಘಟನೆ ನಂತರ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದವು. ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ಕೊಡಬೇಕು ಎಂದು ಬಿಜೆಪಿಯ ಈ ಮೂವರು ಧಾರವಾಡದ ಹೈಕೋರ್ಟ್‌ ಪೀಠಕ್ಕೆ ಅರ್ಜಿ ಸಲ್ಲಿಸಿದರು. ಕಾಂಗ್ರೆಸ್‌ನಿಂದಲೂ ಪ್ರತಿತಂತ್ರಗಳು ನಡೆದವು. ಅಂತಿಮವಾಗಿ ಚುನಾವಣೆ ನಡೆಯಿತು. ಸಂಖ್ಯಾ ಬಲ ಕಳೆದುಕೊಂಡಿದ್ದರಿಂದ ನಗರಸಭೆ ಗದ್ದುಗೆ ಕಾಂಗ್ರೆಸ್‌ ಪಾಲಾಯಿತು. ಈ ಘಟನೆ ಬಳಿಕ ಮತ್ತೇ ಚುನಾವಣೆ ನಡೆಸುವಲ್ಲಿ ನ್ಯಾಯಾಂಗದ ಆದೇಶ ಉಲ್ಲಂಘನೆ ಆಗಿದೆ ಎಂದು ಕೋರ್ಟ್‌ನಿಂದ ಅಧಿಕಾರಿಗಳಿಗೆ ನೋಟಿಸ್‌ ಜಾರಿಯಾಯಿತು. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿರುವುದರಿಂದ ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳ ಆಡಳಿತ ಇಲ್ಲವಾಗಿದೆ. ಸದ್ಯಕ್ಕೆ ಜಿಲ್ಲಾಧಿಕಾರಿಯೇ ಆಡಳಿತಾಧಿಕಾರಿ ಆಗಿದ್ದಾರೆ. ಹೀಗೆ ಸಂಖ್ಯಾ ಬಲ ಹೊಂದಿದ್ದರೂ ನಕಲಿ ಠರಾವು ಸೃಷ್ಟಿಸಿದ ಆರೋಪ ಬಿಜೆಪಿಗೆ ಉರುಳಾಗಿ ಸುತ್ತಿಕೊಂಡಿತು. ಎರಡನೇ ಅವಧಿಯಲ್ಲಿ ಅಧಿಕಾರದಿಂದ ದೂರ ಉಳಿಯುವಂತೆ ಮಾಡಿತು. 

ರಾಜ್ಯದ ಗಮನ ಸೆಳೆದ ರೈತ ಹೋರಾಟ

ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ರೈತರು ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್‌ ಬಳಿ ನವೆಂಬರ್‌ 16ರಿಂದ ಡಿಸೆಂಬರ್‌ 1ರವರೆಗೆ ಸತತ 17 ದಿನಗಳವರೆಗೆ ಅನಿರ್ದಿಷ್ಟಾವಧಿ ಧರಣಿ ಮಾಡಿದ್ದರು. ಉತಾರ ಚಳವಳಿ ಬಾರುಕೋಲು ಚಳವಳಿ ರಸ್ತೆಯಲ್ಲೇ ಹೋಮ ಮೆಕ್ಕೆಜೋಳ ಸುರಿದು ರಸ್ತೆ ತಡೆ ಹೀಗೆ ಪ್ರತಿದಿನ ವಿನೂತನ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಇಲ್ಲಿ ಆರಂಭಗೊಂಡ ಹೋರಾಟದ ಕಿಚ್ಚು ರಾಜ್ಯದ ವಿವಿಧ ಜಿಲ್ಲೆಗಳಿಗೂ ಹಬ್ಬಿತ್ತು. ಅಂತಿಮವಾಗಿ ರೈತರ ಸಂಘಟಿತ ಹೋರಾಟಕ್ಕೆ ಯಶಸ್ಸು ಸಿಕ್ಕಿತು. ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಿತು. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ರೈತರಿಂದ ನಡೆದ ದೀರ್ಘ ಹೋರಾಟ ಇದಾಗಿದೆ. ಮುಂದುವರಿದ ಮಹದಾಯಿ ಕಳಸಾ ಬಂಡೂರಿ ಹೋರಾಟ: ಗದಗ ಬೆಳಗಾವಿ ಧಾರವಾಡ ಬಾಗಲಕೋಟೆ ಜಿಲ್ಲೆಗಳ 11 ತಾಲ್ಲೂಕಿನಲ್ಲಿ ಹರಿಯುತ್ತಿರುವ ಮಲಪ್ರಭಾ ನದಿಗೆ ಮಹದಾಯಿ ನದಿ ಹಾಗೂ ಕಳಸಾ ಬಂಡೂರಿ ನಾಲೆಗಳನ್ನು ಜೋಡಿಸಿ ಈ ಭಾಗದ ಜಮೀನುಗಳಿಗೆ ನೀರಾವರಿ ರೂಪಿಸುವ ಮಹದಾಯಿ ಕಳಸಾ ಬಂಡೂರಿ ಯೋಜನೆ ಇಂದಿಗೂ ಕನಸಾಗಿಯೇ ಉಳಿದಿದೆ. ಯೋಜನೆ ಅನುಷ್ಟಾನಕ್ಕಾಗಿ ನಾಲ್ಕು ದಶಕಗಳಿಂದ ರೈತರ ಹೋರಾಟ ನಡೆದೇ ಇದೆ. 

ಅರಣ್ಯ ಇಲಾಖೆ: ಭರವಸೆಯ ಯೋಜನೆಗಳು

ಗದಗ ಸೇರಿದಂತೆ ಸುತ್ತಲಿನ ಐದಾರು ಜಿಲ್ಲೆಗಳಿಗೆ ಜೀವದಾಯಿ ಆಗಿರುವ ಕಪ್ಪತಗುಡ್ಡ ವನ್ಯಜೀವಿಧಾಮದಲ್ಲಿ ಬದಲಾವಣೆ ಪರ್ವ ಆರಂಭಗೊಂಡಿದೆ. ಪ್ರಾಣಿಗಳ ಸಂಖ್ಯೆಯೂ ವೃದ್ಧಿಸಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇದನ್ನು ಮತ್ತೊಂದು ಹಂತ ಮೇಲಕ್ಕೆ ಕೊಂಡೊಯ್ಯುವ ಹೆಜ್ಜೆ ಸರ್ಕಾರದಿಂದ ಆಗಿದೆ. ‘ಒಂದು ಜಿಲ್ಲೆ ಒಂದು ತಾಣ’ ಪರಿಕಲ್ಪನೆ ಅಡಿ ಕ‌ಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮ ಉತ್ತೇಜನಕ್ಕೆ ಗದಗ ಅರಣ್ಯ ಇಲಾಖೆ ₹18.26 ಕೋಟಿಯ ಮಾಸ್ಟರ್‌ ‍ಪ್ಲ್ಯಾನ್‌ ಸಿದ್ಧಪಡಿಸಿದೆ. ಔಷಧೀಯ ಸಸ್ಯಗಳ ಪ್ರವಾಸೋದ್ಯಮ ಗೋಲ್ಡ್‌ ಟೂರಿಸಂ ರೋಮಾಂಚನಕಾರಿ ಮೈನಿಂಗ್‌ ಟೂರಿಸಂಗೂ ಅವಕಾಶ ಸಿಗಲಿದೆ. ಪ್ರತಿ ವರ್ಷ ಎರಡು ಲಕ್ಷಕ್ಕೂ ಅಧಿಕ ಪ್ರವಾಸಿಗರನ್ನು ಸೆಳೆಯುವ ಇಲ್ಲಿನ ಗದಗ ಮೃಗಾಲಯವನ್ನು ಹುಬ್ಬಳ್ಳಿ– ಹೊಸಪೇಟೆ ಹೆದ್ದಾರಿವರೆಗೆ ವಿಸ್ತರಿಸಲು ಅರಣ್ಯ ಇಲಾಖೆ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರ ಯೋಜನೆ ರೂಪಿಸಿದೆ. ಪ್ರಸ್ತುತ 40.02 ಎಕರೆಯಲ್ಲಿರುವ ಗದಗ ಮೃಗಾಲಯವು ಹೊಸ ಸೌಲಭ್ಯಗಳ ಜತೆಗೆ 13.20 ಎಕರೆಯಷ್ಟು ವಿಸ್ತಾರಗೊಳ್ಳಲಿದೆ. ಕರ್ನಾಟಕ ಅರಣ್ಯ ಇಲಾಖೆ ಕರ್ನಾಟಕ ಮೃಗಾಲಯ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕಪ್ಪತ್ತಗುಡ್ಡ ಜೆಎಲ್​ಆರ್​ ಪ್ರಕೃತಿ ಶಿಬಿರದ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.